ADVERTISEMENT

ಮೈಸೂರು: ವೈವಿಧ್ಯದ ‘ದೇಸಿ ಎಣ್ಣೆ ಮೇಳ’ ಆರಂಭ

ನಂಜರಾಜ ಬಹದ್ದೂರ್‌ ಛತ್ರದಲ್ಲಿ ಭಾನುವಾರದವರೆಗೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:31 IST
Last Updated 10 ಜನವರಿ 2026, 7:31 IST
<div class="paragraphs"><p>ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಆಯೋಜಿಸಿರುವ ‘ದೇಸಿ ಎಣ್ಣೆ ಮೇಳ’ದಲ್ಲಿ ಗಮನಸೆಳೆದ ಸಾಂಪ್ರದಾಯಿಕ ಎಣ್ಣೆ ಗಾಣ&nbsp; </p></div>

ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಆಯೋಜಿಸಿರುವ ‘ದೇಸಿ ಎಣ್ಣೆ ಮೇಳ’ದಲ್ಲಿ ಗಮನಸೆಳೆದ ಸಾಂಪ್ರದಾಯಿಕ ಎಣ್ಣೆ ಗಾಣ 

   

ಪ್ರಜಾವಾಣಿ ಚಿತ್ರ

ಮೈಸೂರು: ಇಲ್ಲಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ‘ದೇಸಿ ಎಣ್ಣೆ ಮೇಳ’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ADVERTISEMENT

ಸಹಜ ಸಮೃದ್ಧ ಸಂಸ್ಥೆ ಹಾಗೂ ದೇಸಿರಿ ನ್ಯಾಚುರಲ್ಸ್‌ ಸಹಯೋಗದಲ್ಲಿ ಆಯೋಜಿಸಿರುವ ಮೇಳವನ್ನು ಕಪ್ಪಡಿ ಕ್ಷೇತ್ರ ಹಾಗೂ ಮಂಟೇಸ್ವಾಮಿ ಮಠದ ಪೀಠಾಧಿಪತಿ ಎಂ.ಎಲ್. ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಉದ್ಘಾಟಿಸಿದರು. ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾಂಪ್ರದಾಯಿಕ ಎಣ್ಣೆ ಗಾಣಕ್ಕೆ ಚಾಲನೆ ನೀಡಿ, ವೀಕ್ಷಿಸಿದರು.

ಮೊದಲ ಹೆಜ್ಜೆಯಾಗಲಿ...:

‘ಈಗಿನ ಜೀವನಶೈಲಿಯಲ್ಲಿ ಆಹಾರ ಎಲ್ಲರಿಗೂ ಸಿಗುತ್ತಿದೆ. ಆದರೆ, ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಆರ್ಥಿಕತೆ ಸಾಧಿಸುವ ಭರದಲ್ಲಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಸಾಂಪ್ರದಾಯಿಕ ಆಹಾರಗಳನ್ನು ಬಳಸುವ ಮೂಲಕ ಆರೋಗ್ಯ ಗಳಿಸಿಕೊಳ್ಳಬೇಕಾಗಿದೆ. ಗಾಣದ ಎಣ್ಣೆ ಬಳಕೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಬೇಕು’ ಎಂದು ಸಂಸದ ಯದುವೀರ್‌ ಆಶಿಸಿದರು.

‘ಗಾಣದ ಎಣ್ಣೆಯಲ್ಲಿರುವ ಪೋಷಕಾಂಶಗಳ ಬಗ್ಗೆ ಅಧ್ಯಯನ ಮಾಡಿ, ಅದರ ಪ್ರಯೋಜನಗಳನ್ನು ಗ್ರಾಹಕರಿಗೆ ತಿಳಿಸುವ ಕೆಲಸವನ್ನು ಸಿಎಫ್‌ಟಿಆರ್‌ಐ ನಿರ್ವಹಿಸಲಿ’ ಎಂದರು.

‘ಸಾಂಪ್ರದಾಯಿಕ ಎಣ್ಣೆಗಳ ಕೃಷಿ ಮತ್ತು ಬಳಕೆಯ ಬಗ್ಗೆ ರೈತರು ಹಾಗೂ ಗ್ರಾಹಕರಿಗೆ ಅರಿವು ಮೂಡಿಸುವುದು ಮೇಳದ ಉದ್ದೇಶವಾಗಿದೆ’ ಎಂದು ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ತಿಳಿಸಿದರು.

ಸಿಎಫ್‌ಟಿಆರ್‌ಐ ನಿರ್ದೇಶಕ ಗಿರಿಧರ್ ಪರ್ವತಮ್‌, ಅಮೆರಿಕದ ವಿಜ್ಞಾನಿ ಡಾ.ಮಮತಾ ಶೇಖರ್‌, ಮೈಸೂರು ಕಲ್ಯಾಣ ಮಂಟಪಗಳ ಸಂಘದ ಅಧ್ಯಕ್ಷ ಎಸ್.ಮೂರ್ತಿ, ದೇಸಿರಿ ನ್ಯಾಚುರಲ್ಸ್‌ ಸಂಸ್ಥೆಯ ಸಹ ಸಂಸ್ಥಾಪಕ ಎಂ.ಮಹೇಶ, ಸಹ ಸಂಸ್ಥಾಪಕ ಎನ್.ಯೋಗೀಶ್, ಸಹಜ ಸೀಡ್ಸ್‌ನ ಮಂಜು ಕೆ.ಎಸ್. ಪಾಲ್ಗೊಂಡಿದ್ದರು.

ಮೇಳದಲ್ಲಿ ದೇಸಿ ಎಣ್ಣೆಯನ್ನು ಸಾರ್ವಜನಿಕರು ವೀಕ್ಷಿಸಿದರು
ಗಾಣದ ಎಣ್ಣೆ ಸ್ಥಳೀಯ ಆಹಾರ ಸಂಸ್ಕೃತಿಗೆ ಪೂರಕವಾಗಿವೆ. ಇವುಗಳ ಬಳಕೆಯಿಂದ ರೈತರ ಜೀವನ ಮಟ್ಟ ಸುಧಾರಿಸುತ್ತದೆ ಸ್ಥಳೀಯರಿಗೆ ಉದ್ಯೋಗ ಲಭಿಸುತ್ತದೆ
ಶ್ರೀಕಂಠ ಸಿದ್ಧಲಿಂಗ ರಾಜೇ ಅರಸ್ ಕಪ್ಪಡಿ ಕ್ಷೇತ್ರ

ಮೇಳದಲ್ಲಿ ಏನೇನಿದೆ ?

50ಕ್ಕೂ ಹೆಚ್ಚು ಸಾಂಪ್ರದಾಯಿಕ ಎಣ್ಣೆಗಳನ್ನು ಪರಿಚಯಿಸಲಾಗಿದೆ. ಎತ್ತಿನ ಗಾಣದಿಂದ ಅಡುಗೆ ಎಣ್ಣೆ ಹಾಗೂ ಹರಳೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆಯನ್ನೂ ಖುದ್ದಾಗಿ ವೀಕ್ಷಿಸಬಹುದು. ಸಿಎಫ್‌ಟಿಆರ್‌ಐ ವಿಜ್ಞಾನಿಗಳು ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ವಿಧಾನವನ್ನು ಪ್ರದರ್ಶಿಸುತ್ತಾರೆ. ಆಯುರ್ವೇದ ವೈದ್ಯರಿಂದ ಉಚಿತ ಸಲಹೆ ಮತ್ತು ಎಣ್ಣೆ ಬಳಕೆಯ ಮಾರ್ಗದರ್ಶನ ನೀಡಲಾಗುತ್ತಿದೆ. ಆಹಾರ ತಜ್ಞರು ದೇಹ ಪ್ರಕೃತಿಗಳಿಗೆ ಯೋಗ್ಯವಾದ ಎಣ್ಣೆಗಳ ಬಳಕೆಯ ಕುರಿತು ತಿಳಿಸಿಕೊಡಲಿದ್ದಾರೆ. ಶನಿವಾರ (ಜ.10) ಬೆಳಿಗ್ಗೆ 11ಕ್ಕೆ ಎಣ್ಣೆ ಬೆಳೆಗಳ ಕೃಷಿ ಮತ್ತು ಮೌಲ್ಯವರ್ಧನೆಯ ಬಗ್ಗೆ ತರಬೇತಿ ನಡೆಯಲಿದೆ. 11ರಂದು (ಭಾನುವಾರ) ಬೆಳಿಗ್ಗೆ 10.30ಕ್ಕೆ ಸಾಂಪ್ರದಾಯಿಕ ಎಣ್ಣೆಗಳ ಬಗ್ಗೆ ಅರಿವು ಮೂಡಿಸಲು 5ರಿಂದ 12 ವರ್ಷದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಎಣ್ಣೆ ಬೀಜಗಳು ಮತ್ತು ಕೃಷಿ ಎತ್ತುಗಳಿಂದ ಚಾಲಿತವಾಗುವ ಗಾಣ ರೈತರು ಮತ್ತು ಎಣ್ಣೆ ಹೊರತೆಗೆಯುವ ಪ್ರಕ್ರಿಯೆಯನ್ನು ಚಿತ್ರದ ಮೂಲಕ ತೋರಿಸಬೇಕು. ‘ಆರೋಗ್ಯಕರ ಎಣ್ಣೆ ಹಳ್ಳಿಯ ಆರ್ಥಿಕತೆ ಮತ್ತು ಪರಿಸರ ಸ್ನೇಹಿ’ ಎಂಬ ಸಂದೇಶಗಳನ್ನು ಚಿತ್ರವು ಒಳಗೊಂಡಿರಬೇಕು. ಭಾನುವಾರ ಮಧ್ಯಾಹ್ನ 12ಕ್ಕೆ ‘ಸಾಂಪ್ರದಾಯಿಕ ಎಣ್ಣೆಗಳ ಅಡುಗೆ ಸ್ಪರ್ಧೆ’ ನಡೆಯಲಿದೆ. ಸಾಂಪ್ರದಾಯಿಕ ಎಣ್ಣೆಗಳಿಂದ ತಯಾರಿಸಿದ ಅಡುಗೆಗಳನ್ನು ತರಬೇಕು. ಅಪರೂಪದ ಎಣ್ಣೆ ಬಳಸಿದ ಅಡುಗೆಗಳಿಗೆ ಆದ್ಯತೆ ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನ ದೊರೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.  ವೈವಿಧ್ಯಮಯ ದೇಸಿ ಆಹಾರ ಸವಿಯಲು ಅವಕಾಶವಿದೆ. ಸಾವಯವ ಉತ್ಪನ್ನಗಳು ಸಿರಿಧಾನ್ಯ ನಾಟಿ ಬೀಜ ಮತ್ತು ಹಣ್ಣಿನ ಗಿಡಗಳನ್ನು ಖರೀದಿಸಬಹುದು. ದೇಸಿ ಬೀಜ ಹಣ್ಣಿನ ಗಿಡ ಸಾವಯವ ಬೆಲ್ಲ ಅಕ್ಕಿ ಸಿರಿಧಾನ್ಯ ಮತ್ತು ಕೃಷಿ ಉತ್ಪನ್ನಗಳನ್ನು ಮಾರಲಾಗುತ್ತಿದೆ. ಮಕರ ಸಂಕ್ರಾಂತಿಗಾಗಿ ಸಾವಯವ ಎಳ್ಳು– ಬೆಲ್ಲ ಅವರೆ ಶೇಂಗಾ ಗೆಣಸು ಖರೀದಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.