ADVERTISEMENT

ಹುಣಸೂರು | ಕೈಹಿಡಿದ ಹೈನುಗಾರಿಕೆ: ವಾರ್ಷಿಕ ₹25 ಲಕ್ಷ ಆದಾಯ

ಎಚ್.ಎಸ್.ಸಚ್ಚಿತ್
Published 29 ಜನವರಿ 2024, 6:36 IST
Last Updated 29 ಜನವರಿ 2024, 6:36 IST
ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದ ದೇವರಾಜೇಗೌಡ ಅವರು ಹಸುಗಳಿಗೆ ಮೇವು ನೀಡಿದರು
ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದ ದೇವರಾಜೇಗೌಡ ಅವರು ಹಸುಗಳಿಗೆ ಮೇವು ನೀಡಿದರು   

ಹುಣಸೂರು: ಎರಡು ಹಸುವಿನಿಂದ ಹೈನುಗಾರಿಕೆ ಆರಂಭಿಸಿದ ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದ ದೇವರಾಜೇಗೌಡ ಅವರು, ಇಂದು 25 ಹಸುಗಳ ಮೂಲಕ ನಿತ್ಯ ಸರಾಸರಿ 250 ಲೀಟರ್‌ ಹಾಲು ಪೂರೈಸಿ ಜಿಲ್ಲೆಯಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರೈತರಾಗಿ ಗಮನ ಸೆಳೆದಿದ್ದಾರೆ.

ಪಿಯುಸಿ ಓದಿರುವ ದೇವರಾಜೇಗೌಡ ಅವರು, ಇಬ್ಬರು ಗಂಡು ಮಕ್ಕಳೊಂದಿಗೆ ಸಮಗ್ರ ಕೃಷಿ ಬೇಸಾಯ ನಡೆಸುತ್ತಿದ್ದು, ಹೈನುಗಾರಿಕೆಗೆ ಆದ್ಯತೆ ನೀಡಿದ್ದಾರೆ. 14 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅವರು, ವಾರ್ಷಿಕ ₹25 ಲಕ್ಷ ವಹಿವಾಟು ನಡೆಸುತ್ತಿದ್ದಾರೆ.

‘100x50 ಅಡಿ ಉದ್ದದ ಕೊಟ್ಟಿಗೆ ನಿರ್ಮಿಸಿದ್ದು, ಎಚ್‌ಎಫ್‌, ಜರ್ಸಿ ಮತ್ತು ಆಲ್ ಬ್ಲಾಕ್‌ ಹಸುಗಳನ್ನು ಸಾಕಣೆ ಮಾಡಲಾಗುತ್ತಿದೆ. ಎಚ್‌ಎಫ್ ತಳಿಯಲ್ಲಿ ಹೆಚ್ಚು ಹಾಲು, ಜರ್ಸಿಯಲ್ಲಿ ಕೊಬ್ಬಿನಾಂಶ, ಆಲ್ ಬ್ಲಾಕ್ ತಳಿಯಲ್ಲಿ ಈ ಎರಡೂ ಅಂಶ ಇರಲಿದೆ’ ಎಂದು ದೇವರಾಜೇಗೌಡ ಅವರ ಕಿರಿಯ ಪುತ್ರ ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮುಸುಕಿನಜೋಳ ಬೆಳೆದು ‘ಸೈಲೇಜ್’ ತಯಾರಿಸುತ್ತೇವೆ. ಬೆಲ್ಲ, ಉಪ್ಪು, ಪೌಷ್ಠಿಕಾಂಶಗಳ ಮಿಶ್ರಣ ಮಾಡಿ 40 ಕೆ.ಜಿ. ಬ್ಯಾಗ್‌ನಲ್ಲಿ 45 ದಿನ ಸಂಸ್ಕರಿಸಿದ ಬಳಿಕ ಸೈಲೇಜ್‌ ಸಿದ್ಧವಾಗುತ್ತದೆ. ಅದನ್ನು ಬಳಸುವುದರಿಂದ ಹಾಲು ಉತ್ಪತ್ತಿ ಹೆಚ್ಚುತ್ತದೆ. ಪ್ರತಿ ಹಸುವಿಗೆ ದಿನಕ್ಕೆ 20 ಕೆ.ಜಿ. ಮೇವು, 5 ಕೆ.ಜಿ. ಭತ್ತದ ಹುಲ್ಲು ನೀಡುತ್ತೇವೆ’ ಎಂದು ದೇವರಾಜೇಗೌಡ ಅವರ ಹಿರಿಯ ಪುತ್ರ ಮೋಹನ್ ಹೇಳಿದರು.

‘ತಿಂಗಳಿಗೆ ಸರಾಸರಿ ₹2.50 ಲಕ್ಷ ಆದಾಯ ಬರುತ್ತಿದೆ. 6 ತಿಂಗಳಿಗೊಮ್ಮೆ 50 ಟ್ರಾಕ್ಟರ್‌ ಲೋಡ್‌ನಷ್ಟು ಸಗಣಿಯನ್ನು ಮಾರಾಟ ಮಾಡುತ್ತೇವೆ’ ಎಂದರು.

‘8 ಎಕರೆ ಭೂಮಿಯಲ್ಲಿ ತೆಂಗು, ಮಾವು, ಭತ್ತ, ರಾಗಿ ಮತ್ತು ದ್ವಿದಳ ಧಾನ್ಯ ಬೆಳೆಯುತ್ತಿದ್ದೇವೆ. ಬಂಡೂರು ಕುರಿ ಸಾಕಣೆ ಮಾಡುತ್ತಿದ್ದು, ಅದರಿಂದಲೂ ಆದಾಯ ಗಳಿಸುತ್ತಿದ್ದೇವೆ’ ಎಂದು ಹೇಳಿದರು.

ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಮನೋಹರ್ ಯಂತ್ರದ ಸಹಾಯದಿಂದ ಹಾಲು ಕರೆದರು
ಹೈನುಗಾರಿಕೆಯೊಂದಿಗೆ ಕುರಿ ಸಾಕಣೆಯಲ್ಲೂ ಸೈ ಎನ್ನಿಸಿಕೊಂಡ ಮೋಹನ್
ಪ್ರಗತಿಪರ ರೈತ ದೇವೇರಾಜೇಗೌಡ.
ನಿತ್ಯ ಸರಾಸರಿ 250 ಲೀಟರ್‌ ಹಾಲು ಪೂರೈಕೆ ವಿವಿಧ ತಳಿಯ 25 ಹಸುಗಳ ಸಾಕಣೆ ಬಂಡೂರು ಕುರಿ ಸಾಕಣೆಯಿಂದಲೂ ಆದಾಯ
‘ಜಿಲ್ಲೆಯಲ್ಲೇ ಅತಿ ಹೆಚ್ಚು ಹಾಲು ಉತ್ಪತ್ತಿ ಮಾಡುವ ರೈತ ಎಂಬ ಪ್ರಶಸ್ತಿಯನ್ನು 2023ರಲ್ಲಿ ಮೈಮುಲ್ ನೀಡಿತ್ತು. ಯುವಕರು ನಗರಕ್ಕೆ ವಲಸೆ ಹೋಗದೆ ಹಳ್ಳಿಯಲ್ಲೇ ಹೈನುಗಾರಿಕೆ ನಡೆಸಬಹುದು.
ದೇವರಾಜೇಗೌಡ ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.