ಮೈಸೂರು: ದಸರಾ ಉತ್ಸವದ ವಿಶ್ವವಿಖ್ಯಾತ ಜಂಬೂ ಸವಾರಿಯು ಲಕ್ಷಾಂತರ ಜನರ ಸಂಭ್ರಮದ ನಡುವೆ ಗುರುವಾರ ಇಳಿಸಂಜೆಯ ಹೊಂಬಣ್ಣದಲ್ಲಿ ಮೋಹಕವಾಗಿ ಮಿಂದೆದ್ದಿತು. ಚುರುಗುಟ್ಟುವ ಬಿಸಿಲಿನಲ್ಲಿ ಜಂಬೂಸವಾರಿ ಮೆರವಣಿಗೆಯು ಆರಂಭವಾದ ಬಳಿಕ ಆಗಾಗ ಮೋಡಗಳು ಕವಿದು, ಸುರಿಸಿದ ತುಂತುರು ಮಳೆಯಲ್ಲಿ ನೆನೆಯುತ್ತಲೇ ಜನ ಖುಷಿಯಿಂದ ಅಂಬಾರಿಯನ್ನು, ಚಾಮುಂಡೇಶ್ವರಿ ದೇವಿಯನ್ನು ಕಣ್ತುಂಬಿಕೊಂಡರು.
ಆರನೇ ಬಾರಿಗೆ ಅಭಿಮನ್ಯು ಆನೆ ಹೊತ್ತಿದ್ದ 750 ಕೆ.ಜಿ.ಯ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿ ಇಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ಮೆರವಣಿಗೆಯು ಅರಮನೆಯ ಆವರಣ ದಾಟುತ್ತಲೇ ವೇಗ ಪಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾವಿದರು ಹಾಗೂ ಜಂಬೂಸವಾರಿಯ ಮಾರ್ಗದುದ್ದಕ್ಕೂ ನೆರೆದಿದ್ದ ಜನರ ಉತ್ಸಾಹವೂ ಮೇರೆ ಮೀರಿತು.
ವಿಜಯದಶಮಿ ಮೆರವಣಿಗೆಯ ದಿನವೇ ಗಾಂಧೀ ಜಯಂತಿಯೂ ಇದ್ದುದು ಈ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ನಾಡಿನ ಸಾಂಸ್ಕೃತಿಕ ವೈಭವ ಹಾಗೂ ಸರ್ಕಾರದ ಸಾಧನೆಗಳ ಜೊತೆಗೆ ಹತ್ತಾರು ಸ್ತಬ್ಧಚಿತ್ರಗಳಲ್ಲಿ ಗಾಂಧೀಜಿಯೂ ಹೊಳೆದರು. ಗಾಂಧಿ ಸ್ಮರಣೆಗೂ ಮುಡಿಪಿಟ್ಟ ಅಪರೂಪದ ಜಂಬೂಸವಾರಿಯಾಗಿಯೂ ಮೆರವಣಿಗೆಯು ವಿಶೇಷ ನೆನಪುಳಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆ ಹೊರ ಆವರಣದ ಕೋಟೆ ಆಂಜನೇಯ ದೇಗುಲದ ಮುಂದೆ ನಂದಿಧ್ವಜಕ್ಕೆ ಮಧ್ಯಾಹ್ನ 1.08ಕ್ಕೆ ಪೂಜೆ ಸಲ್ಲಿಸಿ, ಸಚಿವರೊಂದಿಗೆ ಅರಮನೆಯೊಳಗೆ ಬಂದ ಬಳಿಕ ಶುರುವಾದ ಸ್ತಬ್ಧಚಿತ್ರ ಮತ್ತು ಕಲಾತಂಡಗಳ ಮೆರವಣಿಗೆಯು ಮೂರು ಗಂಟೆಗೂ ಹೆಚ್ಚು ಕಾಲ ಸಾಂಸ್ಕೃತಿಕ ವೈಭವವನ್ನು ಅನಾವರಣ ಮಾಡಿತು.
ಹೆಜ್ಜೆ- ಗೆಜ್ಜೆ, ತಾಳ-ಮೇಳ, ಕಂಸಾಳೆ, ತಮಟೆ-ನಗಾರಿ, ಡೋಲು, ಚಂಡೆಯ ಝಲ್ಲೆನಿಸುವ ನಾದ ನೃತ್ಯಗಳೊಂದಿಗೆ ಸಾವಿರಾರು ಕಲಾವಿದರು ತಮ್ಮ ಜಿಲ್ಲೆಗಳ ಸಾಂಸ್ಕೃತಿಕ ವಿಶೇಷಗಳನ್ನು ವಿಶೇಷ ಸಂಗೀತ- ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ಸ್ತಬ್ಧಚಿತ್ರಗಳು ಸರ್ಕಾರದ ಸಾಧನೆಗಳಿಗೆ ತೋರುಗನ್ನಡಿ ಹಿಡಿದವು. ಪೊಲೀಸ್ ಪಡೆ, ಅಶ್ವಾರೋಹಿ ಪಡೆಗಳು ಶಿಸ್ತಿನ ನಡಿಗೆಯಿಂದ ಗಮನ ಸೆಳೆದವು.
ಸಿಡಿದ ಕುಶಾಲತೋಪು:
ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ 4.40ಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಶುರುವಾದ ರಾಷ್ಟ್ರಗೀತೆಯ ನಡುವೆಯೇ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಾಯಿತು. ಎದೆ ನಡುಗಿಸುವ ಅವುಗಳ ಸದ್ದಿಗೆ ಬೆದರದೆ ನಿಲ್ಲಲು ತರಬೇತಿ ಪಡೆದಿದ್ದ ಆನೆಗಳೆಲ್ಲವೂ ಏಕಕಾಲಕ್ಕೆ ಸೊಂಡಿಲೆತ್ತಿ ದೇವಿಗೆ ನಮಸ್ಕರಿಸಿದವು. ಎಲ್ಲರೂ ಚಾಮುಂಡೇಶ್ವರಿಗೆ ಜೈಕಾರ ಹಾಕಿದ ಬಳಿಕ ಅಂಬಾರಿ ಹೊತ್ತ ಆನೆ ಅಭಿಮನ್ಯು ಗಾಂಭೀರ್ಯದಿಂದ ಮುಂದಕ್ಕೆ ಹೆಜ್ಜೆ ಹಾಕಿತು. ಕುಮ್ಕಿ ಆನೆಗಳಾಗಿ ಕಾವೇರಿ ಹಾಗೂ ರೂಪಾ ಹೆಜ್ಜೆ ಹಾಕಿದರೆ, ನಿಶಾನೆ ಆನೆಯಾಗಿ ಧನಂಜಯ ಜವಾಬ್ದಾರಿ ನಿರ್ವಹಿಸಿದ. ನೌಫತ್ ಆನೆಯಾಗಿ ಗೋಪಿ, ಸಾಲಾನೆಗಳಾಗಿ ಏಕಲವ್ಯ, ಮಹೇಂದ್ರ, ಲಕ್ಷ್ಮಿ, ಶ್ರೀಕಂಠ, ಕಂಜನ್, ಭೀಮ, ಹೇಮಾವತಿ, ಸುಗ್ರೀವ, ಪ್ರಶಾಂತ ಸಾಗಿದವು.
ರಾತ್ರಿ ಬನ್ನಿಮಂಟಪ ಮೈದಾನದಲ್ಲಿ ನಡೆದ ಪಂಜಿನ ಕವಾಯತನ್ನೂ ಸಾವಿರಾರು ಮಂದಿ ವೀಕ್ಷಿಸಿದರು. ಅದ್ದೂರಿತನದಿಂದ ಹರ್ಷದ ಹೊನಲನ್ನೇ ಹರಿಸುವ ಮೂಲಕ ಈ ಬಾರಿ 11 ದಿನಗಳ ನವರಾತ್ರಿ ಆಚರಣೆಗೂ ವಿಧ್ಯುಕ್ತ ತೆರೆ ಬಿತ್ತು.
ಮಹಡಿ ಕಟ್ಟಡ ಏರದಂತೆ ನಿರ್ಬಂಧ ಜಂಬೂಸವಾರಿ ವೀಕ್ಷಿಸುವ ಸಲುವಾಗಿ ಮರಗಳು ಹಾಗ ಕಟ್ಟಡಗಳನ್ನು ಜನ ಏರುವುದಕ್ಕೆ ಇದೇ ಮೊದಲ ಬಾರಿಗೆ ನಿರ್ಬಂಧ ವಿಧಿಸಲಾಗಿತ್ತು. ಮರಗಳಿಗೆ ತಂತಿಬೇಲಿಯನ್ನು ಸುತ್ತಲಾಗಿತ್ತು. ಕಟ್ಟಡಗಳ ಪ್ರಮುಖ ದ್ವಾರಗಳನ್ನು ಮರದ ಹಲಗೆಗಳಿಂದ ಮುಚ್ಚಲಾಗಿತ್ತು. ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಂಥ ಅಹಿತಕರ ಘಟನೆ ನಡೆಯಬಾರದು ಎಂಬ ಮುನ್ನೆಚ್ಚರಿಕೆ ಸಲುವಾಗಿ ಅರಮನೆಯಲ್ಲಿ ಸುಮಾರು 11 ಸಾವಿರದಷ್ಟು ಆಸನಗಳನ್ನೂ ಈ ಬಾರಿ ಕಡಿಮೆ ಮಾಡಲಾಗಿತ್ತು.
ಮುಖ್ಯಕಾರ್ಯದರ್ಶಿ ಭಾಗಿ ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೂ ಜಂಬೂಸವಾರಿಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡು ಗಮನ ಸೆಳೆದರು. ಈ ಹಿಂದೆ ಮುಖ್ಯಕಾರ್ಯದರ್ಶಿಯವರು ಪಾಲ್ಗೊಂಡ ನಿದರ್ಶನಗಳಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹಾಗೂ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಅವರೊಂದಿಗೆ ವೇದಿಕೆ ಏರಿದ ಅವರು ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಸಂಪ್ರದಾಯದಂತೆ ರಾಜವಂಶಸ್ಥರ ಪ್ರತಿನಿಧಿಯಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಂಡರು. ಸಂಸದರಾದ ಬಳಿಕ ಅವರಿಗೆ ಇದು ಮೊದಲ ದಸರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.