ADVERTISEMENT

ಮೈಸೂರು: ಪಾಲಿಕೆ ಚುಕ್ಕಾಣಿ ಉಪ ಮೇಯರ್‌ಗೆ

ಮುಂದಿನ ಆದೇಶದವರೆಗೂ ಮೇಯರ್‌ ಚುನಾವಣೆ ನಡೆಸುವಂತಿಲ್ಲ: ಅಫ್ತಾಬ್‌ಗೆ ಅಧಿಕಾರ

ಡಿ.ಬಿ, ನಾಗರಾಜ
Published 24 ಜೂನ್ 2021, 4:00 IST
Last Updated 24 ಜೂನ್ 2021, 4:00 IST
ಮೈಸೂರು ಮಹಾನಗರ ಪಾಲಿಕೆ ಕಟ್ಟಡ
ಮೈಸೂರು ಮಹಾನಗರ ಪಾಲಿಕೆ ಕಟ್ಟಡ   

ಮೈಸೂರು: ಪ್ರಸ್ತುತ ಯಾವೊಂದು ಚುನಾವಣೆಯನ್ನು ನಡೆಸದಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಯೂ ಮುಂದೂಡಲ್ಪಟ್ಟಿದೆ.

ಇದರಿಂದಾಗಿ ರುಕ್ಮಿಣಿ ಮಾದೇಗೌಡ ಸದಸ್ಯತ್ವ ಅನರ್ಹದಿಂದ ತೆರವಾಗಿರುವ ಮೇಯರ್‌ ಸ್ಥಾನಕ್ಕೆ ಮುಂದಿನ ಆದೇಶದ
ವರೆಗೂ ಚುನಾವಣೆ ನಡೆಯುವುದಿಲ್ಲ.

ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದುಗೊಂಡ ಬೆನ್ನಿಗೆ, ಹಂಗಾಮಿ ಮೇಯರ್‌ ಆಗಿ ಅಧಿಕಾರ ಸ್ವೀಕರಿಸಿದ್ದ ಉಪ ಮೇಯರ್‌ ಅಫ್ತಾಬ್‌ (ಅನ್ವರ್‌ ಬೇಗ್‌) ಅವರೇ ನೂತನ ಮೇಯರ್‌ ಆಯ್ಕೆ ತನಕವೂ ಮೇಯರ್‌ ಕರ್ತವ್ಯ, ಅಧಿಕಾರಗಳನ್ನು ಚಲಾಯಿಸಲಿದ್ದಾರೆ. ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ.

ADVERTISEMENT

ಹೈಕೋರ್ಟ್‌ ತಡೆಯಾಜ್ಞೆ: ರುಕ್ಮಿಣಿ ಅವರ ಪಾಲಿಕೆಯ ಸದಸ್ಯತ್ವ ರದ್ದತಿಯಿಂದ ಮೇಯರ್‌ ಸ್ಥಾನ ಜೂನ್‌ 2ರಂದು ತೆರವಾಗುತ್ತಿದ್ದಂತೆ, ಪ್ರಾದೇಶಿಕ ಆಯುಕ್ತರು ಜೂನ್‌ 11ಕ್ಕೆ ನೂತನ ಮೇಯರ್‌ ಆಯ್ಕೆಯ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದರು. ಆಯ್ಕೆ ಪ್ರಕ್ರಿಯೆಯವರೆಗೂ ಉಪ ಮೇಯರ್‌ಗೆ ಹಂಗಾಮಿ ಮೇಯರ್‌ ಆಗಿ ಕರ್ತವ್ಯ ಚಲಾಯಿಸುವಂತೆ ಸರ್ಕಾರದ ನಿಯಮಾವಳಿಯಂತೆ ಸೂಚಿಸಿದ್ದರು.

ಮೇಯರ್‌ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಕಸರತ್ತು ನಡೆದಿತ್ತು. ಪಾಲಿಕೆಯ ಕಾಂಗ್ರೆಸ್‌ ಸದಸ್ಯ ಪ್ರದೀಪ್‌ ಚಂದ್ರ ಮೈಸೂರಿನಲ್ಲಿ ಲಾಕ್‌ಡೌನ್‌ ಇರುವುದರಿಂದ ಮೇಯರ್‌ ಚುನಾವಣೆ ಮುಂದೂಡುವಂತೆ ಹೈಕೋರ್ಟ್‌ ಮೊರೆಯೊಕ್ಕಿದ್ದರು.

‘ಮೈಸೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿಯೇ ಲಾಕ್‌ಡೌನ್ ಅನ್ನು ಜೂನ್ 21ರ ತನಕವೂ ವಿಸ್ತರಿಸಲಾಗಿದೆ. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರನ್ನು ಒಟ್ಟಿಗೆ ಸೇರಿಸಿ ಚುನಾವಣೆ ನಡೆಸುವುದು ಸೂಕ್ತವಲ್ಲ. ಇದರಿಂದ ಕೋವಿಡ್ ಹರಡಬಹುದು. ಇದು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 26ರ ಉಲ್ಲಂಘನೆ ಆಗಿದೆ’ ಎಂದು ಅರ್ಜಿದಾರ ಪ್ರದೀಪ್‌ ಚಂದ್ರ ಪರ ವಕೀಲ ಎಲ್‌.ಎಂ.ಚಿದಾನಂದ ವಾದಿಸಿದ್ದರು.

ಈ ವಾದ ಪರಿಗಣಿಸಿದ ಹೈಕೋರ್ಟ್‌ ಪೀಠ, ‘ಮೈಸೂರಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಜೂನ್ 21ರವರೆಗೆ ಮೇಯರ್ ಚುನಾವಣೆ ನಡೆಸಬಾರದು. 21ರ ನಂತರವೂ ಚುನಾವಣೆ ನಡೆಸುವ ಈ ನಿರ್ಧಾರವನ್ನೂ ಮರು ಪರಿಶೀಲಿಸಬೇಕು’ ಎಂದು ಸೂಚಿಸಿತ್ತು.

ಹೈಕೋರ್ಟ್‌ ಜೂನ್‌ 10ರಂದು ಚುನಾವಣೆಗೆ ತಡೆಯಾಜ್ಞೆ ನೀಡಿದ್ದರಿಂದ, 11ರಂದು ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ. ಈ ಬೆಳವಣಿಗೆ ನಂತರ ಕೋವಿಡ್‌ನ ಉಲ್ಬಣ ಸ್ಥಿತಿಯಲ್ಲಿ ಯಾವೊಂದು ಚುನಾವಣೆ ನಡೆಸಬಾರದು ಎಂದು ರಾಜ್ಯ ಸರ್ಕಾರವೇ ಅಧಿಸೂಚನೆ ಹೊರಡಿಸಿದೆ.

‘ಮುಂದಿನ ಆದೇಶ ಪ್ರಕಟವಾಗುವ ತನಕವೂ ಉಪ ಮೇಯರ್‌ ಅಫ್ತಾಬ್‌ (ಅನ್ವರ್‌ ಬೇಗ್‌) ಹಂಗಾಮಿ ಮೇಯರ್‌ ಆಗಿ ಮುಂದುವರಿಯಲಿದ್ದಾರೆ. ಮೇಯರ್‌ ಅಧಿಕಾರ ಚಲಾಯಿಸಲಿದ್ದಾರೆ’ ಎಂದು ಪಾಲಿಕೆಯ ಪರಿಷತ್‌ ಕಾರ್ಯದರ್ಶಿ ರಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸದಸ್ಯತ್ವ ರದ್ದು: 28ಕ್ಕೆ ವಿಚಾರಣೆ
‘ಪಾಲಿಕೆಯ ಸದಸ್ಯತ್ವವನ್ನು ಹೈಕೋರ್ಟ್‌ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆಯೊಕ್ಕಿದ್ದೇವೆ. ಈಗಾಗಲೇ ಎರಡು ಬಾರಿ ವಿಚಾರಣೆ ಮುಂದೂಡಲ್ಪಟ್ಟಿದೆ. ಜೂನ್‌ 28ರಂದು ಮತ್ತೆ ವಿಚಾರಣೆ ದಿನ ನಿಗದಿಯಾಗಿದೆ. ಸದಸ್ಯತ್ವ ರದ್ದು ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರುತ್ತೇವೆ’ ಎಂದು ರುಕ್ಮಿಣಿ ಪತಿ ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.