ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮೈಸೂರು: ‘ಮಹಾತ್ಮ ಗಾಂಧೀಜಿಯವರು ನೀಡಿದ್ದ ಶಾಂತಿ ಮಂತ್ರವನ್ನು ಕಾಂಗ್ರೆಸ್ ಈಗ ದುರುಪಯೋಗ ಮಾಡಿಕೊಳ್ಳುತ್ತಿದೆ. ಶಾಂತಿಗೂ ಒಂದು ಮಿತಿ ಇದ್ದು, ಎಷ್ಟು ದಿನ ಸುಮ್ಮನಿರಲು ಸಾಧ್ಯ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಳಿದರು.
ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪಹಲ್ಗಾಮ್ ಘಟನೆಯನ್ನು ಎಲ್ಲರೂ ಕಣ್ಣಾರೆ ಕಂಡಿದ್ದಾರೆ. ದೇಶವು ಪಾಕಿಸ್ತಾನದ ವಿರುದ್ಧ ಪ್ರತ್ಯುತ್ರರಕ್ಕಾಗಿ ಕಾಯುತ್ತಿತ್ತು. ಆಪರೇಷನ್ ಸಿಂಧೂರ್ ಮೂಲಕ ಉತ್ತಮವಾದ ಪ್ರತ್ಯುತ್ತರವನ್ನೇ ಕೊಟ್ಟಿದೆ’ ಎಂದರು.
‘ದೇಶದ ನಡೆಗೆ ವಿದೇಶಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಈ ವೇಳೆ ಗಾಂಧೀಜಿ ಫೋಟೊ ಹಾಕಿ, ಶಾಂತಿ ಮಂತ್ರ ಪಠಿಸಬೇಕೆಂದು ಸಂದೇಶ ನೀಡಿದ ಕಾಂಗ್ರೆಸ್‌ಗೆ ಸಮಯ ಪ್ರಜ್ಞೆ ಇಲ್ಲ ಎನಿಸುತ್ತದೆ. ಇದು ಶಾಂತಿ ಸಾರುವ ಸಮಯವಲ್ಲ. ನಮ್ಮ ನಾಗರಿಕರ ಹತ್ಯೆ ಮಾಡಿದವರಿಗೆ ತಕ್ಕ ಶಾಸ್ತಿ ಮಾಡುವ ಕಾಲ. ಈ ವೇಳೆಯಲ್ಲಿ ರಾಜಕೀಯ ಮಾಡುವುದು ಘೋರ ಅಪರಾಧ. ಕಾಂಗ್ರೆಸ್ ಇನ್ನಾದರೂ ಸುಧಾರಿಸಲಿ’ ಎಂದು ತಿರುಗೇಟು ನೀಡಿದರು.
‘ನಾವೆಲ್ಲರೂ ಸರ್ಕಾರ ಮತ್ತು ವೀರ ಸೇನಾ ಪಡೆಗಳ ಜೊತೆ ನಿಲ್ಲಬೇಕು’ ಎಂದು ಕೋರಿದರು.
‘ಪಾಕಿಸ್ತಾನ ಹಿಂದಿನಿಂದಲೂ ಭಯೋತ್ಪಾದಕರನ್ನು ತನ್ನ ಯಂತ್ರವಾಗಿ ಬಳಿಸಿದೆ. ಅದೇ ಅದರ ಚಾಳಿ. ಅದಕ್ಕೆ ಭಾರತದ ಸೈನಿಕರು ಸರಿಯಾದ ಉತ್ತರ ನೀಡಿದ್ದಾರೆ’ ಎಂದು ಹೇಳಿದರು.
‘ಪಹಲ್ಗಾಮ್‌ನಲ್ಲಿ ಅಮಾಯಕರನ್ನು ಗುಂಡಿಟ್ಟು ಕೊಂದ ಪಾಕಿಸ್ತಾನದ ಉಗ್ರರಿಗೆ ನಮ್ಮ ಸೇನಾ ಪಡೆಗಳು ತಕ್ಕ ಉತ್ತರ ನೀಡಿದೆ. ಸೇನಾ ಕಾರ್ಯಾಚರಣೆಯು ಅತ್ಯಂತ ನಿಖರ, ನಿರ್ದಿಷ್ಟ ಹಾಗೂ ಗಟ್ಟಿ ನಿರ್ಧಾರದ ಪ್ರತಿಫಲವಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಭಯೋತ್ಪಾದನೆಯನ್ನು ನಾಶಪಡಿಸಲು ಸಂಕಲ್ಪ ತೊಟ್ಟಿದೆ’ ಎಂದರು.
‘ಪಹಲ್ಗಾಮ್ ದಾಳಿ ನೋಡಿದ ಪ್ರತಿಯೊಬ್ಬರಿಗೂ ರಕ್ತ ಕುದಿಯುತ್ತಿತ್ತು. ಇಂತಹ ಹೀನ ಕೃತ್ಯವನ್ನು ಸಹಿಸಲಾಗದು. ಅಮಾಯಕರನ್ನು ಕೊಂದು, ಹಲವು ಮಹಿಳೆಯರ ಸಿಂಧೂರ ಕಸಿದ ಉಗ್ರರಿಗೆ ತಕ್ಕ ಉತ್ತರ ಕೊಡಬೇಕೆಂಬುದು ಭಾರತೀಯರ ನಿರೀಕ್ಷೆಯಾಗಿತ್ತು. ಅದರಂತೆ ಮೋದಿ ಸರ್ಕಾರ ಆಪರೇಷನ್ ಸಿಂಧೂರ ಹೆಸರಿನಲ್ಲೇ ದಾಳಿ ನಡೆಸಿ ನ್ಯಾಯ ಒದಗಿಸುತ್ತಿದೆ’ ಎಂದು ತಿಳಿಸಿದರು.
‘ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರ ನೆಲೆಗಳು ಈಗ ಭಾರತೀಯ ವಾಯುಪಡೆಯ ದಾಳಿಯಲ್ಲಿ ನಾಶಗೊಂಡಿವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪಾಠ ಕಲಿಸಲು ನಮ್ಮ ಸೇನಾ ಪಡೆಗಳು ಸನ್ನದ್ಧವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಆಕ್ರಮಣ ನಡೆಯುವ ಸಾಧ್ಯತೆ ಇದೆ. ಉಗ್ರವಾದ, ದೇಶ ದ್ರೋಹಕ್ಕೆ ತಕ್ಕ ಪಾಠ ಕಲಿಸಲಾಗುತ್ತಿದೆ’ ಎಂದು ಹೇಳಿದರು.
‘ನಾಗರಿಕರು ಈ ವೇಳೆ ಹೆಚ್ಚು ಜಾಗರೂಕತೆಯಿಂದ ಇರಬೇಕು. ಅಣಕು ಡ್ರಿಲ್‌ಗಳು ನಡೆಯುತ್ತಿರುತ್ತವೆ. ಸರ್ಕಾರದಿಂದ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ನಮ್ಮ ಸರ್ಕಾರ ಜನರ ಜೊತೆಗೆ ದೇಶದ ರಕ್ಷಣೆಗೂ ಸಜ್ಜಾಗಿದೆ’ ಎಂದರು.
‘ದಾಳಿ ಬಗ್ಗೆ ಇಬ್ಬರು ಮಹಿಳಾ ಅಧಿಕಾರಿಗಳು ಮಾಹಿತಿ ನೀಡಿದ್ದು ಕೂಡ ಕೇಂದ್ರದ ಸ್ಪಷ್ಟ ಸಂದೇಶವಾಗಿದೆ. ಭಯೋತ್ಪಾದನೆ ಮೂಲೋತ್ಪಾಟನೆಯಲ್ಲಿ ಎಲ್ಲರೂ ಒಂದಾಗಿದ್ದೇವೆ ಎನ್ನುವ ಸಂದೇಶವನ್ನು ದೇಶವು ಇಡೀ ಜಗತ್ತಿ ಸಾರಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.