ADVERTISEMENT

ಮೈಸೂರು: ದಿನವಿಡಿ ಮದ್ಯದ ವಹಿವಾಟು; ಎಲ್ಲೆಡೆ ಘಾಟು

ಮುಂಜಾನೆಯೇ ಸರತಿಯಲ್ಲಿ ನಿಂತರು; ಕಾಸಿದಷ್ಟು ಖರೀದಿಸಿ ಮನೆಗೊಯ್ದರು

ಡಿ.ಬಿ, ನಾಗರಾಜ
Published 5 ಮೇ 2020, 2:04 IST
Last Updated 5 ಮೇ 2020, 2:04 IST
ಮೈಸೂರಿನ ದೇವರಾಜ ಅರಸು ರಸ್ತೆಯ ಮದ್ಯದ ಅಂಗಡಿ ಮುಂಭಾಗ ಖರೀದಿಗಾಗಿ ಜನರ ಸರತಿ
ಮೈಸೂರಿನ ದೇವರಾಜ ಅರಸು ರಸ್ತೆಯ ಮದ್ಯದ ಅಂಗಡಿ ಮುಂಭಾಗ ಖರೀದಿಗಾಗಿ ಜನರ ಸರತಿ   

ಮೈಸೂರು: ಮುಂಜಾನೆಯೇ ಸರತಿಯಲ್ಲಿ ನಿಂತರು. ತಮ್ಮ ಪಾಳಿ ಬರುವ ತನಕವೂ ಕಾದರು. ನೆತ್ತಿ ಸುಡುವ ಕೆಂಡದಂತಹ ಬಿಸಿಲಿಗೂ ಕಿಂಚಿತ್ ಕದಲಲಿಲ್ಲ. ಜೇಬಲ್ಲಿ ಕಾಸಿದಷ್ಟು ಖರೀದಿಸಿದರು...

ಮೈಸೂರು ನಗರ ಸೇರಿದಂತೆ ಜಿಲ್ಲೆಯ ನಗರ/ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿನ ಮದ್ಯದಂಗಡಿಗಳ ಮುಂಭಾಗ ಸೋಮವಾರ ದಿನವಿಡಿ ಗೋಚರಿಸಿದ ಚಿತ್ರಣವಿದು.

ಯುವಕರು, ಮಧ್ಯ ವಯಸ್ಕರು, ವೃದ್ಧರು ಎನ್ನದೇ ಎಲ್ಲರೂ ಮದ್ಯ ಖರೀದಿಗಾಗಿ ಸರತಿಯಲ್ಲಿ ನಿಂತು ಕಾದರು. ಹಲವರು ಮದ್ಯ ಖರೀದಿಸಿ ಸಂಭ್ರಮಿಸಿದರು. ಕೆಲವರಂತೂ ಮದ್ಯದ ಬಾಟಲಿಗಳು ತಮ್ಮ ಕೈ ಸೇರುತ್ತಿದ್ದಂತೆ, ಅಂಗಡಿಯಿಂದ ಅನತಿ ದೂರಕ್ಕೆ ತೆರಳಿ ಕುಡಿದು ಖುಷಿಪಟ್ಟರು.

ADVERTISEMENT

ನಗರ ಪ‍್ರದೇಶದಲ್ಲಿನ ಬಹುತೇಕ ಅಂಗಡಿಗಳ ಮುಂಭಾಗ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಗೋಚರಿಸಿತು. ಪಟ್ಟಣ ಪ್ರದೇಶ, ಗ್ರಾಮೀಣ ಪರಿಸರದಲ್ಲಿ ಮಾಸ್ಕ್‌, ಅಂತರ ಕಾಯ್ದುಕೊಳ್ಳುವಿಕೆಯ ಲಕ್ಷಣವೇ ಕಾಣಲಿಲ್ಲ. ಕೆಲವೊಂದು ಅಂಗಡಿ ಮುಂಭಾಗ ಕಿ.ಮೀ. ಉದ್ದದ ಸರತಿ ಗೋಚರಿಸಿತು.

ಮೈಸೂರಿನ ಕೆ.ಟಿ.ಸ್ಟ್ರೀಟ್‌ನ ಗಣೇಶ ವೈನ್ಸ್‌ ಸೇರಿದಂತೆ ವಿವಿಧ ಮದ್ಯದಂಗಡಿ ಮುಂಭಾಗ ಜನದಟ್ಟಣೆ ಗೋಚರಿಸಿತು. ಗಣೇಶ ವೈನ್ಸ್‌ ಬಳಿ ಜನರ ಸಂಖ್ಯೆ ಹೆಚ್ಚಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ ನಿಯಂತ್ರಿಸಿದರು. ಕನಿಷ್ಠ ಅಂತರ ಕಾಪಾಡಿಕೊಳ್ಳುವಂತೆ ‘ಪಾನ’ ಪ್ರಿಯರಿಗೆ ಎಚ್ಚರಿಕೆ ನೀಡಿದ ದೃಶ್ಯಗಳು ಕಂಡು ಬಂದವು. ಹಲವೆಡೆ ಬ್ಯಾರಿಕೇಡ್ ಅಳವಡಿಸಲಾಗಿತ್ತು.

ಪೂಜೆ

ಚಾಮರಾಜ ಮೊಹಲ್ಲಾದ ಮದ್ಯದ ಅಂಗಡಿಯೊಂದರಲ್ಲಿ ಪೂಜೆ ನೆರವೇರಿಸಿದ ಬಳಿಕವೇ ವಹಿವಾಟು ನಡೆಸಿದ್ದು ಗಮನ ಸೆಳೆಯಿತು.

ಅಂಗಡಿಯ ಮಾಲೀಕ ಸಂಪ್ರದಾಯ ಬದ್ಧವಾಗಿ ಪೂಜೆ ನೆರವೇರಿಸಿದರು. ಮದ್ಯ ಖರೀದಿಗಾಗಿ ಬಂದವರಿಗೆ ಮೊದಲು ಪ್ರಸಾದ ರೂಪದಲ್ಲಿ ಕಡ್ಲೆಪುರಿ, ಪೇಡ ವಿತರಿಸಿದರು. ಪೂಜೆ, ಪ್ರಸಾದ ವಿತರಣೆ ಬಳಿಕ ಯಾವುದೇ ಅಡ್ಡಿ ಬಾರದಿರಲಿ ಎಂದು ಈಡುಗಾಯಿ ಒಡೆದಿದ್ದು ವಿಶೇಷವಾಗಿತ್ತು.

ಅಂಗಡಿಯವರ ಹರಸಾಹಸ

ಒಂದೂವರೆ ತಿಂಗಳ ಆಸುಪಾಸಿನ ಬಳಿಕ ಮದ್ಯದಂಗಡಿ ತೆರೆಯುತ್ತಿದ್ದಂತೆ, ಖರೀದಿಗಾಗಿ ಜಮಾಯಿಸಿದ ಜನರನ್ನು ನಿಯಂತ್ರಿಸುವಲ್ಲಿ ಮದ್ಯದ ಅಂಗಡಿ ಮಾಲೀಕರು, ಸಿಬ್ಬಂದಿ ಹೈರಾಣಾದರು.

ಬೆಳಿಗ್ಗೆಯಿಂದ ಬಾಗಿಲು ಮುಚ್ಚುವ ತನಕವೂ ವಹಿವಾಟು ನಡೆಯಿತು. ದುಬಾರಿ ಬೆಲೆಯ ಮದ್ಯ, ವಿವಿಧ ಬ್ರ್ಯಾಂಡ್ ಮದ್ಯ ಬಹುತೇಕ ಕಡೆ ಮಧ್ಯಾಹ್ನದ ವೇಳೆಗೆ ಖಾಲಿಯಾಗಿತ್ತು. ಯಾವುದು ಸಿಕ್ಕಿತು ಅದನ್ನೇ ಖರೀದಿಸಿದವರ ಸಂಖ್ಯೆಯೂ ಮುಸ್ಸಂಜೆ ವೇಳೆಗೆ ಹೆಚ್ಚಾಗಿತ್ತು.

ಹಲವು ಅಂಗಡಿಗಳಲ್ಲಿ ಒಬ್ಬೊಬ್ಬರಿಗೆ ಇಂತಿಷ್ಟು ಬಾಟಲಿ ಎಂದು ನಿಗದಿಪಡಿಸಲಾಗಿತ್ತು. ಕೆಲವೆಡೆ ಬೇಕಾದಷ್ಟು ಖರೀದಿಗೆ ಅವಕಾಶವೂ ಇತ್ತು. ತಮಗೆ ಸಾಕಷ್ಟು ಮದ್ಯ ಸಿಗದಿದ್ದರಿಂದ, ಮದ್ಯ ಪ್ರಿಯರು ವಿವಿಧೆಡೆ ಸಂಚರಿಸಿ, ಸಾಕಾಗುವಷ್ಟು ಖರೀದಿಸಿ ಸಂಗ್ರಹಿಸಿದ ಚಿತ್ರಣವೂ ಕಂಡು ಬಂದಿತು.

297 ಮದ್ಯದಂಗಡಿಯಲ್ಲಿ ವಹಿವಾಟು

‘ಮೈಸೂರು ನಗರ/ಜಿಲ್ಲೆಯಲ್ಲಿ ಸಿಎಲ್‌–2, ಎಂಎಸ್‌ಐಎಲ್ ಮಳಿಗೆಗಳು ಸೇರಿದಂತೆ ಒಟ್ಟು 301 ಅಂಗಡಿಗಳಿವೆ. ಇವುಗಳಲ್ಲಿ 297 ಅಂಗಡಿಗಳು ಸೋಮವಾರ ನಿಗದಿತ ಸಮಯಕ್ಕೆ ಬಾಗಿಲು ತೆರೆದು ವಹಿವಾಟು ನಡೆಸಿವೆ’ ಎಂದು ಅಬಕಾರಿ ಆಯುಕ್ತ ಕೆ.ಎಸ್.ಮುರಳಿ ‘ಪ್ರಜಾವಾಣಿ’‌ಗೆ ತಿಳಿಸಿದರು.

‘ಕಂಟೈನ್‌ಮೆಂಟ್ ಜೋನ್‌ನಲ್ಲಿರುವ ತಿ.ನರಸೀಪುರ ತಾಲ್ಲೂಕಿನ ಬನ್ನೂರು ಪಟ್ಟಣದಲ್ಲಿ ಒಂದು ಅಂಗಡಿ, ಮೈಸೂರಿನಲ್ಲಿ ಕಾಂಪ್ಲೆಕ್ಸ್‌, ಶಾಪಿಂಗ್ ಮಾಲ್‌ನಲ್ಲಿರುವ ಮೂರು ಅಂಗಡಿಗಳು ಬಾಗಿಲು ತೆರೆದಿಲ್ಲ’ ಎಂದು ಮಾಹಿತಿ ನೀಡಿದರು.

ಜಾಗೃತಿ ಮೂಡಿಸಿದ ಪಾಲಿಕೆ ಸದಸ್ಯ

ಮದ್ಯದ ವಹಿವಾಟು ಆರಂಭಗೊಂಡ ಬೆನ್ನಿಗೆ, ಮೈಸೂರು ಮಹಾನಗರ ಪಾಲಿಕೆಯ ಸದಸ್ಯ ಮಾ.ವಿ.ರಾಮಪ್ರಸಾದ್ ಜಾಗೃತಿ ಮೂಡಿಸುವ ಕೆಲಸ ನಡೆಸಿದರು.

ನಂಜು ಮಳಿಗೆ ವೃತ್ತದಲ್ಲಿನ ಮದ್ಯದ ಅಂಗಡಿ ಬಳಿ, ಮದ್ಯ ಖರೀದಿಗೆ ಬಂದವರಿಗೆ ಮಾಸ್ಕ್ ಕೊಟ್ಟರು. ಸ್ಯಾನಿಟೈಸರ್‌ ಬಳಸುವಂತೆ ಸಲಹೆ ನೀಡಿದರು.

‘ಮದ್ಯಪಾನ ಜೀವಕ್ಕೆ ಹಾನಿಕರ. ಇರುವ ಸ್ವಲ್ಪ ಹಣವನ್ನು ಮದ್ಯ ಕುಡಿದು ಸಂಸಾರ ಹಾಳು ಮಾಡಬೇಡಿ. ಸಾರಾಯಿ ಸಹವಾಸ, ಹೆಂಡತಿ ಮಕ್ಕಳ ಉಪವಾಸ’ ಎಂದು ಬರೆದಿದ್ದ ಭಿತ್ತಿ ಫಲಕಗಳನ್ನು ಇದೇ ಸಂದರ್ಭ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.