ಆರ್. ಜಿತೇಂದ್ರ
ಮೈಸೂರು: ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದಸರಾ ಕ್ರೀಡಾಕೂಟ ಆಯೋಜನೆಗೆ ಸಿದ್ಧತೆ ಆರಂಭಗೊಂಡಿದ್ದು, ಈ ಬಾರಿ ಸೆ. 22ರಿಂದ 25ರವರೆಗೆ ಕ್ರೀಡಾಕೂಟ ನಡೆಯಲಿದೆ.
ದಸರೆಯ ಸಂದರ್ಭ ಇತರ ಉತ್ಸವಗಳಂತೆ ಕ್ರೀಡಾಕೂಟವನ್ನೂ ಆಯೋಜಿಸಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಪದ್ಧತಿ ಬಹುಕಾಲದಿಂದಲೂ ಬೆಳೆದು ಬಂದಿದೆ. ಹಿಂದಿನ ಕೆಲವು ವರ್ಷಗಳಲ್ಲಿ ಎರಡು ಮಾದರಿಗಳಲ್ಲಿ ಕ್ರೀಡಾಕೂಟಗಳು ನಡೆದಿದ್ದವು. ಆದರೆ ಈ ಬಾರಿ ಒಂದೇ ಮಾದರಿಯಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜನೆ ಆಗಲಿದೆ. ರಾಜ್ಯದ 5 ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಕ್ರೀಡಾಪಟುಗಳು ಇಲ್ಲಿ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ. ಅಥ್ಲೆಟಿಕ್ಸ್, ಗುಂಪು ಮಾದರಿ ಸೇರಿದಂತೆ ಬರೋಬ್ಬರಿ 27 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಎಷ್ಟು ಮಂದಿ ಭಾಗಿ: ಎಂದಿನಂತೆ ಈ ಬಾರಿಯೂ ಸುಮಾರು ಐದು ಸಾವಿರದಷ್ಟು ಕ್ರೀಡಾಪಟುಗಳು ಹಾಗೂ ಕ್ರೀಡಾ ಸಿಬ್ಬಂದಿ ಭಾಗಿ ಆಗಲಿದ್ದಾರೆ. ಪ್ರತಿ ವಿಭಾಗ ಮಟ್ಟದಲ್ಲೂ ಉತ್ತಮ ಸಾಧನೆ ತೋರುವ 900 ಕ್ರೀಡಾಪಟುಗಳು ಸೇರಿದಂತೆ ಒಟ್ಟು 5 ವಿಭಾಗಗಳಿಂದ 3,500 ಸ್ಪರ್ಧಿಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಜೊತೆಗೆ 1,500 ಅಧಿಕಾರಿಗಳು– ಸಿಬ್ಬಂದಿ ಸಹ ಬರಲಿದ್ದಾರೆ.
ಎಲ್ಲೆಲ್ಲಿ ಸ್ಪರ್ಧೆಗಳು: ಚಾಮುಂಡಿವಿಹಾರ ಕ್ರೀಡಾ ಸಮುಚ್ಛಯದ ಜೊತೆಗೆ ಮೈಸೂರು ವಿ.ವಿ. ಒಳಾಂಗಣ ಕ್ರೀಡಾಂಗಣ, ಸ್ಪೋರ್ಟ್ಸ್ ಪೆವಿಲಿಯನ್ ಸೇರಿದಂತೆ ವಿವಿಧೆಡೆ ಸ್ಪರ್ಧೆಗಳನ್ನು ಆಯೋಜಿಸಲು ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ತಾಲ್ಲೂಕು ಮಟ್ಟದಿಂದ ಸ್ಪರ್ಧೆ: ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜನೆಗೆ ಮುನ್ನ ತಾಲ್ಲೂಕು ಮಟ್ಟದಿಂದ ವಿಭಾಗ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಕ್ರೀಡಾಕೂಟ ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿ 33ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ. ಆ. 25ರೊಳಗೆ ತಾಲ್ಲೂಕುಮಟ್ಟದ ಕ್ರೀಡಾಕೂಟ, ಸೆ.1ರೊಳಗೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸೆ. 10ರ ಒಳಗೆ ವಿಭಾಗಮಟ್ಟದ ಕ್ರೀಡಾಕೂಟಗಳು ನಡೆಯಲಿವೆ.
ದಸರಾ ಕ್ರೀಡಾಕೂಟಕ್ಕೆ ಸಿದ್ಧತೆಗಳು ನಡೆದಿವೆ. ಇದೇ ಮೊದಲ ಬಾರಿ ತಾಲ್ಲೂಕು ಮಟ್ಟದಿಂದಲೇ ಕ್ರೀಡಾಪಟುಗಳ ಇ–ನೋಂದಣಿ ಮಾಡಲಾಗುತ್ತಿದೆಭಾಸ್ಕರ್ ನಾಯಕ್ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
C ಯಾವ್ಯಾವ ಸ್ಪರ್ಧೆ?
ಗುಂಪು ಕ್ರೀಡೆಗಳ ವಿಭಾಗದಲ್ಲಿ ಜಿಮ್ನಾಸ್ಟಿಕ್ ವಾಲಿಬಾಲ್ ಕಬಡ್ಡಿ ಕೊಕ್ಕೊ ಷಟಲ್ ಬ್ಯಾಡ್ಮಿಂಟನ್ ಬ್ಯಾಸ್ಕೆಟ್‌ಬಾಲ್ ಹ್ಯಾಂಡ್‌ಬಾಲ್ ಟೇಬಲ್ ಟೆನಿಸ್ ಟೆನಿಸ್ ಫುಟ್‌ಬಾಲ್ ಬ್ಯಾಡ್ಮಿಂಟನ್ ಹಾಕಿ ಸ್ಪರ್ಧೆಗಳು ನಡೆಯಲಿವೆ. ಅಥ್ಲೆಟಿಕ್ಸ್‌ನಲ್ಲಿ ವಿವಿಧ ಓಟ ಥ್ರೋ ಹಾಗೂ ನೆಗೆತದ ಸ್ಪರ್ಧೆಗಳು ಈಜು ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ಸೈಕ್ಲಥಾನ್ ಜಿಮ್ನಾಸ್ಟಿಕ್ಸ್ ಮ್ಯಾರಥಾನ್ ಸ್ಪರ್ಧೆಗಳು ಇರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.