ADVERTISEMENT

ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಚಾಲನೆ: ವರ್ಣರಂಜಿತ ಬೆಳಕಲ್ಲಿ ಬಳುಕಿದ ಕಾವೇರಿ

ಎಂ.ಮಹೇಶ
Published 1 ಡಿಸೆಂಬರ್ 2024, 6:11 IST
Last Updated 1 ಡಿಸೆಂಬರ್ 2024, 6:11 IST
ಚುಂಚನಕಟ್ಟೆಯ ರಾಮದೇವರ ದೇವಸ್ಥಾನದ ಆವರಣದಲ್ಲಿ ಶನಿವಾರ ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವಕ್ಕೆ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಚಾಲನೆ ನೀಡಿದರು. ಸಚಿವ ಕೆ. ವೆಂಕಟೇಶ್‌, ಶಾಸಕರಾದ ಡಿ. ರವಿಶಂಕರ್, ಕೆ. ಹರೀಶ್‌ಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಕೆ.ಎಂ‌.ಗಾಯಿತ್ರಿ, ಎನ್.ವಿಷ್ಣುವರ್ಧನ್, ಸವಿತಾ ಶ್ರೀನಿವಾಸ್ ಜೊತೆಗಿದ್ದರು
ಚುಂಚನಕಟ್ಟೆಯ ರಾಮದೇವರ ದೇವಸ್ಥಾನದ ಆವರಣದಲ್ಲಿ ಶನಿವಾರ ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವಕ್ಕೆ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಚಾಲನೆ ನೀಡಿದರು. ಸಚಿವ ಕೆ. ವೆಂಕಟೇಶ್‌, ಶಾಸಕರಾದ ಡಿ. ರವಿಶಂಕರ್, ಕೆ. ಹರೀಶ್‌ಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಕೆ.ಎಂ‌.ಗಾಯಿತ್ರಿ, ಎನ್.ವಿಷ್ಣುವರ್ಧನ್, ಸವಿತಾ ಶ್ರೀನಿವಾಸ್ ಜೊತೆಗಿದ್ದರು   

ಮೈಸೂರು: ನಾಡಿನ ಜೀವನದಿ ಇಲ್ಲಿ ವರ್ಣರಂಜಿತ‌ ದೀಪಗಳ ಬೆಳಕಿನಲ್ಲಿ ಬಳುಕಿದಳು. ವಯ್ಯಾರದಿಂದ‌ ಕಂಗೊಳಿಸಿದಳು. ಸುರಿಯುತ್ತಿದ್ದ ಮಂಜಿನಿಂದ ‌ಉಂಟಾಗುತ್ತಿದ್ದ ಚಳಿಯನ್ನು ಮರೆಸಿದಳು.‌ ನೂರಾರು‌ ಮಂದಿ ಧನುಷ್ಕೋಟಿ ಜಲಪಾತದ ಸೊಬಗನ್ನು ಕಣ್ತುಂಬಿಕೊಂಡರು. ಸಂಗೀತ ಕಾರ್ಯಕ್ರಮದ ರಂಜನೆಯನ್ನು ಸವಿದರು.

ಜಿಲ್ಲೆಯ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ರಾಮದೇವರ ದೇವಸ್ಥಾನದ ಆವರಣದಲ್ಲಿ ನಡೆದ ಉತ್ಸವದಲ್ಲಿ ಜಾನಪದ ಗೀತೆಗಳು ಕೇಳುಗರನ್ನು ರಂಜಿಸಿದವು. ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ನಡೆಯುತ್ತಿದ್ದರೆ, ಅತ್ತ ಜಲಪಾತದ‌ ಮೇಲೆ ವಿದ್ಯುತ್ ದೀಪಗಳ ಬೆಳಕು ಪಸರಿಸುತ್ತಿತ್ತು. ಮೆರುಗನ್ನು ಹೆಚ್ಚಿಸುತ್ತಿತ್ತು. ಅಲ್ಲೂ ಜನರಿದ್ದರು. ಸಾಂಸ್ಕೃತಿಕ ಸೌರಭ ವೀಕ್ಷಿಸಲು ಸಂಗೀತ ರಸಿಕರೂ ಪಾಲ್ಗೊಂಡಿದ್ದರು.

ಚುಂಚನಕಟ್ಟೆ ಕುರಿತು ಮಾಹಿತಿ ನೀಡುವ ಲೇಸರ್ ಶೋ ಕಾರ್ಯಕ್ರಮವೂ‌ ಇತ್ತು. ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರವೂ ನಡೆಯಿತು. ದೀಪಾಲಂಕಾರವು ಕಾವೇರಿಯ ಸೊಬಗಿನ ಸಿರಿಯನ್ನು ಇಮ್ಮಡಿಗೊಳಿಸಿತು.

ADVERTISEMENT

ಇನಿದನಿ ಮಣ್ಣ ಮಕ್ಕಳ‌ ಹೊನ್ನ ಪದಗಳ ಬಳಗದವರು ನಿವೃತ್ತ ಕೆಎಎಸ್ ಅಧಿಕಾರಿ ಕಾ.ರಾಮೇಶ್ವರಪ್ಪ ನೇತೃತ್ವದಲ್ಲಿ ಕನ್ನಡ ಗೀತೆಗಳ ಡಿಂಡಿಮವನ್ನು ಬಾರಿಸಿದರು. ಆ ತಂಡದವರು ಕಂಡಾಯವನ್ಮು ಛತ್ರಿ, ಚಾಮರಗಳ‌ ಮೆರವಣಿಗೆಯೊಂದಿಗೆ ವೇದಿಕೆಗೆ ಏರಿದ್ದು ವಿಶೇಷವಾಗಿತ್ತು. ತಂಡದವರು ತಮ್ಮ ಕಂಚಿನ ಕಂಠದ ಮೂಲಕ ಮಲೆ‌ಮಹದೇಶ್ವರನನ್ನು, ಅಕ್ಕಮಹದೇವಿಯನ್ನು, ಖ್ಯಾತ ಸಾಹಿತಿಗಳನ್ನು ವೇದಿಕೆ ಮೇಲೆ ತಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ರಾಜ್ಯದಲ್ಲಿ ಈ ವರ್ಷ ಉತ್ತಮ ಮಳೆಯಾಗಿ ಸಮೃದ್ಧಿ ಉಂಟಾಗಿದೆ. ಈ ಕಾರಣದಿಂದ ಜಲಪಾತೋತ್ಸವದ ಮೂಲಕ ಜನರಿಗೆ ಮನರಂಜನೆ ಕೊಡುವ ಕಾರ್ಯಕ್ರಮ ಇದಾಗಿದೆ ಎಂದರು. ಇಲ್ಲಿನ ಶಾಸಕರು ಚೆನ್ನಾಗಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಕೆ.ಆರ್. ನಗರದ ಬಗ್ಗೆ ವಿಶೇಷ ಗೌರವ ಹಾಗೂ ಪ್ರೀತಿ ಇದೆ. ಆ ಅಭಿಮಾನದ ಕೊಡುಗೆಯಾಗಿ ಸಾಲಿಗ್ರಾಮವನ್ನು ಪ್ರತ್ಯೇಕ ತಾಲ್ಲೂಕನ್ನಾಗಿ ಮಾಡಿದರು. ಅದಕ್ಕೆ ರವಿಶಂಕರ್ ಹಾಗೂ ದೊಡ್ಡಸ್ವಾಮಿಗೌಡರ ಕೊಡುಗೆ ಕಾರಣ. ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ಕ್ರಮ ವಹಿಸಲಾಗಿದೆ ಎಂದರು.

ಚುಂಚನಕಟ್ಟೆ ಪವಿತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರವೂ ಹೌದು. ಇಲ್ಲಿ ಜಲಪಾತೋತ್ಸವ ಆಯೋಜಿಸಿರುವುದು ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವಾಗಿದೆ. ದೇಶದಲ್ಲಿ ಸಂಸ್ಕೃತಿಯನ್ನು ಉಳಿಸಬೇಕು. ಸಂಸ್ಕೃತಿ ಹಾಗೂ ಪರಂಪರೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಕೆ.ಆರ್.‌ನಗರ ಕ್ಷೇತ್ರವನ್ನು ಮಾದರಿ ಮಾಡಬೇಕು ಎಂಬ ಕನಸು ಶಾಸಕರಲ್ಲಿದೆ. ಇದಕ್ಕಾಗಿ ಅವರು ಜನಪರ ಕೆಲಸ ಮಾಡುವಲ್ಲಿ ಸಕ್ರಿಯವಾಗಿದ್ದಾರೆ. ಅದಕ್ಕೆ ತಕ್ಕಂತೆ ಅಭಿವೃದ್ಧಿಗೆ ಸರ್ಕಾರದಿಂದ ಸಹಕಾರ ಕೊಡಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ರವಿಶಂಕರ್ ಮಾತನಾಡಿ, ಕ್ಷೇತ್ರದಲ್ಲಿ ಬಹಳಷ್ಟು ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸುವುದು ನನ್ನ ಆದ್ಯತೆಯಾಗಿದೆ ಎಂದರು.

ಹಿಂದಿನ ಸರ್ಕಾರದವರು ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ನೋಂದಣಿ ಮಾಡಿಸದೇ ನಿರಾಣಿ ಶುಗರ್ಸ್‌ನವರಿಗೆ ನಡೆಸಲೆಂದು ಕೊಟ್ಟಿದ್ದರು. ಹೀಗಾಗಿ ಆರಂಭವಾಗಿರಲಿಲ್ಲ. ನಾನು ಬಂದ‌ ಮೇಲೆ ಸರ್ಕಾರದೊಂದಿಗೆ ವ್ಯವಹರಿಸಿದ ನಂತರ ಈಗ ನೋಂದಣಿಗೆ ಅವಕಾಶ ಕೊಟ್ಟಿದ್ದಾರೆ. ಕಾರ್ಖಾನೆಯು ಮುಂದಿನ ವರ್ಷ ಆರಂಭವಾಗಲಿದ್ದು ಮುಂದುವರಿಯಲಿದೆ ಎಂದು ತಿಳಿಸಿದರು.

ಕಪ್ಪಡಿಯ ರಾಚಪ್ಪಾಜಿ ಹಾಗೂ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಜನರು ಬಳಸಿಕೊಂಡು ಬರುವುದನ್ನು ತಪ್ಪಿಸಲು ₹25 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಿಸಲಾಗುವುದು. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಭಾಗದ ಕೆರೆ- ಕಟ್ಟೆಗಳಿಗೆ ನೀರು ತುಂಬಿಸುವ ಕೆಸ್ತೂರು ಏತನೀರಾವರಿ ಯೋಜನೆಗೆ ₹ 60 ಕೋಟಿ ದೊರೆತಿದೆ. ಇದು ಅನುಷ್ಠಾನ ಆದಲ್ಲಿ ರೈತರಿಗೆ ಬಹಳ ಅನುಕೂಲ ಆಗಲಿದೆ. ಇದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಾಲಿಗ್ರಾಮ ತಾಲ್ಲೂಕಿಗೆ ಮಿನಿವಿಧಾನಸೌಧ ಮೊದಲಾದ ಕಚೇರಿಗಳನ್ನು ನಿರ್ಮಿಸಲು ಬೇಕಾಗುವ ಅನುದಾನವನ್ನು ಒದಗಿಸಲು ಮುಂದಿನ ಬಜೆಟ್‌ನಲ್ಲಿ ಸೇರಿಸಲಾಗುವುದು. ತಾಲ್ಲೂಕು ಮಟ್ಟದ ನೂರು ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ಅದು ಕೂಡ ಮುಂದಿನ ಬಜೆಟ್‌ನಲ್ಲಿ ‌ಸೇರಲಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಎಲ್ಲ ಇಲಾಖೆಗಳಿಂದಲೂ ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಚುಂಚನಕಟ್ಟೆಯ ಕೋದಂಡರಾಮ ದೇವಸ್ಥಾನದ ಸುತ್ತಮುತ್ತ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಬೇಕಾಗಿದೆ. ಫೌಂಟೇನ್ ಹಾಗೂ ವಾಟರ್ ಪಾರ್ಕ್ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಇದರೊಂದಿಗೆ ಇಲ್ಲಿ ಇನ್ನೂ ಹೆಚ್ಚಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಕೆ.ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ‌.ಗಾಯಿತ್ರಿ, ಎಸ್ಪಿ ಎನ್.ವಿಷ್ಣುವರ್ಧನ್, ಕುಪ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಗೀತಾ ಕಾಂತರಾಜು, ಸದಸ್ಯರಾದ ಆರ್‌. ಗೌರಮ್ಮ,ಎಚ್.ಟಿ.ಗೋವಿಂದೇಗೌಡ, ಎಚ್.ವಿ. ಶಾರದಮ್ಮ, ಪುರಸಭೆ ಸದಸ್ಯ ನಟರಾಜ್, ಮುಖಂಡರಾದ ದೊಡ್ಡಸ್ವಾಮಿಗೌಡ, ಮಹದೇವಸ್ವಾಮಿ,ನಾಗೇಂದ್ರ, ಶ್ರೀನಿವಾಸ್, ಉದಯಶಂಕರ್, ರಮೇಶ್ ಹಾಜರಿದ್ದರು.

ನಂತರ ಖ್ಯಾತ ಗಾಯಕ ರಘು ದೀಕ್ಷಿತ್ ತಂಡದವರು ಪ್ರಸ್ತುತಪಡಿಸಿದ ಸಂಗೀತ ಕಾರ್ಯಕ್ರಮ ‌ಜನರನ್ನು ರಂಜಿಸಿತು.

ಉತ್ಸವದ ಅಂಗವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮೊದಲಾದ ‌ಇಲಾಖೆಗಳಿಂದ ದೊರೆಯುವ ‌ಸೌಲಭ್ಯಗಳ ಬಗ್ಗೆ ತಿಳಿಸಿಕೊಡಲು ಮಳಿಗೆಗಳನ್ನು ಹಾಕಲಾಗಿದೆ. ಭಾನುವಾರವೂ ಉತ್ಸವ ನಡೆಯಲಿದೆ.

ಗಮನ ಸೆಳೆದ ಲೇಸರ್ ಶೋ
ದೀಪಗಳ ಬೆಳಕಲ್ಲಿ ಕಂಡ ಧನುಷ್ಕೋಟಿ ಜಲಪಾತ
ಜಲಪಾತೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ರಘು ದೀಕ್ಷಿತ್‌ ಮತ್ತು ತಂಡದವರು ರಂಜಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.