ADVERTISEMENT

ಸರ್ಕಾರ ಸುಭದ್ರ, ಅಂತೆ–ಕಂತೆಗಳಿಗೆ ಉತ್ತರವಿಲ್ಲ: ಸಚಿವ ಎಚ್‌.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 10:07 IST
Last Updated 1 ಮಾರ್ಚ್ 2025, 10:07 IST
ಎಚ್.ಸಿ. ಮಹದೇವಪ್ಪ
ಎಚ್.ಸಿ. ಮಹದೇವಪ್ಪ   

ಮೈಸೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಅಂತೆ–ಕಂತೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಹೇಳಿದರು.

ಕರ್ನಾಟಕದಲ್ಲಿ ಏಕನಾಥ್ ಶಿಂಧೆ ಮಾದರಿಯಲ್ಲಿ ಸರ್ಕಾರ ರಚನೆ ವಿಚಾರವಾಗಿ ನಗರದಲ್ಲಿ ಶನಿವಾರ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು. ‘ ಡಿ.ಕೆ. ಶಿವಕುಮಾರ್ ಈಶ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗಿದ್ದರು. ಇದರ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇಲ್ಲ. ಸಚಿವ ಕೆ.ಎನ್‌. ರಾಜಣ್ಣ ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ’ ಎಂದರು.

ಎಸ್‌ಸಿಪಿ/ ಟಿಎಸ್‌ಪಿ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಬಿಜೆಪಿಯಿಂದ ಜನಾಂದೋಲನ ವಿಚಾರವಾಗಿ ಪ್ರತಿಕ್ರಿಯಿಸಿ ‘ ಕೇವಲ ರಾಜಕೀಯಕ್ಕಾಗಿ ಹೋರಾಟ ಮಾಡುವುದಲ್ಲ. ಕಾಯ್ದೆ ಮಾಡಿರುವುದೇ ನಾವು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಲು ಕಾಯ್ದೆ ಜಾರಿ ಮಾಡಿದ್ದೇವೆ. ನಾವು ತಂದಿರುವ ಕಾಯ್ದೆಗಳು ಇಡೀ ದೇಶಕ್ಕೆ ಮಾದರಿ’ ಎಂದರು.

ADVERTISEMENT

‘ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವ ಕೆಲಸವನ್ನು ಬಿಜೆಪಿ ನಾಯಕರು ಮಾಡಲಿ. ಇತರೆ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿ ಎಸ್‌ಸಿಪಿ/ ಟಿಎಸ್‌ಪಿ ಕಾಯ್ದೆ ಜಾರಿ ಮಾಡುವ ಬದ್ಧತೆಯನ್ನು ಬಿಜೆಪಿ ನಾಯಕರು ತೋರಲಿ. ಅದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಮಾತನಾಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.