ADVERTISEMENT

ಕಾಂಗ್ರೆಸ್‌ ಜನಾಂದೋಲನ ಸಮಾವೇಶ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ‘ಕೈ’ ಪಡೆ

ಎಂ.ಮಹೇಶ
Published 9 ಆಗಸ್ಟ್ 2024, 23:30 IST
Last Updated 9 ಆಗಸ್ಟ್ 2024, 23:30 IST
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಕೆ‍ಪಿಸಿಸಿ ಆಯೋಜಿಸಿದ್ದ ‘ಕಾಂಗ್ರೆಸ್ ಜನಾಂದೋಲನ’ ಸಮಾವೇಶದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಕೆ‍ಪಿಸಿಸಿ ಆಯೋಜಿಸಿದ್ದ ‘ಕಾಂಗ್ರೆಸ್ ಜನಾಂದೋಲನ’ ಸಮಾವೇಶದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ‘ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ, ಅಧಿಕಾರ ದುರುಪಯೋಗ ಮತ್ತು ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ದುರುದ್ದೇಶದ ಪಾದಯಾತ್ರೆ’ಯ ವಿರುದ್ಧ ‘ಕಾಂಗ್ರೆಸ್‌ ಜನಾಂದೋಲನ ಸಮಾವೇಶವು ಇಲ್ಲಿ ಶುಕ್ರವಾರ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಇಡೀ ಪಕ್ಷವೇ ನಿಂತಿದೆ ಎಂಬ ಸಂದೇಶವನ್ನು ಈ ಸಮಾವೇಶ ರವಾನಿಸಿತು.

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶವು ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಒಗ್ಗಟ್ಟು ಪ್ರದರ್ಶಿಸಿದ ಪಕ್ಷದ ನಾಯಕರು ಬಿಜೆಪಿ–ಜೆಡಿಎಸ್‌ನ ‘ಮೈಸೂರು ಚಲೋ ಪಾದಯಾತ್ರೆ’ ವಿರುದ್ಧ ತೊಡೆ ತಟ್ಟಿದರು.

‘ವಿರೋಧ ಪಕ್ಷದವರು ಎಷ್ಟೇ ಪಾದಯಾತ್ರೆಗಳನ್ನು ನಡೆಸಿದರೂ ನಾವು ಜಗ್ಗುವುದಿಲ್ಲ; ಸಿದ್ದರಾಮಯ್ಯ ಬೆನ್ನಿಗೆ ಸದಾ ನಿಲ್ಲುತ್ತೇವೆ’ ಎಂಬ ಶಪಥವನ್ನು ಕಾಂಗ್ರೆಸ್‌ ಪಡೆ ಮಾಡಿತು. ‘ರಾಜ್ಯಪಾಲರು ಮುಖ್ಯಮಂತ್ರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು’ ಎಂಬ ಹಕ್ಕೊತ್ತಾಯದ ರಣಕಹಳೆಯನ್ನೂ ನಾಯಕರು ಮೊಳಗಿಸಿದರು. ಬಿಜೆಪಿ–ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದು ಬಿಟ್ಟರೆ, ಸಿದ್ದರಾಮಯ್ಯ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಲಿಲ್ಲ.

ADVERTISEMENT
‘ಸುಳ್ಳು ಆರೋಪಗಳಿಗೆ ಉತ್ತರಿಸಿ’
‘ಪರಿಶಿಷ್ಟರು, ಆದಿವಾಸಿಗಳು, ಬಡವರ ಪರವಾಗಿ ಕೆಲಸ ಮಾಡುವ ಸಿದ್ದರಾಮಯ್ಯ ವಿರುದ್ಧ ಮಾಡಿರುವ ಸುಳ್ಳು ಆರೋಪಗಳಿಗೆ ಉತ್ತರ ನೀಡಬೇಕಾಗಿದೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದರು.
‘ಕ್ಲೀನ್ ಸ್ವಾಮಿ’ ವಿರುದ್ಧದ ಪ್ರಕರಣ ಬಿಚ್ಚಿಡುವೆ
‘ಕುಮಾರಸ್ವಾಮಿ ಬಹಳ ಕ್ಲೀನ್ ಸ್ವಾಮಿಯಂತೆ. ಅವರ ವಿರುದ್ಧ 50 ಡಿನೋಟಿಫಿಕೇಶನ್ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದು, ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗುಡುಗಿದರು. ‘ಅವರ ಪ್ರಕರಣದಲ್ಲಿ ವಿಚಾರಣೆ ನಡೆಸಲು ಲೋಕಾಯುಕ್ತದವರು ರಾಜ್ಯಪಾಲರಿಗೂ ಪತ್ರ ಬರೆದಿದ್ದಾರಂತೆ. ಆದರೆ, ಕುಮಾರಸ್ವಾಮಿ ಯೂಟರ್ನ್ ತೆಗೆದುಕೊಂಡು ಬಿಜೆಪಿ ಮೊರೆ ಹೋಗಿದ್ದಾರೆ’ ಎಂದು ಟೀಕಿಸಿದರು. ‘ಕುಮಾರಸ್ವಾಮಿ ಜೆಡಿಎಸ್‌ನಲ್ಲಿ ಯಾರನ್ನೂ ಬೆಳೆಯಲು ಬಿಡಲಿಲ್ಲ. ಮಗನಿಗೆ ರಾಜಕೀಯದಲ್ಲಿ ದಾರಿ ಮಾಡಿಕೊಡಲು ಹಲವು ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಮಗನಿಗೆ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿ ಅವನ ಮೇಲೂ ಕೇಸ್ ದಾಖಲಾಗುವಂತೆ ಮಾಡಿದ್ದಾರೆ. ಅಂಥವರು ಸಿದ್ದರಾಮಯ್ಯ ಹಾಗೂ ನನ್ನನ್ನು ಬಿಡುತ್ತಾರಾ? ಆದರೆ, ಅದರಲ್ಲಿ ಯಶಸ್ವಿಯಾಗುವುದಿಲ್ಲ’ ಎಂದು ಹೇಳಿದರು.
ಸಿದ್ದರಾಮಯ್ಯಗೆ ಹುರುಪು:
ಸಿದ್ದರಾಮಯ್ಯ ತವರಿನಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಇಡೀ ಸಂಚಿವ ಸಂಪುಟ, ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ಹಾಗೂ ನಾಯಕರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸುವ ಜೊತೆಗೆ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಕ್ಷಿಯಾದರು.

ಬಿಜೆಪಿ–ಜೆಡಿಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ಬಿಟ್ಟರೆ, ಅವರ ಸರ್ಕಾರದ ಅವಧಿಯ ಹಗರಣಗಳಿಗೆ ಸಂಬಂಧಿಸಿ ಯಾವ ದಾಖಲೆಯನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಿಡುಗಡೆ ಮಾಡಲಿಲ್ಲ. ‘ಬಿ.ಎಸ್. ಯಡಿಯೂರಪ್ಪನ ಕಾಲದ ಹಗರಣಗಳನ್ನೆಲ್ಲಾ ಬಿಚ್ಚಿಡುತ್ತೇನೆ’ ಎಂದು ಹೇಳಿ ಕುತೂಹಲ ಉಂಟು ಮಾಡಿದ್ದ ಸಿದ್ದರಾಮಯ್ಯ ಮಾತು ಹೇಳಿಕೆಗಷ್ಟೆ ಸೀಮಿತವಾಯಿತು.

ಇದೇ ವೇಳೆ, ‘ಬಿಜೆಪಿ-ಜೆಡಿಎಸ್ ದೋಸ್ತಿ ರಾಂಗ್ ಟರ್ನ್’ ಎಂಬ ಶೀರ್ಷಿಕೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿ.ಪಿ. ಯೋಗೇಶ್ವರ್, ಬಸನಗೌಡ ಪಾಟೀಲ ಯತ್ನಾಳ ಮೊದಲಾದವರು ಮಾಡಿದ್ದ ಆರೋಪ–ಪ್ರತ್ಯಾರೋ‍ಪದ ಭಾಷಣದ ತುಣುಕುಗಳನ್ನು ದೊಡ್ಡ ಎಲ್‌ಇಡಿ ಪರದೆಗಳ ಮೂಲಕ ಪ್ರದರ್ಶಿಸಲಾಯಿತು.

ಮುಡಾ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್‌ ನಡೆಸುತ್ತಿರುವ ಪಾದಯಾತ್ರೆಗೆ ತಿರುಗೇಟು ನೀಡಿದ ಕಾಂಗ್ರೆಸ್ ಪಡೆಯು, ‘ಸತ್ಯಮೇವ ಜಯತೆ’ ಎಂಬ ಆಶಾಭಾವ ವ್ಯಕ್ತ‍ಪಡಿಸಿತು. ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡು ಮುಖ್ಯಮಂತ್ರಿಗೆ ಶಕ್ತಿ ತುಂಬಿದರು. ‘ನಾವು ನಿಮ್ಮೊಂದಿಗಿದ್ದೇವೆ; ನೀವು ರಾಜೀನಾಮೆ ನೀಡುವುದು ಬೇಡ’ ಎಂಬ ಅಭಯವನ್ನೂ ನೀಡಿದರು. ಅದರೊಂದಿಗೆ, ಬಿಡದಿಯಿಂದ ಆ.2ರಿಂದ ಹಮ್ಮಿಕೊಂಡಿದ್ದ ಜನಾಂದೋಲನಕ್ಕೆ ತೆರೆ ಬಿತ್ತು.

ವಾಗ್ದಾಳಿ, ತಿರುಗೇಟು:

ವಿರೋಧ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸುತ್ತಾ, ಅವರ ಆರೋಪಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ, ‘ನಾನು ಕಾನೂನುಬಾಹಿರವಾದ ಯಾವುದೇ ಕೆಲಸ ಮಾಡಿಲ್ಲ’ ಎಂದು ಸಮರ್ಥಿಸಿಕೊಂಡರು.

ಚುನಾವಣಾ ಪ್ರಚಾರ ಸಭೆಗಳಲ್ಲೂ ಕಾಣದಷ್ಟು ಒಗ್ಗಟ್ಟು ಸಮಾವೇಶದಲ್ಲಿ ಕಂಡುಬಂದಿದ್ದು ವಿಶೇಷವಾಗಿತ್ತು. ತಮ್ಮ ಹೆಸರು ಹೇಳುತ್ತಿದ್ದಂತೆಯೇ ಕಾರ್ಯಕರ್ತರಿಂದ ಬರುತ್ತಿದ್ದ ಶಿಳ್ಳೆ, ಚಪ್ಪಾಳೆ ಹಾಗೂ ಹರ್ಷೋದ್ಗಾರವನ್ನು ಕಂಡು ಸಿದ್ದರಾಮಯ್ಯ ಪುಳಕಗೊಂಡು, ಹುಮ್ಮಸ್ಸು ತುಂಬಿಕೊಂಡರು. 

ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ಶಾಸಕ ಎ.ಎಸ್.ಪೊನ್ನಣ್ಣ ಅವರು ‘ಮುಡಾ ಹಗರಣದ ಸತ್ಯಾಸತ್ಯತೆ’ಗಳ ಬಗ್ಗೆ ಹೊರತಂದಿರುವ ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಕ್ಕೆ ನೂರು ಕಳಂಕರಹಿತ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಗುವುದು ಎಂದೂ ಪಕ್ಷದ ಪ್ರಮುಖರು ತಿಳಿಸಿದರು.

ಯಾರು ರಾಜೀನಾಮೆ ಕೊಡುತ್ತಾರೆ ಎಂಬುದನ್ನು ಕಾಲ ತೀರ್ಮಾನಿಸುತ್ತದೆ
ಡಿ.ಕೆ. ಶಿವಕುಮಾರ್. ಉ‍ಪ ಮುಖ್ಯಮಂತ್ರಿ
ಶಕುನಿಗಳಂತೆ ಪಾದಯಾತ್ರೆ: ಟೀಕೆ ‘
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ₹5300 ಕೋಟಿ ಅನುದಾನವನ್ನು ಈವರೆಗೂ ಕೊಟ್ಟಿಲ್ಲ. 15ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಮೋಸ ಮಾಡಲಾಗಿದೆ. ಮೇಕೆದಾಟು ಮಹದಾಯಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಬೆಂಗಳೂರು ಕಿತ್ತೂರು ಕರ್ನಾಟಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೈ ಜೋಡಿಸುತ್ತಿಲ್ಲ’ ಎಂದು ದೂರಿದರು. ‘ಬಿಜೆಪಿ–ಜೆಡಿಎಸ್‌ನವರು ದುರ್ಯೋಧನ ಶಕುನಿಗಳಂತೆ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ನಡೆಸುತ್ತಿರುವುದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧದ ಪಾದಯಾತ್ರೆಯಲ್ಲ ಗ್ಯಾರಂಟಿ ಯೋಜನೆಗಳು ಮತ್ತು ಮಹಿಳೆಯರ ವಿರುದ್ಧದ ಯಾತ್ರೆ’ ಎಂದು ಟೀಕಿಸಿದರು. ‘ವಿರೋಧ ಪಕ್ಷದವರು ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಹಾಗೂ ನಮಗೆ ಶಕ್ತಿ ತುಂಬಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.