ದಸರೆ ಗಜಪಯಣ 2025
ಹುಣಸೂರು (ಮೈಸೂರು ಜಿಲ್ಲೆ): ನಾಡಹಬ್ಬ ದಸರೆಗೆ ಮುನ್ನುಡಿ ಬರೆಯುವ 'ಗಜಪಯಣ'ವು ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ವೀರನಹೊಸಹಳ್ಳಿಯಲ್ಲಿ ಸೋಮವಾರ ಆರಂಭವಾಯಿತು.
ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಸಚಿವರಾದ ಈಶ್ವರ ಖಂಡ್ರೆ, ಕೆ.ವೆಂಕಟೇಶ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ಚಾಲನೆ ನೀಡಿದರು.
ಜಾನಪದ ಕಲಾ ತಂಡಗಳು, ಕಳಶ ಹೊತ್ತ ಮಹಿಳೆಯರು, ಹಾಡಿಯ ಜನರು ಈ ಸಾಂಪ್ರದಾಯಿಕ ಪಯಣಕ್ಕೆ ಸಾಕ್ಷಿಯಾದರು.
ಮಧ್ಯಾಹ್ನ 12.15ರಿಂದ 12.45ರ ಶುಭ ಸಮಯದಲ್ಲಿ ಅರಮನೆ ಪುರೋಹಿತ ಎಸ್.ವಿ.ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಸಿಂಗಾರಗೊಂಡು ಸಾಲಾಗಿ ನಿಂತಿದ್ದ ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಭೀಮ, ಮಹೇಂದ್ರ, ಕಾವೇರಿ, ಕಂಜನ್, ಪ್ರಶಾಂತ, ಲಕ್ಷ್ಮಿ, ಏಕಲವ್ಯ ಆನೆಗಳ ಪಾದ ತೊಳೆದು ಹೂ, ಅರಿಶಿನ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಯಿತು.
ಆನೆಗಳಿಗೆ ಗಂಧ, ಸುಗಂಧಭರಿತ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಶೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ವನದೇವತೆ ಹಾಗೂ ನಾಡ ದೇವತೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.
ಚಿಕ್ಕಜಾಜೂರಿನ ಕಳಶ ಹೊತ್ತ ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಗಜಪಯಣಕ್ಕೆ ಧಾರ್ಮಿಕ ಚಾಲನೆ ನೀಡಿದರು.
ಆನೆಗಳು ಕಾಡಿನಿಂದ ನೇರವಾಗಿ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಆಗಮಿಸಲಿದ್ದು, ಆ.7ರಂದು ಅರಮನೆ ಪ್ರವೇಶಿಸಲಿವೆ.
ಆಂಜನೇಯನಿಗೆ ವಿಶೇಷ ಪೂಜೆ: ಗಜಪಯಣಕ್ಕೂ ಮುನ್ನ ವೀರನಹೊಸಹಳ್ಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗೇಟ್ ಬಳಿಯಿರುವ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಆಂಜನೇಯ ಸ್ವಾಮಿಗೆ ಮಾವುತರು ಹಾಗೂ ಕಾವಾಡಿ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಗಜಪಯಣದ ಹಿನ್ನಲೆಯಲ್ಲಿ ಆಂಜನೇಯನಿಗೆ ಅಭಿಷೇಕ, ಮಹಾಮಂಗಳಾರತಿ, ಅರ್ಚನೆ, ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಅರ್ಜುನ ಪ್ರಶಸ್ತಿ: 'ಭೀಮ' ಆನೆಯ ಮಾವುತ ಗುಂಡಣ್ಣ, ಕಾವಾಡಿ ನಂಜುಂಡಸ್ವಾಮಿ ಅವರಿಗೆ ಆನೆ ಸೆರೆ ಕಾರ್ಯಾಚರಣಿಯಲ್ಲಿ ಹೋರಾಡುತ್ತ ಮೃತಪಟ್ಟ 'ಅರ್ಜುನ' ಆನೆಯ ನೆನಪಿನಲ್ಲಿ 'ಅರ್ಜುನ ಪ್ರಶಸ್ತಿ' ಹಾಗೂ ತಲಾ ₹ 10 ಸಾವಿರ ನಗದು, ಪಾರಿತೋಷಕವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ನಂತರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದರು.
ಶಾಸಕರಾದ ತನ್ವೀರ್ ಸೇಠ್, ಜಿ.ಡಿ.ಹರೀಶ್ ಗೌಡ, ರವಿಶಂಕರ್,
ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ದಕ್ಷಿಣ ವಲಯ ಡಿಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಡಿಸಿಎಫ್ ಗಳಾದ ಪ್ರಭುಗೌಡ, ಸೀಮಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.