ADVERTISEMENT

ಹುಣಸೂರು: ಸಿಟಿಆರ್‌ಐ 3 ವರ್ಷದ ಪ್ರಯೋಗ ಯಶಸ್ಸು

ತಂಬಾಕು ಕುಡಿ ನಿರ್ವಹಣೆಯಲ್ಲಿ ಸಕ್ಕರ್‌ ಸ್ಟಾಪ್‌ ಸಾಧನೆ ಮೈಲುಗಲ್ಲು

ಎಚ್.ಎಸ್.ಸಚ್ಚಿತ್
Published 27 ಆಗಸ್ಟ್ 2025, 6:07 IST
Last Updated 27 ಆಗಸ್ಟ್ 2025, 6:07 IST
ಹುಣಸೂರು ತಾಲ್ಲೂಕಿನ ತಂಬಾಕು ಬೆಳೆಗಾರರು ಕೇಂದ್ರೀಯ ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿದ ಸಕ್ಕರ್‌ ಸ್ಟಾಪ್‌ ಔಷಧಿಯನ್ನು ತಂಬಾಕು ಕುಡಿ ನಿರ್ವಹಣೆಯಲ್ಲಿ ಬಳಸುತ್ತಿರುವುದು
ಹುಣಸೂರು ತಾಲ್ಲೂಕಿನ ತಂಬಾಕು ಬೆಳೆಗಾರರು ಕೇಂದ್ರೀಯ ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿದ ಸಕ್ಕರ್‌ ಸ್ಟಾಪ್‌ ಔಷಧಿಯನ್ನು ತಂಬಾಕು ಕುಡಿ ನಿರ್ವಹಣೆಯಲ್ಲಿ ಬಳಸುತ್ತಿರುವುದು   

ಹುಣಸೂರು: ತಂಬಾಕು ಬೆಳೆಯಲ್ಲಿ ಮಾರಕವಾಗುವ ಕುಡಿ ಮತ್ತು ಕಂಕಳು ಕುಡಿ ನಿರ್ವಹಣೆಗೆ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರವು ಫ್ಲೂಮಟಲಿಯನ್‌ ರಾಸಾಯನಿಕ ಬಳಸಿ ಸಿದ್ಧಪಡಿಸಿದ ‘ಸಕ್ಕರ್‌ ಸ್ಟಾಪ್‌’ ಔಷಧಿ ರೈತರಿಗೆ ವರದಾನವಾಗಿದೆ.

ಕುಡಿ ಒಡೆಯುವುದರಿಂದ ರೈತರಿಗೆ ಇಳುವರಿ ಕುಂಠಿತ, ಉತ್ಪಾದನ ವೆಚ್ಚ ಹೆಚ್ಚಳ ಹಾಗೂ ಫಸಲು ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಈ ಹಿಂದೆ ಕುಡಿಯನ್ನು ಕತ್ತರಿಸುವ ಪ್ರಕ್ರಿಯೆ ನಡೆಸಿ, ತಂಬಾಕು ಎಲೆಗೆ ಪೌಷ್ಟಿಕಾಂಶವನ್ನು ದೊರಕಿಸುವ ಪ್ರಯತ್ನ ನಡೆದರೆ ನಿರೀಕ್ಷಿತ ಫಲಿತಾಂಶ ಸಿಗುತ್ತಿರಲಿಲ್ಲ. ಎಲೆ ಉದರಿ ನಷ್ಟವಾಗುತ್ತಿತ್ತು.

‘ಈಗ ಹೈದರಬಾದ್‌ನ ಎಂ.ಆರ್.‌ ಬಯೋ ಕೆಮಿಕಲ್ಸ್‌ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರಯೋಗಾಲಯದಲ್ಲಿ ಸತತ 3 ವರ್ಷ ಫ್ಲೊಮಟಲಿಯನ್‌ ಅಂಶವುಳ್ಳ ರಾಸಾಯನಿಕ ಬಳಸಿ ಉತ್ಪಾದಿಸಿದ ಔಷಧಿಗೆ ಸಕ್ಕರ್‌ ಸ್ಟಾಪ್‌ ಎಂಬ ಹೆಸರು ನೀಡಲಾಗಿದೆ. ತಂಬಾಕು ಗಿಡದ ಕುಡಿ ಕತ್ತರಿಸಿದ ಬಳಿಕ ಕುಡಿಗೆ 20 ಮಿ.ಲೀ  ಔಷಧಿಯನ್ನು 1 ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ ಪ್ರತಿ ಗಿಡಕ್ಕೆ 8 ರಿಂದ 10 ಮಿ ಲೀ ಕುಡಿ ಭಾಗದಲ್ಲಿ ಕೊಟ್ಟರೆ ಪೌಷ್ಟಿಕಾಂಶ ಸಿಗುತ್ತದೆ’ ಎಂದು ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣನ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಔಷಧದ ಬಳಕೆಯಿಂದ ಶೇ 10 ರಿಂದ 15ರಷ್ಟು ಹೊಗೆ ಸೊಪ್ಪು ಉದುರುವಿಕೆ ತಗ್ಗಿ, ಗಿಡದ ಮಧ್ಯ ಭಾಗದ ಎಲೆ ದಪ್ಪ ಹಾಗೂ ಅಗಲ ಸರಾಸರಿ 5 ಸೆಂ.ಮೀ. ಹಿಗ್ಗುವುದರಿಂದ ತೂಕ ಹೆಚ್ಚಾಗಿ ರೈತನಿಗೆ ಲಾಭವಾಗುತ್ತದೆ. ಪ್ರತಿ ಹೆಕ್ಟೇರ್‌ ಪ್ರದೇಶಕ್ಕೆ 100 ರಿಂದ 150 ಕೆಜಿ ಇಳುವರಿ ಸಿಗಲಿದೆ’ ಎಂದರು.

‘ಔಷಧ ಬಳಸಿದ್ದರಿಂದ ಬೆಳೆ ಹುಲುಸಾಗಿ ಬೆಳೆದು 15 ರಿಂದ 20ರಷ್ಟು ಎಲೆಗಳು ಹೆಚ್ಚಾಗಿ ಸಿಕ್ಕಿವೆ. ಹದಗೊಳಿಸಿದ ತಂಬಾಕು ಗೋಲ್ಡ್‌ ಕಲರ್‌ ಇದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಸಿಗುವ ವಿಶ್ವಾಸವಿದೆ’ ಎಂದು ಕಾಳೇಗೌಡನಕೊಪ್ಪಲಿನ ರೈತ ಕೆಂಡಗಣ್ಣ ಸ್ವಾಮಿ, ಶ್ರವಣನಹಳ್ಳಿಯ ಬಾಲಕೃಷ್ಣ ತಿಳಿಸಿದರು.

ಕೇಂದ್ರೀಯ ತಂಬಾಕು ಸಂಶೋಧನಾಲಯ ಮತ್ತು ಎಂ.ಆರ್.‌ ಬಯೋ ಕೆಮಿಕಲ್ಸ್‌ ಹೈದರಬಾದ್‌ ಜೊತೆಗೂಡಿ ಅಭಿವೃದ್ಧಿಪಡಿಸಿದ ಸಕ್ಕರ್‌ ಸ್ಟಾಪ್‌ ಔಷಧ
ಸಕ್ಕರ್‌ ಸ್ಟಾಪ್‌ ಔಷಧಿ ಬಳಸಿ ಬೆಳೆಸಿ ಹದಗೊಳಿಸಿದ ಬಳಿಕ ಸಂಪೂರ್ಣ ಗೋಲ್ಡ್‌ ಕಲರ್‌ ನಲ್ಲಿರುವ ತಂಬಾಕಿನೊಂದಿಗೆ ಕಿರಿಜಾಜಿ ರೈತ ಶಿವಶೇಖರ್‌.
ಸಂಶೋಧನ ಕೇಂದ್ರದ ಹೊಸ ಔಷಧಿ ಬಳಸಿದ್ದರಿಂದ ಕುಡಿ ನಿರ್ವಹಣೆ ಸುಲಭವಾಗಿದೆ. ಹೆಚ್ಚಿನ ಲಾಭವಿದ್ದು ರೈತರು ಬಳಸಿ ಫಸಲಿನ ಗುಣಮಟ್ಟ ವೃದ್ಧಿಸಿಕೊಳ್ಳಬಹುದು
ರಿಯಾಜ್‌ ಕಡೆಮನುಗನಹಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.