ADVERTISEMENT

ಮೈಸೂರು | ಲೈಂಗಿಕತೆಗೆ ಬಾಲಕಿ ಪೂರೈಕೆ; ಜಾಲ ಪತ್ತೆ

ಪುರುಷತ್ವ ಬರುವ ಮೂಢನಂಬಿಕೆಯುಳ್ಳ ವೃದ್ಧರಿಗೆ ಬಾಲಕಿ ಪೂರೈಸುವ ಜಾಲ | ಭಾರಿ ಮೊತ್ತಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 23:30 IST
Last Updated 28 ಸೆಪ್ಟೆಂಬರ್ 2025, 23:30 IST
<div class="paragraphs"><p>ಲೈಂಗಿಕ ದೌರ್ಜನ್ಯ –‍ಪ್ರಾತಿನಿಧಿಕ ಚಿತ್ರ</p></div>

ಲೈಂಗಿಕ ದೌರ್ಜನ್ಯ –‍ಪ್ರಾತಿನಿಧಿಕ ಚಿತ್ರ

   

ಮೈಸೂರು: ಅನೈತಿಕ ಚಟುವಟಿಕೆಗೆ ಬಾಲಕಿ ದೂಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ  ಹಚ್ಚಿದ್ದಾರೆ. ಪ್ರಕರಣವೊಂದರಲ್ಲಿ ₹ 20 ಲಕ್ಷ ಬೇಡಿಕೆ ಇಟ್ಟಿದ್ದ ಮಹಿಳೆಯೂ ಸೇರಿದಂತೆ ಇಬ್ಬರು ಆರೋಪಿಗಳನ್ನು ಇಲ್ಲಿನ ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಒಡನಾಡಿ ಸೇವಾ ಸಂಸ್ಥೆ ಜೊತೆಗೂಡಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಂಗಳೂರಿನ ಶೋಭಾ, ತುಳಸಿಕುಮಾರ್ ಎಂಬುವರನ್ನು ವಶಕ್ಕೆ ಪಡೆದು, ಬಾಲಕಿಯನ್ನು ರಕ್ಷಿಸಿದ್ದಾರೆ.

ADVERTISEMENT

‘ಋತುಮತಿಯಾದ 12–13 ವರ್ಷದ ಬಾಲಕಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದರೆ, ಕಳೆದುಹೋದ ಪುರುಷತ್ವ ಬರುತ್ತದೆ’ ಎಂಬ ಮೂಢನಂಬಿಕೆ ಹೊಂದಿದ್ದ ಶ್ರೀಮಂತ ವೃದ್ಧರು, ಪುರುಷರು, ವಯಸ್ಕರಿಗೆ ಬಾಲಕಿಯನ್ನು ಒಪ್ಪಿಸುವ ಜಾಲದಲ್ಲಿ ಈ ಇಬ್ಬರೂ ಆರೋಪಿಗಳು ಸಕ್ರಿಯರಾಗಿದ್ದರು’ ಎಂಬುದು ತನಿಖೆಯಿಂದ ಹೊರಬಿದ್ದಿದೆ.

‘ಗ್ರಾಹಕರಿಗೆ ವಾಟ್ಸ್‌ಆ್ಯಪ್‌ ವಿಡಿಯೊ ಕರೆ ಮಾಡಿ, ಬಾಲಕಿಯನ್ನು ಮಹಿಳೆಯು ಜಾಲದ ಮಧ್ಯವರ್ತಿಯೊಬ್ಬರಿಗೆ ತೋರಿಸುತ್ತಿದ್ದಳು. ಈ ವಿಷಯವು ಸಂಸ್ಥೆಯ ಮಾಹಿತಿದಾರರೊಬ್ಬರಿಗೆ ತಿಳಿಯಿತು. ಆರೋಪಿಯನ್ನು ಪತ್ತೆ ಮಾಡಿ, ಅದಕ್ಕಾಗಿ ನಕಲಿ ಉದ್ಯಮಿ ವೇಷದಲ್ಲಿ ವಿಜಯನಗರ ಠಾಣೆ ಪೊಲೀಸರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಜಂಟಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ತಿಳಿಸಿದರು. 

‘ಬೆಂಗಳೂರು, ಮೈಸೂರು ಹಾಗೂ ತಾಲ್ಲೂಕು ಮಟ್ಟದಲ್ಲಿನ ಸ್ಲಂಗಳು, ಶ್ರಮಿಕರು, ಬಡವರು, ವಲಸಿಗರು, ಏಕ ಪೋಷಕರಿರುವ ಕುಟುಂಬಗಳ ಬಾಲಕಿಯರನ್ನು ಹುಡುಕುವ ಕೃತ್ಯವನ್ನು ಜಾಲವು ಮಾಡುತ್ತಿತ್ತು. ಬಾಲಕಿ ಋತುಮತಿಯಾದಾಗ ಪಾಲಕರು ನಡೆಸುವ ಆರತಿ ಕಾರ್ಯಕ್ರಮವನ್ನು ಜಾಲವು ಗಮನಿಸುತ್ತಿತ್ತು’ ಎಂದು ಮಾಹಿತಿ ನೀಡಿದರು. 

‘ಈ ಪ್ರಕರಣದಲ್ಲೂ ಬಾಲಕಿಯ ತಂದೆ ತಾಯಿ ಎಂದೂ, ನಾವು ದತ್ತು ತೆಗೆದುಕೊಂಡಿದ್ದೇವೆ ಎಂದೂ ಶಾಲಾ ಸಮವಸ್ತ್ರದಲ್ಲಿ ಗ್ರಾಹಕರಿಗೆ ತೋರಿಸಿದ್ದರು. ₹ 20 ಲಕ್ಷದಿಂದ ₹ 25 ಲಕ್ಷದವರೆಗೆ ಬೇಡಿಕೆ ಇಟ್ಟಿದ್ದರು’ ಎಂದರು.  

‘ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಾಲಕಿಯನ್ನು ರಕ್ಷಿಸಿ ಬಾಲಮಂದಿರದಲ್ಲಿ ಇರಿಸಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ವಿಜಯನಗರ ‍ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.