ADVERTISEMENT

ದಸರಾ ಕವಿಗೋಷ್ಠಿ ವಿಶ್ವಗೋಷ್ಠಿಯಾಗಲಿ: ಲೇಖಕ ಪ್ರೊ.ಅರವಿಂದ ಮಾಲಗತ್ತಿ

‘ಪಂಚ ಕಾವ್ಯದೌತಣ’ ಉದ್ಘಾಟಿಸಿದ ಲೇಖಕ ಪ್ರೊ.ಅರವಿಂದ ಮಾಲಗತ್ತಿ ಪ್ರತಿಪಾದನೆ

ಮೋಹನ್ ಕುಮಾರ್‌
Published 24 ಸೆಪ್ಟೆಂಬರ್ 2025, 2:57 IST
Last Updated 24 ಸೆಪ್ಟೆಂಬರ್ 2025, 2:57 IST
   

ಮೈಸೂರು: ‘ದಸರಾ ಕವಿಗೋಷ್ಠಿಯು ರಾಜ್ಯಕ್ಕೆ ಸೀಮಿತವಾಗಬಾರದು. ಅದು ವಿಶ್ವಗೋಷ್ಠಿ ಆಗಬೇಕು. ಹತ್ತಾರು ದೇಶಗಳ ಕವಿಗಳನ್ನೂ ಸರ್ಕಾರ ಇಲ್ಲಿಗೆ ಆಹ್ವಾನಿಸಬೇಕಿದೆ’ ಎಂದು ಲೇಖಕ ಪ್ರೊ.ಅರವಿಂದ ಮಾಲಗತ್ತಿ ಪ್ರತಿಪಾದಿಸಿದರು. 

ಮಾನಸಗಂಗೋತ್ರಿಯ ಬಯಲುರಂಗಮಂದಿರದಲ್ಲಿ ‘ದಸರಾ ಕವಿಗೋಷ್ಠಿ ಉಪಸಮಿತಿ’ಯು ಆಯೋಜಿಸಿದ್ದ ‘ಪಂಚ ಕಾವ್ಯದೌತಣ’ ಕವಿಗೋಷ್ಠಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.  

‘ಕವಿಗೋಷ್ಠಿ ಅರಮನೆಯಲ್ಲಿ ಮಾಡಲಾಗುತ್ತಿತ್ತು. ಬಯಲು ರಂಗಮಂದಿರದಲ್ಲಿ 20 ಸಾವಿರಕ್ಕೂ ಹೆಚ್ಚು ಯುವ ಮನಸ್ಸುಗಳ ಎದುರು ಚಾಲನೆ ಸಿಕ್ಕಿರುವುದು ಕವಿಗಳ ಕಾಲವಲ್ಲ ಎಂಬ ಮಾತಿಗೆ ಸೋಲಾಗಿದೆ. ಯುವ ಮನಸ್ಸುಗಳು ಕಾವ್ಯ ಸೃಷ್ಟಿಸಲು ಮುಂದಾಗಬೇಕು. ಸಮಾಜದ ತಲ್ಲಣಗಳಿಗೆ ದನಿಯಾಗಬೇಕು’ ಎಂದು ಸಲಹೆ ನೀಡಿದರು. 

ADVERTISEMENT

‘ಯುವ ಸಂಭ್ರಮದಲ್ಲಿ ಸಾವಿರಾರು ಯುವಕ– ಯುವತಿಯರು ಕುಣಿದು ಕುಪ್ಪಳಿಸಿದರು. ರೀಲ್ಸ್‌ ಮಾಡಿ ಸಂಭ್ರಮಿಸಿದರು. ಅದನ್ನು ನೋಡಿದಾಗ ಕವಿ ಮನಸ್ಸು ಅವರಿಗಿದೆ ಎನ್ನಿಸಿತ್ತು. ಮನಸ್ಸು ಮಾಡಿದರೆ ಅವರು ಕವಿ, ಕಲಾವಿದ ಆಗಬಲ್ಲರು. ಮನಸ್ಸಿನ ಭಾವನೆಗಳನ್ನು ರೀಲ್ಸ್‌ಗಳಲ್ಲಿ ಅಭಿವ್ಯಕ್ತಿಸಿ ಕುಣಿಯುವುದರ ಜೊತೆ ನಿಮ್ಮ ಹಾಡುಗಳಿಗೆ ನೀವೆ ಕುಣಿಯುವುದೂ ಹೇಗೆ ಎಂಬುದರ ಹುಡುಕಾಟ ನಡೆಸಬೇಕು’ ಎಂದು ಕಿವಿಮಾತು ಹೇಳಿದರು. 

‘ಕವಿತೆ ಮತ್ತು ಕವಿ ಸಾಯುವುದಿಲ್ಲ. ಕಾವ್ಯ ಜೀವಂತವಾಗಿ ಇರಬೇಕು ಎಂದರೆ  ಜನಮನದ ಮನದಲ್ಲಿ ಮೂಡುವ ಅಗತ್ಯವಿದೆ. ನಾನು ಮೊದಲ ಬಾರಿ 1984ರಲ್ಲಿ ದಸರಾ ಕವಿಗೋಷ್ಠಿಯಲ್ಲಿ ಗದಗದಿಂದ ಬಂದಿದ್ದೆ. ಮೊದಲ ನೆನಪು ಇನ್ನೂ ಉಳಿದಿದೆ. ಇಲ್ಲಿವರೆಗೂ ನನ್ನನ್ನು ಕರೆದುಕೊಂಡು ಬಂದಿದೆ’ ಎಂದರು. 

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್‌. ತಂಗಡಗಿ ಮಾತನಾಡಿ, ‘ಪ್ರಾಚೀನ ಕನ್ನಡ ಹಸ್ತುಪ್ರತಿಗಳ ಡಿಜಿಟಲ್ ದಾಖಲೀಕರಣಕ್ಕೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಸರ್ಕಾರವು ಬಜೆಟ್‌ನಲ್ಲಿ ₹ 1 ಕೋಟಿ ಅನುದಾನ ನೀಡಿದೆ. ಸಂಸ್ಥೆ ಹಾಗೂ ವಿಶ್ವವಿದ್ಯಾಲಯಕ್ಕೆ ಅಗತ್ಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು. 

ಲೇಖಕಿ ಬಿ.ಟಿ.ಲಲಿತಾನಾಯಕ್, ಚಲನಚಿತ್ರ ಗೀತ ರಚನೆಕಾರ ಕವಿರಾಜ್‌, ವಿಶ್ರಾಂತ ಕುಲಪತಿ ಪ್ರೊ.ಚಿದಾನಂದಗೌಡ, ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಾಗರಾಜ ವಿ.ಭೈರಿ, ಶಾಸಕರಾದ ಕೆ.ಹರೀಶ್‌ಗೌಡ, ಡಿ.ರವಿಶಂಕರ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋ‍ಪಾಲ, ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್‌, ನಿರ್ದೇಶಕಿ ಕೆ.ಎಂ.ಗಾಯತ್ರಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ವೈದ್ಯ ಲಕ್ಷ್ಮಿನಾರಾಯಣ, ‌ಹಣಕಾಸು ಅಧಿಕಾರಿ ರೇಖಾ, ಕುಲಸಚಿವೆ ಎಂ.ಕೆ.ಸವಿತಾ, ವಿಶೇಷಾಧಿಕಾರಿ ಜಿ.ಎಸ್‌.ಸೋಮಶೇಖರ್, ಕಾರ್ಯಾಧ್ಯಕ್ಷೆ ಪ್ರೊ.ಎನ್‌.ಕೆ.ಲೋಲಾಕ್ಷಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.