ADVERTISEMENT

ಚಾಮುಂಡಿಗೆ ದಶ ಅಲಂಕಾರ; ಬೆಟ್ಟಕ್ಕೆ ಬರಲಿದೆ ಭಕ್ತ ಸಾಗರ

ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರೆಗೆ ಚಾಲನೆ

ಡಿ.ಬಿ, ನಾಗರಾಜ
Published 29 ಸೆಪ್ಟೆಂಬರ್ 2019, 20:15 IST
Last Updated 29 ಸೆಪ್ಟೆಂಬರ್ 2019, 20:15 IST
ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಕಲಾ ತಂಡಗಳ ಕಲರವಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.
ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಕಲಾ ತಂಡಗಳ ಕಲರವಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.   

ಮೈಸೂರು: ನಾಡಹಬ್ಬ ಮೈಸೂರು ದಸರಾಗೆ ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಚಾಲನೆ ದೊರಕಿತು. ಇದರ ಜತೆಗೆ ಚಾಮುಂಡೇಶ್ವರಿಯ ನವರಾತ್ರಿ ಉತ್ಸವವೂ ಆರಂಭಗೊಂಡಿತು.

ಭಾನುವಾರ ನಸುಕಿನ 4.30ಕ್ಕೆ ದೇವಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ನವರಾತ್ರಿಯ ಮೊದಲ ದಿನದ ಬ್ರಾಹ್ಮೀ ಅಲಂಕಾರ ಮಾಡಲಾಗಿತ್ತು. ಯಂತ್ರ ಪೂಜೆ, ಕಳಸ ಸ್ಥಾಪನೆ, ನವಗ್ರಹ ಪೂಜೆ ನೆರವೇರಿಸಲಾಯಿತು. ಶ್ವೇತ ವರ್ಣದ ಕೆಂಪಂಚಿನ ಸೀರೆಯನ್ನು ದೇವಿಗೆ ಉಡಿಸಿ, ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 7 ಗಂಟೆ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕೊಡಲಾಯಿತು ಎಂದು ದೇಗುಲದ ಪ್ರಧಾನ ಅರ್ಚಕ ಎನ್‌.ಶಶಿಶೇಖರ ದೀಕ್ಷಿತ್ ತಿಳಿಸಿದರು.

‘ನವರಾತ್ರಿಯ ಒಂಬತ್ತು ದಿನವೂ ದೇವಿಗೆ ವಿಶೇಷ ಪೂಜೆಗೈಯಲಾಗುವುದು. ಈ ಸಂದರ್ಭ ನಿತ್ಯವೂ ಒಂದೊಂದು ಅಲಂಕಾರ ಮಾಡಲಾಗುವುದು. ಮಹೇಶ್ವರಿ, ಕೌಮಾರಿ (ನವಿಲು), ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ, ದುರ್ಗೆ, ಗಜಲಕ್ಷ್ಮೀ ಅಲಂಕಾರಗಳಲ್ಲಿ ಕಂಗೊಳಿಸುವ ಚಾಮುಂಡೇಶ್ವರಿ ವಿಜಯ ದಶಮಿಯಂದು ಸಹ ಅಶ್ವಾರೋಹಿ ಅಲಂಕಾರದಲ್ಲಿ ರಾರಾಜಿಸಲಿದ್ದಾಳೆ. ದೇವಿಯ ಈ ಅಲಂಕಾರಗಳನ್ನು ಕಣ್ತುಂಬಿಕೊಳ್ಳಲಿಕ್ಕಾಗಿಯೇ ಬೆಟ್ಟಕ್ಕೆ ಭಕ್ತ ಸಾಗರ ಹರಿದು ಬರಲಿದೆ’ ಎಂದು ದೀಕ್ಷಿತ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಕಲಾ ತಂಡಗಳ ಕಲರವ: ದಸರಾ ಉದ್ಘಾಟನೆಗಾಗಿಯೇ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಬೆಟ್ಟದಲ್ಲಿ ಮೇಳೈಸಿತ್ತು. ಕಂಸಾಳೆ, ವೀರಗಾಸೆ, ನಂದಿ ಧ್ವಜ ಕುಣಿತ, ಚಂಡೆ, ಡೊಳ್ಳು, ಡೋಲು, ಕೀಲು ಕುದುರೆ, ಪಟ ಕುಣಿತ, ಗೊಂಬೆ ಕುಣಿತದ ತಂಡಗಳು ಕಲಾ ಪ್ರದರ್ಶನ ನೀಡಿದವು. ಮಂಗಳವಾದ್ಯವೂ ಮೊಳಗಿದವು.

ಮಹಿಷನ ಪ್ರತಿಮೆ ಬಳಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾಹಿತಿ ಎಸ್‌.ಎಲ್.ಭೈರಪ್ಪ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇಗುಲಕ್ಕೆ ಕರೆದೊಯ್ಯಲಾಯಿತು. ಪೊಲೀಸ್ ಬಿಗಿ ಭದ್ರತೆಯಿದ್ದರೂ; ದಸರಾ ಉದ್ಘಾಟಕ ಭೈರಪ್ಪ ಎಲ್ಲರೊಟ್ಟಿಗೆ ಬರಲಾಗಲಿಲ್ಲ. ಪೊಲೀಸ್ ಭದ್ರತೆಯನ್ನು ಭೇದಿಸಿದ ಜನಸ್ತೋಮ ಮುಖ್ಯಮಂತ್ರಿ, ರಾಜಕಾರಣಿಗಳ ಸುತ್ತ ಜಮಾಯಿಸಿತು.

ಕೆಲ ಕ್ಷಣ ದಸರಾ ಉದ್ಘಾಟಕ ಭೈರಪ್ಪ ಬೇರೆಯಾದರು. ಇದನ್ನು ಗಮನಿಸಿದ ಸಂಸದ ಪ್ರತಾಪ್‌ಸಿಂಹ ಪೊಲೀಸರ ನೆರವಿನಿಂದ ಭೈರಪ್ಪ ಅವರನ್ನು ಎಲ್ಲರೊಟ್ಟಿಗೆ ದೇಗುಲದೊಳಗೆ ಕರೆದೊಯ್ದು ವಿಶೇಷ ಪೂಜೆ ಮಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.