ADVERTISEMENT

ಕುವೆಂಪುಗೆ ಭಾರತ ರತ್ನ ನೀಡಲಿ: ಪ್ರೊ.ಎನ್‌.ಕೆ.ಲೋಕನಾಥ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 15:41 IST
Last Updated 29 ಡಿಸೆಂಬರ್ 2025, 15:41 IST
   

ಮೈಸೂರು: ‘ರಾಷ್ಟ್ರಕವಿ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಈ ಬಾರಿ ಭಾರತರತ್ನ ಗೌರವ ನೀಡಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಕೋರಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆಯು ಮಾನಸಗಂಗೋತ್ರಿ ಮುಖ್ಯ ಪ್ರವೇಶ ದ್ವಾರದ ಬಳಿ ಸೋಮವಾರ ಏರ್ಪಡಿಸಿದ್ದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಅದಕ್ಕೆ ಮನ್ನಣೆ ದೊರೆಯಲಿ’ ಎಂದರು.

ADVERTISEMENT

ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ ಗೌಡ ಮಾತನಾಡಿ, ‘ಮಾನಸ ಗಂಗೋತ್ರಿ ಕ್ಯಾಂಪಸ್‌ ಆರಂಭಕ್ಕೆ ಕುವೆಂಪು ಕಾರಣ. ಅವರು ಕಟ್ಟಿದ ಮೈಸೂರು ವಿವಿಯಲ್ಲಿ ನಾವೆಲ್ಲಾ ಓದಿ ಬದುಕು ಕಟ್ಟಿಕೊಂಡಿದ್ದೇವೆ. ಮೈಸೂರು ವಿ.ವಿ. ನೌಕರರಾಗಿದ್ದ ನನ್ನ ತಂದೆ ಕುವೆಂಪು ಅವರಿಗೆ ಆತ್ಮೀಯರಾಗಿದ್ದರು. ಚಿಕ್ಕವನಿದ್ದಾಗ ನಾನು ಪುಟ್ಟಪ್ಪ ಅವರ ತೊಡೆಯ ಮೇಲೆ ಕುಳಿತಿದ್ದೆ’ ಎಂದು ನೆನೆದರು.

ಡಿಸಿಪಿ ಕೆ.ಎಸ್‌.ಸುಂದರರಾಜ್‌ ಹಾಗೂ ಸಿಂಡಿಕೇಟ್‌ ಸದಸ್ಯ ಸಿ.ಮಹದೇಶು ಮಾತನಾಡಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಮೈಸೂರು ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಎಸ್‌.ಉಮೇಶ್‌, ಎಸಿಪಿ ಪಿ.ರವಿಪ್ರಸಾದ್‌, ಸಿಂಡಿಕೇಟ್‌ ಸದಸ್ಯರಾದ ಕ್ಯಾತನಹಳ್ಳಿ ಸಿ.ನಾಗರಾಜ್, ಜೆ.ಶಿಲ್ಪಾ, ನಟರಾಜ್‌ ಶಿವಣ್ಣ, ಗೋಕುಲ್‌ ಗೋವರ್ಧನ್‌, ವಿಶ್ವಮಾನವ ಮೈಸೂರು ವಿ.ವಿ. ನೌಕರರ ವೇದಿಕೆ ಅಧ್ಯಕ್ಷ ಆರ್‌.ವಾಸುದೇವ, ಉಪಾಧ್ಯಕ್ಷ ಬಾಸ್ಕರ್‌, ಕಾರ್ಯದರ್ಶಿ ವಿನೋದ್‌, ನವೀನ್‌ ಕುಮಾರ್‌, ವಿವೇಕ್‌, ಯೋಗೇಶ್‌, ಚಿದಾನಂದ, ಪ್ರಸಾದ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.