ADVERTISEMENT

ಬಿಳಿಗೆರೆ: 14 ವರ್ಷಗಳ ಬಳಿಕ ಬಸವೇಶ್ವರ ಸ್ವಾಮಿ ದೇಗುಲಕ್ಕೆ ದಲಿತರ ಪ್ರವೇಶ, ಪೂಜೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 17:56 IST
Last Updated 1 ಡಿಸೆಂಬರ್ 2025, 17:56 IST
ಹುಣಸೂರು ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ಸೋಮವಾರ ದಲಿತರು ಪ್ರವೇಶಿಸುವ ಮುನ್ನ ತಹಶೀಲ್ದಾರ್‌ ಮಂಜುನಾಥ್‌ ಅವರನ್ನು ಮುಖಂಡರು ಅಭಿನಂದಿಸಿದರು. 
ಹುಣಸೂರು ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ಸೋಮವಾರ ದಲಿತರು ಪ್ರವೇಶಿಸುವ ಮುನ್ನ ತಹಶೀಲ್ದಾರ್‌ ಮಂಜುನಾಥ್‌ ಅವರನ್ನು ಮುಖಂಡರು ಅಭಿನಂದಿಸಿದರು.    

ಹುಣಸೂರು (ಮೈಸೂರು ಜಿಲ್ಲೆ): 14 ವರ್ಷಗಳ ಬಳಿಕ ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ ದಲಿತರು ಬಸವೇಶ್ವರಸ್ವಾಮಿ ದೇವಾಲಯವನ್ನು ಸೋಮವಾರ ಪ್ರವೇಶಿಸಿದರು. ಕುರುಬ ಮತ್ತು ದಲಿತ ಸಮುದಾಯಗಳ ನಡುವೆ ಏರ್ಪಟ್ಟಿದ್ದ ವೈಮನಸ್ಯ ಮರೆಯಾಗಿ, ಎರಡೂ ಸಮುದಾಯದ ಮುಖಂಡರು ಹಾಗೂ ತಹಶೀಲ್ದಾರ್‌ ಮಂಜುನಾಥ್‌ ಈ ಸಾಮರಸ್ಯದ ಸನ್ನಿವೇಶಕ್ಕೆ ಸಾಕ್ಷಿಯಾದರು.

ಗಾವಡಗೆರೆ ಹೋಬಳಿಗೆ ಸೇರಿದ ಗ್ರಾಮದ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದೆ. ದೇವಾಲಯ ಪ್ರವೇಶ ಹಾಗೂ ದೇವರ ಉತ್ಸವವು ದಲಿತ ಕೇರಿಗೆ ಬರುವ ಕುರಿತ ಭಿನ್ನಾಭಿಪ್ರಾಯ ಶಮನಕ್ಕೆ ತಾಲ್ಲೂಕು ಆಡಳಿತ ಹಲವು ಸಭೆಗಳನ್ನು ಜಿಲ್ಲಾಧಿಕಾರಿ ಸಮುಖದಲ್ಲಿ ನಡೆಸಿದರೂ ಪ್ರಯೋಜನವಾಗದೆ ದೇವಾಲಯವನ್ನು ಮುಚ್ಚಲಾಗಿತ್ತು.

ತಹಶೀಲ್ದಾರ್‌, ಶಾಸಕ ಜಿ.ಡಿ.ಹರೀಶ್‌ ಗೌಡ, ದಲಿತ ಮುಖಂಡರಾದ ನಿಂಗರಾಜ್‌ ಮಲ್ಲಾಡಿ, ಡಿ.ಕುಮಾರ್‌ ಅವರ ಪ್ರಯತ್ನದಿಂದ ಇತ್ತೀಚೆಗೆ ನಡೆದ ಸಭೆಯಲ್ಲಿ ಸೌಹಾರ್ದ ಮೂಡಿದ ಬಳಿಕ ಬಿಳಿಗೆರೆ ಪಂಚಾಯಿತಿಯಿಂದ ದೇವಾಲಯಕ್ಕೆ ಸುಣ್ಣ ಬಣ್ಣ ಬಳಿದು ಸಿದ್ಧತೆ ಕೈಗೊಳ್ಳಲಾಗಿತ್ತು.

ADVERTISEMENT

ದೇವಾಲಯ ಪ್ರವೇಶದ ಬಳಿಕ ಮಾತನಾಡಿದ ನಿಂಗರಾಜ್‌ ಮಲ್ಲಾಡಿ, ‘ಗ್ರಾಮದಲ್ಲಿ ಶಾಂತಿ ಸೌಹಾರ್ದ ಸ್ಥಾಪಿಸಬೇಕೆಂಬ ದಲಿತ ಸಮುದಾಯದವರ ಕೋರಿಕೆಗೆ ಹಲವು ಬಾರಿ ಅಧಿಕಾರಿಗಳು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ತಹಶೀಲ್ದಾರ್‌ ಅವರ ನೇತೃತ್ವದಲ್ಲಿ ನಡೆದ ಸರಣಿ ಸಭೆಗಳಿಂದ ಸಾಮರಸ್ಯ ಮೂಡಿದೆ. ಯುಗಾದಿಯಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಎರಡೂ ಸಮುದಾಯದವರೂ ಪಾಲ್ಗೊಳ್ಳುವಂತಾಗಿದೆ’ ಎಂದರು.

‘ಗ್ರಾಮದಲ್ಲಿ ಶಾಂತಿ ನೆಲೆಸಲು ಸ್ಥಳಿಯರು ಕೈಜೋಡಿಸಿದ್ದರಿಂದ ಸಮಸ್ಯೆ ಬಗೆಹರಿದಿದೆ. ಸಹಕರಿಸಿದ ಮುಖಂಡರು ಮತ್ತು ಜನಪ್ರತಿನಿಧಿಗಳು ಅಭಿನಂದನೀಯರು’ ಎಂದು ತಹಶೀಲ್ದಾರ್‌ ಮಂಜುನಾಥ್‌ ಹೇಳಿದರು.

ದಸಂಸ ಮುಖಂಡರಾದ ಡಿ.ಕುಮಾರ್‌, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭರತ್‌, ಪಿಡಿಒ ಶ್ರೀಲತಾ, ಗ್ರಾಮಲೆಕ್ಕಾಧಿಕಾರಿ ಶ್ರೀವತ್ಸ, ಗ್ರಾಮದ ಯಜಮಾನರಾದ ಸ್ವಾಮಿಗೌಡ, ಶಿವಲಿಂಗೇಗೌಡ, ಸಣ್ಣಯ್ಯ, ರಾಘು, ಮಂಜುನಾಥ್‌, ಪ್ರಭಾಕರ್‌ ಪಾಲ್ಗೊಂಡಿದ್ದರು.

ಬಸವೇಶ್ವರ ದೇವಸ್ಥಾನದಲ್ಲಿ ಯುಗಾದಿಹಬ್ಬದ ಸಮಯದಲ್ಲಿ ನಡೆಯಲಿರುವ ಉತ್ಸವ ಗ್ರಾಮದ ದಲಿತ ಕೇರಿ ಸೇರಿದಂತೆ ಪ್ರತಿಯೊಂದು ಬೀದಿಗೆ ತೆರಳಿ ಭಕ್ತರಿಂದ ಪೂಜೆ ಸ್ವೀಕರಿಸಬೇಕು ನಿತ್ಯ ನಡೆಯುವ ಪೂಜೆಯಲ್ಲಿ ದಲಿತರು ಭಾಗವಹಿಸುವಂತೆ ಕ್ರಮವಹಿಸಿದೆ.
ತಹಶೀಲ್ದಾರ್‌ ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.