ADVERTISEMENT

ಸಿದ್ದರಾಮಯ್ಯ ಇರುವವರೆಗೂ ಜನಪರ ಕಾರ್ಯ: ಶಿವಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 3:10 IST
Last Updated 9 ನವೆಂಬರ್ 2025, 3:10 IST
ಮೈಸೂರಿನಲ್ಲಿ ಕನಕ ಜಯಂತಿ ಅಂಗವಾಗಿ ಶನಿವಾರ ಮೆರವಣಿಗೆ ನಡೆಯಿತು– ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಕನಕ ಜಯಂತಿ ಅಂಗವಾಗಿ ಶನಿವಾರ ಮೆರವಣಿಗೆ ನಡೆಯಿತು– ಪ್ರಜಾವಾಣಿ ಚಿತ್ರ   

ಮೈಸೂರು: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವವರೆಗೂ ಜನಪರ ಹಾಗೂ ಸಮಾಜ ಕಲ್ಯಾಣ ಯೋಜನೆಗಳು ಜಾರಿಯಲ್ಲಿರಲಿವೆ’ ಎಂದು ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಹೇಳಿದರು.

ಇಲ್ಲಿನ ಕಲಾಮಂದಿರದಲ್ಲಿ ಶನಿವಾರ ಕನಕದಾಸ ಜಯಂತ್ಯುತ್ಸವ ಸಮಿತಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಶನಿವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪುರುಷರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ದುರುಪಯೋಗ ಆಗುತ್ತದೆ ಎಂಬುದನ್ನು ಮನಗಂಡು ಮಹಿಳೆಯರಿಗೆ ಆದ್ಯತೆ ಕೊಟ್ಟು ಕೌಟುಂಬಿಕ ವ್ಯವಸ್ಥೆ ಸುಧಾರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ’ ಎಂದು ಮೆಚ್ಚುಗೆ ವ್ಯಕ್ತ‍ಪಡಿಸಿದರು.

ADVERTISEMENT

ಹೋಗಲಾಡಿಸಲು ಶ್ರಮಿಸಿದರು:

‘ಧರ್ಮದ ಉನ್ನತಿಗೆ, ಅಧರ್ಮವನ್ನು ಹೋಗಲಾಡಿಸಲು ಹಲವು ಮಹಾತ್ಮರು ಶ್ರಮಿಸಿದರು. ಆಯಾ ಕಾಲಘಟ್ಟದಲ್ಲಿ ಒಬ್ಬೊಬ್ಬರೇ ಸುಧಾರಣೆಗೆ ಹೋರಾಡಿದರು. ಪ್ರಸ್ತುತ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದಲಿತರು ಹೋರಾಟ ಮಾಡುತ್ತಿದ್ದೇವೆ. ಇಷ್ಟಾದರೂ ಸಮ ಸಮಾಜ ನಿರ್ಮಾಣವಾಗಿಲ್ಲ. ಇದಕ್ಕೆ ಈ ಸಮಾಜಗಳ ದೌರ್ಬಲ್ಯವೇ ಕಾರಣ’ ಎಂದು ವಿಶ್ಲೇಷಿಸಿದರು.

‘ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಲಾಭ ಪಡೆದವರಿಗೆ ಆ ಬಗ್ಗೆ ಗೌರವ ಇರಬೇಕು. ಹಿಂದುಳಿದ ವರ್ಗದವರೇ ಆ ಯೋಜನೆಗಳ ವಿರುದ್ಧ ಮಾತನಾಡಬಾರದು’ ಎಂದರು.

ಅಮೂಲ್ಯ ರತ್ನ: 

ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ನಾಡಿನ ಸಾಹಿತ್ಯ ಲೋಕದ ಅಮೂಲ್ಯ ರತ್ನ ಕನಕದಾಸರು. ಕ್ರಾಂತಿಕಾರಿ ವಿಚಾರಗಳನ್ನು ಮಂಡಿಸಿದವರು. ಅವರ ಒಂದೊಂದು ಕೀರ್ತನೆ ಬಗ್ಗೆಯೂ ಪಿಎಚ್‌.ಡಿ ಮಾಡಬಹುದು’ ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್, ‘ಮಹನೀಯರ ಆದರ್ಶಗಳನ್ನು ಇಂದಿನ ಸಮಾಜ ಅನುಸರಿಸುತ್ತಿಲ್ಲ. ಹೀಗಾಗಿ ಮೌಲ್ಯಗಳು ಅಧಃಪತನವಾಗುತ್ತಿವೆ. ಸಮ ಸಮಾಜ ನಿರ್ಮಾಣಕ್ಕೆ ದಾರ್ಶನಿಕರ ಆದರ್ಶಗಳು ಮುಖ್ಯ. ಅವುಗಳನ್ನು ನಾವು ಪಾಲಿಸಬೇಕು’ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಹರೀಶ್‌ಗೌಡ, ‘ಕನಕದಾಸರ ಕೀರ್ತನೆಗಳ ಸಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಕೆ.ಶಿವಕುವಾರ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ನಗರಪಾಲಿಕೆ ಉಪ ಆಯುಜ್ತ ಜಿ.ಸೋಮಶೇಖರ್, ಜಯಂತ್ಯುತ್ಸವ ಸಮಿತಿಯ ಮಹಾದೇವಗೌಡ, ವಿಶ್ವನಾಥ, ಟಿ.ಬಿ.ಚಿಕ್ಕಣ್ಣ, ನಾಗೇಂದ್ರ ಪಾಲ್ಗೊಂಡಿದ್ದರು.

ಮೆರುಗು ನೀಡಿದ ಮೆರವಣಿಗೆ: 

ಇದಕ್ಕೂ ಮುನ್ನ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಶಾಸಕ ಜಿ.ಟಿ. ದೇವೇಗೌಡ ಚಾಲನೆ ನೀಡಿದರು. ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳು ಮೆರುಗು ನೀಡಿದವು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಶಾಸಕರಾದ ತನ್ವೀರ್ ಸೇಠ್ ಕೆ.ಹರೀಶ್‌ಗೌಡ ಮೊದಲಾದ ಗಣ್ಯರು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು– ಪ್ರಜಾವಾಣಿ ಚಿತ್ರ 

‘ಹೊಟ್ಟೆಕಿಚ್ಚಿನಿಂದ ಟೀಕೆ’

‘ಸ್ವಾಭಿಮಾನ ಘನತೆಯ ಬದುಕಿಗಾಗಿ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟಿದೆ. ಆದರೆ ಅದರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಬಡತನವನ್ನೇ ಕಾಣದವರು ಗ್ಯಾರಂಟಿಗಳನ್ನು ಟೀಕಿಸುತ್ತಿದ್ದಾರೆ. ಹಿಂದುಳಿದ ವರ್ಗದ ವ್ಯಕ್ತಿ 2ನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹೊಟ್ಟೆಕಿಚ್ಚಿನಿಂದ ಟೀಕಿಸುತ್ತಿದ್ದಾರೆ’ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ರಂಜಿಸಿದ ‘ಕನಕ ಭಕ್ತಿ ಸಂಗೀತ ಸುಧೆ’

ನಿವೃತ್ತ ಅಧಿಕಾರಿ ಕಾ. ರಾಮೇಶ್ವರಪ್ಪ ಅವರ ತಂಡದವರು ‘ಕನಕ ಭಕ್ತಿ ಸಂಗೀತ ಸುಧೆ’ ಪ್ರಸ್ತುತಪಡಿಸಿ ನೆರೆದಿದ್ದವರನ್ನು ರಂಜಿಸಿದರು. ‘ನಮ್ಮಮ್ಮ ಶಾರದೆ’ ‘ತೊರೆದು ಜೀವಿಸಬಹುದೇ’ ‘ದಾಸ ದಾಸರ ಮನೆಯ’ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ‘ಬಾಗಿಲನು ತೆರೆದು’ ‘ಕುಲ ಕುಲ ಕುಲವೆಂದು’ ಮೊದಲಾದ ಗೀತೆಗಳನ್ನು ಹಾಡಿ ಮೆಚ್ಚುಗೆ ಗಳಿಸಿದರು.  ರಾಮೇಶ್ವರಪ್ಪ ಅವರೊಂದಿಗೆ ಬಸವರಾಜ್ ಬಿ. ನರಸಿಂಹಮೂರ್ತಿ ಸಿ.ಎಂ. ರವಿರಾಜ್ ಅರುಣ್ ಕುಮಾರ್ ಉಮೇಶ್ ಸ್ಪಂದನಾ ರಾಮೇಶ್ವರ್ ದನಿಡಿಸಿದರು. ‍ಪಕ್ಕವಾದ್ಯದಲ್ಲಿ ಗಣೇಶ್ ಭಟ್ (ಕೀ ಬೋರ್ಡ್) ಮಹದೇವ್ (ತಬಲಾ) ಪ್ರದೀಪ್‌ (ರಿದಂ) ಪುನೀತ್ (ಕೊಳಲು) ಸಾಥ್ ನೀಡಿದರು. ಭಾಗ್ಯವಂತ ನಿರ್ವಹಿಸಿದರು. 

ಕನಕದಾಸರ ಸಂದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಕೌಟುಂಬಿಕ ಸಮಸ್ಯೆಗಳು ಇರುವುದಿಲ್ಲ
ಶಿವಾನಂದಪುರಿ ಸ್ವಾಮೀಜಿ ಕಾಗಿನೆಲೆ ಶಾಖಾ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.