ADVERTISEMENT

ಮೈಸೂರು | ಅರಸು ಪ್ರತಿಮೆ ಅನಾವರಣ: ನ.1ರ ಗಡುವು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 7:31 IST
Last Updated 27 ಅಕ್ಟೋಬರ್ 2025, 7:31 IST
<div class="paragraphs"><p>ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಸ್ಥಾಪಿಸಲಾಗಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆಯನ್ನು ಮುಚ್ಚಲಾಗಿದೆ</p></div>

ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಸ್ಥಾಪಿಸಲಾಗಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆಯನ್ನು ಮುಚ್ಚಲಾಗಿದೆ

   

ಪ್ರಜಾವಾಣಿ ಚಿತ್ರ: ಅನೂಪ್‌ರಾಘ ಟಿ.

ಮೈಸೂರು: ‘ಇಲ್ಲಿನ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಸ್ಥಾಪಿಸಲಾಗಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪ್ರತಿಮೆಯನ್ನು ನ.1ರಂದು ಅನಾವರಣಗೊಳಿಸಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್‌. ವಿಶ್ವನಾಥ್ ಸರ್ಕಾರವನ್ನು ಒತ್ತಾಯಿಸಿದರು.

ADVERTISEMENT

‘ನಮ್ಮ ಆಗ್ರಹಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಅರಸು ಅವರ ಅಭಿಮಾನಿಗಳಾದ ನಾವೇ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಪ್ರತಿಮೆ ಅನಾವರಣಗೊಳಿಸುತ್ತೇವೆ. ಇದಕ್ಕೆ ಅವಕಾಶ ಕೊಡದಂತೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಬಿ.ಎಸ್. ಯಡಿಯೂರ‍ಪ್ಪ ನೇತೃತ್ವದ ಸರ್ಕಾರವಿದ್ದಾಗ, ಡಿ.ದೇವರಾಜ ಅರಸು ನಿಗಮದ ಅಧ್ಯಕ್ಷರಾಗಿದ್ದ ಆರ್. ರಘು ಅವರು ಪ್ರತಿಮೆ ಸ್ಥಾಪನೆಗಾಗಿ ₹92 ಲಕ್ಷ ಅನುದಾನ ಮಂಜೂರು ಮಾಡಿಸಿದ್ದರು. ನಂತರ, ನಾವೆಲ್ಲರೂ ಒತ್ತಾಯಿಸಿದ ಪರಿಣಾಮ ಆ ಹಣದಲ್ಲಿ ಈಗಿನ ಸರ್ಕಾರವು ಪ್ರತಿಮೆ ಸ್ಥಾಪಿಸಿದೆ. ಆದರೆ, ಅನಾವರಣಕ್ಕೆ ನಿರ್ಲಕ್ಷ್ಯ ವಹಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಗಮನಸೆಳೆದಿದ್ದೆವು. ಆದರೆ, ಇದರಿಂದ ಪ್ರಯೋಜನವಾಗಿಲ್ಲ. ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿಯ ಬಗ್ಗೆ ತವರಿನಲ್ಲೇ ಇಷ್ಟೊಂದು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಟ್ಟಡಗಳನ್ನು ಉಳಿಸಬೇಕು:

‘ಸಿದ್ದರಾಮಯ್ಯ ಅವರು ನಾನೇ ದೇವರಾಜ ಅರಸು ಅವರೇಕೆ, ಹೀಗಿರುವಾಗ ಪ್ರತಿಮೆ ಅನಾವರಣವೇಕೆ ಎಂಬ ಭಾವನೆಯಲ್ಲಿ ಇದ್ದಾರೆ ಎನಿಸುತ್ತಿದೆ’ ಎಂದು ದೂರಿದರು.

‘ನಗರದ ಅಠಾರ ಕಚೇರಿ (ಹಳೆಯ ಜಿಲ್ಲಾಧಿಕಾರಿ ಕಚೇರಿ) ಸೇರಿದಂತೆ ಪಾರಂಪರಿಕ ಕಟ್ಟಡಗಳನ್ನು ಉಳಿಸಬೇಕು. ಅಠಾರ ಕಚೇರಿ ನಿರ್ವಹಣೆಗೂ ನಿರ್ಲಕ್ಷ್ಯ ವಹಿಸಲಾಗಿದೆ. ಅದಕ್ಕೆ ಸುಣ್ಣ–ಬಣ್ಣ ಮಾಡಿಸುವುದಕ್ಕೂ ಹಣವಿಲ್ಲವೇ? ಇದೂ ಸೇರಿದಂತೆ ಹಲವು ಕಟ್ಟಡಗಳು ಪಾಳು ಬೀಳುತ್ತಿವೆ. ಹೀಗೆಯೇ ಮಾಡುತ್ತಾ ಹೋದರೆ ಮುಂದೆ ಕಾಂಗ್ರೆಸ್ ಕೂಡ ಪಾಳು ಬೀಳುತ್ತದೆ’ ಎಂದರು.

ಗೌರವ ತೋರಿಸಲಿ:

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್‌. ರಘು ಮಾತನಾಡಿ, ‘ಮೈಸೂರು ರಾಜ್ಯ’ ಎಂದಿದ್ದುದ್ದನ್ನು ‘ಕರ್ನಾಟಕ ರಾಜ್ಯ’ ಎಂದು ನಾಮಕರಣ ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಸಮಾಜದ ಸುಧಾರಣೆಗೆ, ಎಲ್ಲರ ಏಳಿಗೆಗೆ, ಸಾಮಾಜಿಕ ನ್ಯಾಯ ಹಾಗೂ ಕನ್ನಡಕ್ಕೆ ಬದ್ಧತೆ ತೋರಿದ ಅವರು ಎಲ್ಲರ ಮನದಲ್ಲೂ ಶಾಶ್ವತವಾಗಿ ಉಳಿಯುತ್ತಾರೆ. ಆದರೆ, ಅವರ ಪ್ರತಿಮೆ ಅನಾವರಣಕ್ಕೆ ರಾಜ್ಯ ಸರ್ಕಾರವೇಕೆ ನಿರ್ಲಕ್ಷ್ಯ ವಹಿಸುತ್ತಿದೆ?’ ಎಂದು ಕೇಳಿದರು.

‘ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಮಾಡದಿರುವುದು ಸರಿಯಲ್ಲ. ಅವರ ಜಯಂತಿ ದಿನವಾದರೂ ಪ್ರತಿಮೆ ಅನಾವರಣಗೊಳಿಸಬಹುದಿತ್ತು. ಆದರೆ, ನಡೆಯಲಿಲ್ಲ. ಇದಕ್ಕೆ ಕಾರಣವೇನು ಎನ್ನುವುದು ಹಿಂದುಳಿದ ವರ್ಗದವರ ಪ್ರಶ್ನೆಯಾಗಿದೆ. ಇನ್ನಾದರೂ ಸರ್ಕಾರ ಪ್ರತಿಮೆ ಅನಾವರಣ‌ಗೊಳಿಸಿ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.