ADVERTISEMENT

ಸಿಎಂ ಯಾರಾದರೂ ಆಗಿರಲಿ, ಕಾಂಗ್ರೆಸ್ ಸರ್ಕಾರ ಇರುತ್ತದೆ: ತನ್ವೀರ್‌ ಸೇಠ್

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 10:15 IST
Last Updated 31 ಅಕ್ಟೋಬರ್ 2025, 10:15 IST
<div class="paragraphs"><p>ತನ್ವೀರ್‌ ಸೇಠ್ </p></div>

ತನ್ವೀರ್‌ ಸೇಠ್

   

ಮೈಸೂರು: ‘ಮುಖ್ಯಮಂತ್ರಿ ಯಾರಾದರೂ ಆಗಿರಲಿ, ಕಾಂಗ್ರೆಸ್‌ ಸರ್ಕಾರ ಅಧಿಕಾರದ ಅವಧಿ ಪೂರ್ಣಗೊಳಿಸುತ್ತದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್‌ ಸೇಠ್ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಶಾಸಕಾಂಗ ಪಕ್ಷದ ನಾಯಕನನ್ನಾಗಿ ನಾವು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ, ಆ ಸಂದರ್ಭದಲ್ಲಿ ಹೈಕಮಾಂಡ್‌ ಚರ್ಚಿಸಿದ್ದು ಏನೆಂಬುದನ್ನು ಈವರೆಗೂ ಬಹಿರಂಗಪಡಿಸಿಲ್ಲ’ ಎಂದರು.

ADVERTISEMENT

‘ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು. ಆದರೆ, ವರಿಷ್ಠರ ನಿರ್ಧಾರಕ್ಕೆ ನಮ್ಮ ಬೆಂಬಲ ಇರಲಿದೆ’ ಎಂದು ಹೇಳಿದರು.

‘ನವೆಂಬರ್ ಕ್ರಾಂತಿ ಎಂಬ ಚರ್ಚೆ ಎಲ್ಲಿಂದ ಪ್ರಾರಂಭವಾಯಿತು, ಶುರು ಮಾಡಿದವರು ಯಾರು, ಅವರೀಗ ಎಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಆ ರೀತಿಯ ಯಾವುದೇ ವಿದ್ಯಮಾನ ಅಥವಾ ಸಂದೇಶ ಯಾರಿಗೂ ಇಲ್ಲ. ಅಧಿಕಾರ ಹಂಚಿಕೆಯ ವಿಷಯವೂ ಇಲ್ಲ. ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದೇ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಹೇಳುತ್ತಿದ್ದಾರೆ. ಹೈಕಮಾಂಡ್‌ ಹೇಳದೇ ನಾವು ಆಸೆ ಇಟ್ಟುಕೊಂಡರೆ ಅದು ಆಸೆಯಾಗಿಯೇ ಉಳಿಯುತ್ತದೆ’ ಎಂದು ಪ್ರತಿಕ್ರಿಯಸಿದರು.

‘ಬಿ.ನಾಗೇಂದ್ರ ಹಾಗೂ ಕೆ.ಎನ್. ರಾಜಣ್ಣ ರಾಜೀನಾಮೆಯ ಕಾರಣದಿಂದಾಗಿ ಎರಡು ಸಚಿವ ಸ್ಥಾನಗಳಷ್ಟೆ ಖಾಲಿ ಇವೆ. ಅವುಗಳನ್ನು ತುಂಬುವಂತೆಯೂ ಯಾರೂ ಬೇಡಿಕೆ ಇಟ್ಟಿಲ್ಲ. ನ.20 ಅಥವಾ 26ರಂದು ಸಚಿವ ಸಂಪುಟ ಪುನರ್‌ರಚನೆ ನಡೆಯುವ ಬಗ್ಗೆ ಮುಖ್ಯಮಂತ್ರಿಯವರ ಕಚೇರಿಯಿಂದ ಮಾಹಿತಿ ಬಂದಿದೆ. ಅರ್ಹರಿಗೆ ಅವಕಾಶ ದೊರೆಯಲಿದೆ’ ಎಂದರು.

‘ರಾಜ್ಯಕ್ಕೆ ಒಳಿತಿನ ತೀರ್ಮಾನವನ್ನು ಹೈಕಮಾಂಡ್‌ ಕೈಗೊಳ್ಳುವ ವಿಶ್ವಾಸವಿದೆ. ಬಿಹಾರ ವಿಧಾನಸಭೆ ಚುನಾವಣೆ ನಂತರ ಏನು ಬೇಕಾದರೂ ಆಗಬಹುದು. ಸಚಿವ ಸ್ಥಾನಕ್ಕಾಗಿ ನಾನೂ ಕಾಯುತ್ತಿದ್ದೇನೆ. ರಾಜಕೀಯವಾಗಿ ನಾನು ಸನ್ಯಾಸಿಯೇನಲ್ಲ. ಪಕ್ಷದ ಸಿದ್ಧಾಂತವನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದೇನೆ. ಅವಕಾಶದ ನಿರೀಕ್ಷೆಯಲ್ಲಿದ್ದೇನೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸ್ಥಾನದ ವಿಷಯದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕವಾದುದು’ ಎಂದರು.

‘ಧರ್ಮಸ್ಥಳ ವಿಷಯದಲ್ಲಿ ಪ್ರಕರಣ ವಾಪಸ್ ಪಡೆದವರ ವಿರುದ್ಧ ತನಿಖೆ ನಡೆಸಬೇಕು. ಯಾವ ಉದ್ದೇಶಕ್ಕಾಗಿ ದೂರು ಕೊಟ್ಟಿದ್ದರು, ಈಗೇಕೆ ವಾಪಸ್‌ ಪಡೆಯುತ್ತಿದ್ದಾರೆ, ಅವರ ಉದ್ದೇಶವೇನು, ಅವರಿಗೆ ಫಂಡ್ ಮಾಡಿದವರ‍್ಯಾರು ಎಂಬ ಸತ್ಯ ಹೊರಬರಬೇಕು. ಧಾರ್ಮಿಕ ಕ್ಷೇತ್ರದ ಮೇಲೆ ಆರೋಪ ಮಾಡಿ ಸುಮ್ಮನೆ ಬಿಡುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.