ADVERTISEMENT

ಪ್ರತ್ಯೇಕ ಪ್ರಕರಣ; 6 ಮಂದಿ ಸಾವು

ಗೆಳೆಯನ ಮದುವೆಗೆ ಹೊರಟವರು ಮಸಣ ಸೇರಿದರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 20:11 IST
Last Updated 8 ಏಪ್ರಿಲ್ 2019, 20:11 IST

ಮೈಸೂರು: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ.

ನಂಜನಗೂಡು ತಾಲ್ಲೂಕಿನ ತೊರೆಮಾವು ಗ್ರಾಮದಲ್ಲಿ ಪತಿ, ಪತ್ನಿ ಮೃತದೇಹ ಪತ್ತೆಯಾಗಿದ್ದರೆ, ಗೆಳೆಯನ ಮದುವೆಗೆ ಹೊರಟಿದ್ದ ಇಬ್ಬರು ಯುವಕರು ಮೆಲ್ಲಹಳ್ಳಿ ಸಮೀಪ ಅಪಘಾತಕ್ಕೆ ಬಲಿಯಾಗಿದ್ದಾರೆ. ಬಿಸಿಲಿನ ಬೇಗೆ ತಾಳಲಾರದ ಯುವಕರೊಬ್ಬರು ಕೆಆರ್‌ಎಸ್‌ ಹಿನ್ನೀರಿನಲ್ಲಿ ಸ್ನಾನ ಮಾಡಲು ತೆರಳಿ ಮುಳುಗಿ ಸಾವನ್ನಪ್ಪಿದ್ದಾರೆ. ಕಲ್ಯಾಣಗಿರಿಯ ರಾಜ್‍ಕುಮಾರ್ ರಸ್ತೆ ಬಳಿಯ ತ್ರಿವೇಣಿ ವೃತ್ತದಲ್ಲಿ ಬೈಕ್‌ನಿಂದ ಬಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಘಟನೆಗಳ ವಿವರ

ADVERTISEMENT

ರಾಮನಾಥಪುರ ಹುಂಡಿಯ ಶಿವು (21) ಹಾಗೂ ಮೆಲ್ಲಹಳ್ಳಿಯ ನಾಗೇಂದ್ರ (23) ರಂಗಸಮುದ್ರದಲ್ಲಿ ನಡೆಯುತ್ತಿದ್ದ ತಮ್ಮ ಗೆಳೆಯರೊಬ್ಬರ ವಿವಾಹಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮೈಸೂರು ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಇಬ್ಬರಿಗೂ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವರುಣಾ ಠಾಣೆಯಲ್ಲಿ ದಾಖಲಾಗಿದೆ.

ಇಲ್ಲಿನ ಮೀನಾಕ್ಷಿಪುರದ ಬಳಿ ಇರುವ ಕೆಆರ್‌ಎಸ್‌ ಹಿನ್ನೀರಿಗೆ ಬಿಸಿಲಿನ ಬೇಗೆ ತಡೆಯಲಾರದೇ ಸ್ನಾನ ಮಾಡಲು ತೆರಳಿದ ನಗರದ ಶಾರದಾದೇವಿನಗರದ ನಿವಾಸಿ ದರ್ಶನ್ (21) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇವರು ತಮ್ಮ ಸೋದರನ ಜತೆ ಇಲ್ಲಿಗೆ ಸ್ನಾನಕ್ಕೆಂದು ಬಂದಿದ್ದರು. ಆದರೆ, ನೀರಿನಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಮುಳುಗಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಇಲವಾಲ ಠಾಣೆಯಲ್ಲಿ ದಾಖಲಾಗಿದೆ.

ತೊರೆಮಾವು; ದಂಪತಿ ಸಾವು

ನಂಜನಗೂಡು: ತಾಲ್ಲೂಕಿನ ತೊರೆಮಾವು ಗ್ರಾಮದ ಮನೆಯೊಂದರಲ್ಲಿ ಸೋಮವಾರ ದಂಪತಿ ಮೃತದೇಹಗಳು ಪತ್ತೆಯಾಗಿದೆ.

ಪತಿ ಮಹೇಂದ್ರ ಪಾಟೀಲ್ (36) ಅವರ ಶವ ನೇಣು ಹಾಕಿದ ಸ್ಥಿತಿಯಲ್ಲಿ, ಪತ್ನಿ ಶೃತಿ (28) ಮೃತದೇಹವು ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಸಿಕ್ಕಿವೆ.

ತೊರೆಮಾವು ಗ್ರಾಮದ ಮಹೇಂದ್ರ ಪಾಟೀಲ್ ತಾಂಡ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಲ್ಲೂಕಿನ ಹುರ ಗ್ರಾಮದ ಶೃತಿಯನ್ನು 6 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.

‘ಭಾನುವಾರ ತಡರಾತ್ರಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು, ಬೆಳಿಗ್ಗೆ 8 ಗಂಟೆಯಾದರೂ ಮನೆಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಕಿಟಕಿಯ ಮೂಲಕ ನೋಡಿದಾಗ ಮಹೇಂದ್ರ ಪಾಟೀಲ್ ಅವರ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಕಂಡುಬಂತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪೊಲೀಸರು ಶವಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ.

ಬೈಕ್‌ನಿಂದ ಬಿದ್ದು ಮಹಿಳೆ ಸಾವು:

ಕಲ್ಯಾಣಗಿರಿಯ ರಾಜ್‍ಕುಮಾರ್ ರಸ್ತೆ ಬಳಿಯ ತ್ರಿವೇಣಿ ವೃತ್ತದಲ್ಲಿ ಬೈಕ್‌ನಿಂದ ಬಿದ್ದ ರಾಘವೇಂದ್ರ ನಗರದ ನಿವಾಸಿ ಸುಶೀಲಾ ಬಾಯಿ (55) ಮೃತಪಟ್ಟಿದ್ದಾರೆ.

ಇವರು ಪುತ್ರ ಎಂ.ಎಸ್.ಅಶೋಕ್‍ ಅವರೊಂದಿಗೆ ನೆಹರೂ ನಗರದಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಬೈಕ್‌ನಿಂದ ಬಿದ್ದಿದ್ದಾರೆ. ಗಂಭೀರವಾಗಿ ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಇವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿದ್ದಾರ್ಥನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.