ADVERTISEMENT

ಸಿಎಂ ಸಿದ್ದರಾಮಯ್ಯ ಭ್ರಷ್ಟರ ಚಾಂಪಿಯನ್‌: ಅಶೋಕ ಆರೋಪ

ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹೋರಾಟ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 13:56 IST
Last Updated 22 ಜೂನ್ 2025, 13:56 IST
ಆರ್. ಅಶೋಕ್‌ 
ಆರ್. ಅಶೋಕ್‌    

ಮೈಸೂರು/ ಮಂಡ್ಯ: ‘ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಭ್ರಷ್ಟರ ಚಾಂಪಿಯನ್ ಆಗಿದ್ದಾರೆ. ಲೂಟಿ ಮಾಡುವವರಿಗೆ ಶ್ರೀರಕ್ಷೆಯಾಗಿದ್ದಾರೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸಲು ರಾಜ್ಯ ಸರ್ಕಾರದಿಂದ ಲೂಟಿ ನಡೆಯುತ್ತಿದೆ. ಹೈಕಮಾಂಡ್ ವೀಕ್ ಆಗಿರುವುದರಿಂದ ರಾಜ್ಯ ಕಾಂಗ್ರೆಸ್ ತುಘಲಕ್ ಆಡಳಿತ ನಡೆಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಈ ಸರ್ಕಾರದಲ್ಲಿ ಪ್ರತಿ ಇಲಾಖೆಯಲ್ಲೂ ಶೇ.60ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಬಡವರಿಗೆ ಮನೆ ಹಂಚಿಕೆಯಲ್ಲೂ ಹಣ ವಸೂಲಿ ಮಾಡುತ್ತಿದ್ದಾರೆ. ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಲು ನಾ ಮುಂದು ತಾ ಮುಂದು ಎಂದು ನಿಂತಿದ್ದಾರೆ. ಯಾರು ಜಾಸ್ತಿ ಕಪ್ಪ ನೀಡುತ್ತಾರೆಯೋ ಅವರಿಗೆ ಬೆಲೆ ಹೆಚ್ಚು’ ಎಂದು ಟೀಕಿಸಿದರು.

ADVERTISEMENT

‘ಬೇರೆ ರಾಜ್ಯಗಳ ಚುನಾವಣೆಗಾಗಿ ಕರ್ನಾಟಕದಿಂದ ಲೂಟಿ ಮಾಡಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ತೆಗೆದುಕೊಳ್ಳಲು ಇರುವುದು ಇದೊಂದೇ ರಾಜ್ಯ. ಲೂಟಿ ಹೊಡೆದು ಸಚಿವ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ’ ಎಂದು ದೂರಿದರು.

‘ವಿವಿಧ ವಸತಿ ಯೋಜನೆಗಳಲ್ಲಿ ರಾಜ್ಯ ಸರ್ಕಾರವು ₹2137.44 ಕೋಟಿ ಕಮಿಷನ್‌ ಲೂಟಿ ಮಾಡಿರುವ ಮಾಹಿತಿ ದೊರೆತಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಅಥವಾ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಬೇಕು. ರಾಜ್ಯ ಸರ್ಕಾರ ಎಸ್‌ಐಟಿಯನ್ನಾದರೂ ರಚಿಸಲಿ, ಇನ್ನೇನಾದರೂ ರಚಿಸಿಕೊಳ್ಳಲಿ. ಜನರಿಗೆ ಎಲ್ಲವನ್ನೂ ತಿಳಿಸಲಿ’ ಎಂದು ಒತ್ತಾಯಿಸಿದರು.

‘ಈ ಸರ್ಕಾರದ ದುರಾಡಳಿತದ ವಿರುದ್ಧ ಪಕ್ಷದಿಂದ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸಲಿದ್ದೇವೆ’ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಬಳಿಯಿರುವ ಮುಖ್ಯಮಂತ್ರಿ ಸ್ಥಾನವನ್ನು ಒದ್ದು ಕಿತ್ತುಕೊಳ್ಳಲಿ. ಬಳಿಕ 2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮಾತನಾಡಲಿ
ಆರ್. ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.