
ಮೈಸೂರು: ಚಾಮುಂಡಿಬೆಟ್ಟದಲ್ಲಿ ಸೋಮವಾರ ಬೆಟ್ಟದ ನಿವಾಸಿಗಳು, ಶ್ರೀರಂಗಪಟ್ಟಣ ಹನುಮ ಮಾಲದಾರಿಗಳ ಸಮಿತಿ ಸದಸ್ಯರ ಪ್ರತಿಭಟನೆ ನಡುವೆಯೇ ‘ಪ್ರಸಾದ್ ಯೋಜನೆ’ಯಡಿ ವಿವಿಧ ಅಭಿವೃದ್ಧಿ ಕಾರ್ಯಗಳು ಪೊಲೀಸ್ ಭದ್ರತೆಯಲ್ಲಿ ಪುನರಾರಂಭಗೊಂಡವು.
ಬೆಟ್ಟದಲ್ಲಿ ₹ 36 ಕೋಟಿ ವೆಚ್ಚದಲ್ಲಿ ಜ.8ರಂದೇ ಅಭಿವೃದ್ಧಿ ಕಾಮಗಾರಿ ಶುರುವಾಗಿದ್ದು, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಸುಸಜ್ಜಿತ ವೇದಿಕೆ ನಿರ್ಮಿಸಲಾಗುತ್ತಿದೆ.
‘ದೇವಾಲಯಕ್ಕೆ ತೊಂದರೆಯಾಗುವುದರಿಂದ ಯೋಜನೆ ಜಾರಿಗೊಳಿಸಬಾರದು’ ಎಂಬ ವಿರೋಧ ಹಿನ್ನಲೆಯಲ್ಲಿ ಜಿಲ್ಲಾಲಳಿತದ ಸೂಚನೆಯಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆಯಿತು.
ಪ್ರತಿಭಟನಾಕಾರರು ಗ್ರಾಮ ಪಂಚಾಯಿತಿ ಕಚೇರಿ ಬಳಿ ಸೇರಿ ಜಿಲ್ಲಾಡಳಿತ ಮತ್ತು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ದೇವಸ್ಥಾನದ 20 ಮೀಟರ್ ದೂರದಲ್ಲೇ ಭೂಮಿ ಅಗೆಯುತ್ತಿರುವುದರಿಂದ ರಾಜಗೋಪುರಕ್ಕೆ ಹಾನಿಯಾಗುತ್ತದೆ. 200 ವರ್ಷ ಹಳೆಯ ಪುರಾತನ ಕಲ್ಲು, ಮಣ್ಣು ತೆಗೆದಿದ್ದಾರೆ. ಗ್ರಾಮಸ್ಥರು ಆತಂಕ ಕಡೆಗಣಿಸಲಾಗಿದೆ’ ಎಂದು ಸಮಿತಿಯ ಸಂಚಾಲಕ ಲೋಹಿತ್ ಅರಸ್ ದೂರಿದರು.
‘ಪಾರಂಪರಿಕ ಸ್ವರೂಪ ರಕ್ಷಿಸಬೇಕು ಎಂದು ಯೋಜನೆಯಲ್ಲಿ ಸ್ಪಷ್ಟಪಡಿಸಿದ್ದರೂ ನಿರ್ಲಕ್ಷ್ಯಿಸಲಾಗಿದೆ. ಕಾಮಗಾರಿ ಕೈಬಿಡುವರೆಗೂ ಹೋರಾಟ ಮುಂದುವರೆಯುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.