ಹುಣಸೂರು: ಅಪ್ರತಿಮ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರನ್ನು ರಾಜ್ಯ ರಾಜಕಾರಣಕ್ಕೆ ಕೊಡುಗೆ ನೀಡಿರುವುದು ಹುಣಸೂರು ಕ್ಷೇತ್ರ ಎನ್ನುವ ಹೆಮ್ಮೆ ಇಲ್ಲಿನವರಾಗಿ ನಮಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದ ಹೊರ ವಲಯದ ದೇವರಾಜ ಅರಸು110 ನೇ ಜಯಂತಿ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಅರಸು ಸಾಧನೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಸಮಸಮಾಜದ ಪರಿಕಲ್ಪನೆಯಲ್ಲಿ ಭೂ ಸುಧಾರಣೆ, ಹಾವನೂರು ವರದಿ ಜಾರಿಗೊಳಿಸಿದರು ಎಂದರು.
ಮೈಸೂರು ರಾಜ್ಯ ಎಂಬ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ ರಾಜ್ಯದ ಅಭಿವೃದ್ಧಿ ಪಥಕ್ಕೆ ಹೊಸ ಮೈಲುಗಲ್ಲು ಹಾಕಿದ ವ್ಯಕ್ತಿತ್ವ ಅವರದು. ಸಮಾಜದ ಕಟ್ಟಕಡೆಯ ವ್ಯಕ್ತಿ ಸಮಾಜಮುಖಿಯಾಗಿ ಹೊರ ಹೊಮ್ಮುವ ದೂರದೃಷ್ಠಿ ಹೊಂದಿದ್ದರು ಎಂದರು.
ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್ ಮಾತನಾಡಿ, ದೇವರಾಜ ಅರಸು ಕುರಿತು ಅವರ ಸಾಧನೆ ಮಾತಿಗೆ ಸೀಮಿತವಾಗದೆ, ಭವಿಷ್ಯದ ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು. ಅರಸು ಜಯಂತಿ ಅಂಗವಾಗಿ ಕ್ಷೇತ್ರದಲ್ಲಿ ಅರಸು ಜೊತೆಗಿನ ರಾಜಕಾರಣ ಮಾಡಿದ ಎಚ್.ಎಸ್. ಶಿವಯ್ಯ,ರಾಮೇಗೌಡ ಅವರನ್ನು ಗೌರವಿಸಿದರು.
ತಹಶೀಲ್ದಾರ್ ಮಂಜುನಾಥ್ , ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಕುಮಾರ್ ಮಾತನಾಡಿದರು. ಇ.ಒ.ಹೊಂಗಯ್ಯ,ನಗರಸಭೆ ಆಯುಕ್ತೆ ಮಾನಸ, ಬಿಸಿಎಂ ಇಲಾಖೆ ಅಧಿಕಾರಿ ಆರತಿ, ಕಸಾಪ ಅಧ್ಯಕ್ಷ ಮಹದೇವ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.