
ಮೈಸೂರು: ‘ಲಭ್ಯ ಸಂಪನ್ಮೂಲಗಳ ಸದ್ಬಳಕೆ ಹಾಗೂ ವೈಜ್ಞಾನಿಕವಾಗಿ ನಿರ್ವಹಣೆಯಿಂದ ತೆಂಗು ಕೃಷಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ ತಿಳಿಸಿದರು.
ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರ, ತೋಟಗಾರಿಕೆ ಕಾಲೇಜು ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು ಘಟಕದಿಂದ ತಾಲ್ಲೂಕಿನ ಯಲಚಹಳ್ಳಿಯಲ್ಲಿರುವ ತೋಟಗಾರಿಕೆ ಕಾಲೇಜಿನಲ್ಲಿ ಈಚೆಗೆ ರೈತರಿಗೆ ಆಯೋಜಿಸಿದ್ದ ‘ತೆಂಗು ಕೃಷಿಯ ಪ್ರಚಲಿತ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳು’ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ಕಡಿಮೆ ಇಳುವರಿ ಹಾಗೂ ಬೆಲೆ ಏರಿಕೆಗೆ ಅಸಮರ್ಪಕ ಬೇಸಾಯ ಪದ್ಧತಿ ಕಾರಣ. ಹೀಗಾಗಿ, ಮಣ್ಣು ಪರೀಕ್ಷೆ ವರದಿ ಆಧರಿಸಿ ವೈಜ್ಞಾನಿಕವಾಗಿ ವ್ಯವಸಾಯ ಮಾಡಿದರೆ ಮುಂದಿನ ದಿನಗಳಲ್ಲಿ ತೆಂಗು ಉತ್ತಮ ಇಳುವರಿ ಹಾಗೂ ಲಾಭ ನೀಡುತ್ತದೆ’ ಎಂದು ತಿಳಿಸಿದರು.
ಮೌಲ್ಯವರ್ಧನೆಗೆ ಸಲಹೆ:
ಕೃಷಿ ತಂತ್ರಜ್ಞರ ಸಂಸ್ಥೆ ಸದಸ್ಯ ರವೀಂದ್ರ ಕೆ.ಆರ್. ಮಾತನಾಡಿ, ‘ಕೃಷಿಯನ್ನು ಲಾಭದಾಯಕ ಉದ್ದಿಮೆ ಎಂದು ಪರಿಗಣಿಸಿ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯತ್ತ ರೈತರು ಚಿತ್ತ ಹರಿಸಬೇಕು’ ಎಂದರು.
ತೋಟಗಾರಿಕೆ ಕಾಲೇಜಿನ ಡೀನ್ ಸಿ.ಎನ್. ಹಂಚಿನಮನಿ, ‘ಬಹು ಬೆಳೆ ಪದ್ಧತಿ, ಇತರ ಉಪಕಸುಬುಗಳು ಅಥವಾ ಉದ್ದಿಮೆಯಲ್ಲಿ ರೈತರು ತೊಡಗಬೇಕು. ಇದರಿಂದ ಆದಾಯ ಇಮ್ಮಡಿಗೊಳಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ, ಸಂಘ–ಸಂಸ್ಥೆಗಳು ಸಾಕಷ್ಟು ಪ್ರೋತ್ಸಾಹ ಮತ್ತು ಸವಲತ್ತುಗಳನ್ನು ನೀಡುತ್ತಿವೆ. ಅದನ್ನು ಬಳಸಿಕೊಂಡರೆ ರೈತರ ಜೀವನಮಟ್ಟ ಸುಧಾರಿಸುತ್ತದೆ’ ಎಂದು ಸಲಹೆ ನೀಡಿದರು.
ಉಪನ್ಯಾಸ:
ಸಂಪನ್ಮೂಲ ವ್ಯಕ್ತಿಗಳಾದ ಸಿದ್ದಪ್ಪ ಆರ್. ‘ತೆಂಗಿನಲ್ಲಿ ಉತ್ಕೃಷ್ಟ ಸಸಿಗಳ ಉತ್ಪಾದನೆ ಹಾಗೂ ಬೆಳೆ ನಿರ್ವಹಣೆ’, ಹರ್ಷ ಕೆ.ಎನ್. ‘ತೆಂಗು ಆಧಾರಿತ ಮಿಶ್ರ ಬೆಳೆ ಪದ್ಧತಿ’, ಕಿರಣ್ ಕುಮಾರ್ ಕೆ.ಸಿ. ‘ತೆಂಗನ್ನು ಬಾಧಿಸುವ ರೋಗಗಳು ಹಾಗೂ ಅದರ ಸಮರ್ಪಕ ನಿರ್ವಹಣೆ’, ಮುತ್ತುರಾಜು ಜಿ.ಪಿ. ‘ತೆಂಗಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಟಗಳು ಮತ್ತು ಅವುಗಳ ಹತೋಟಿ’, ಜಿ. ಮಂಜುನಾಥ್ ‘ಜೈವಿಕ ಉತ್ಪನ್ನಗಳ ಬಳಕೆ ಹಾಗೂ ಉಪಯೋಗಗಳು’, ಚಂದನ್ ಕೆ. ‘ತೆಂಗಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹಾಗೂ ಬಳಕೆ’ ಕುರಿತು ಮಾಹಿತಿ ಹಂಚಿಕೊಂಡರು.
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲುಕಿನ ದಬ್ಬೇಘಟ್ಟದ ಪ್ರಗತಿಪರ ರೈತ ಬಿ. ರಾಮಲಿಂಗಯ್ಯ ತೆಂಗು ಕೃಷಿಯಲ್ಲಿನ ಅನುಭವ ಹಂಚಿಕೊಂಡರು.
ತೆಂಗಿನ ವಿವಿಧ ಸಂಕರಣ ತಳಿಗಳು, ರೋಗ ಹಾಗೂ ಕೀಟಬಾಧಿತ ಮಾದರಿಗಳು ಮತ್ತು ಹತೋಟಿ ಕ್ರಮಗಳು, ವಿವಿಧ ಜೈವಿಕ ಉತ್ಪನ್ನಗಳು ಹಾಗೂ ತೆಂಗಿನ ಮೌಲ್ಯವರ್ಧಿತ ಪದಾರ್ಥಗಳನ್ನು ಒಳಗೊಂಡ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.
ರೈತರ ಕೌಶಲ ವೃದ್ಧಿಸಲು ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆ, ಮಣ್ಣು ಮಾದರಿ ಸಂಗ್ರಹಣೆ, ಸಮರ್ಪಕವಾಗಿ ಗೊಬ್ಬರ ನೀಡುವ ವಿಧಾನಗಳು, ಅಣಬೆ ರೋಗ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ತನ್ವೀರ್ ಅಹ್ಮದ್, ಅರವಿಂದ ಕುಮಾರ್ ಜೆ.ಎಸ್., ಶಿವಕುಮಾರ್ ಕೆ.ಎಂ. ಮತ್ತು ಮಮತಲಕ್ಷ್ಮಿ ಎನ್. ಪಾಲ್ಗೊಂಡಿದ್ದರು.
ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ 100 ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.