ಮೈಸೂರು: ಡಿಜಿಪಿ ಎಂ.ಎ.ಸಲೀಂ ಬುಧವಾರ ನಗರಕ್ಕೆ ಭೇಟಿ ನೀಡಿದರು. ದಸರಾ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ದಕ್ಷಿಣ ವಲಯ ಕಚೇರಿ ಹಾಗೂ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತ್ಯೇಕ ಸಭೆ ನಡೆಸಿದರು.
ಕಮಿಷನರ್ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್.ಬಿಂದುರಾಣಿ, ಕೆ.ಎಸ್.ಸುಂದರ್ ರಾಜ್ ಹಾಗೂ ಎಸಿಪಿಗಳು ಸಭೆಯಲ್ಲಿ ಭಾಗವಹಿಸಿದರು. 11 ದಿನಗಳ ಕಾಲ ನಡೆಯಲಿರುವ ದಸರಾದ ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜನ ಸಂದಣಿ ನಿರ್ವಹಣಾ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ)ಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು. ವಾಹನ ದಟ್ಟಣೆ ನಿರ್ವಹಣೆಯ ಮಾರ್ಗಸೂಚಿಗಳ ಬಗ್ಗೆಯೂ ಡಿಜಿಪಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ದಸರೆಯಲ್ಲಿ ಅನೇಕ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿಗಳ ತವರು ಜಿಲ್ಲೆಯ ಕಾರ್ಯಕ್ರಮವಾಗಿರುವುದರಿಂದ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಒದಗಿಸಬೇಕು’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮನವಿ ಮಾಡಿದರು.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆರ್.ಎನ್.ಬಿಂದುರಾಣಿ ಅವರು ದಸರಾ ಭದ್ರತಾ ವ್ಯವಸ್ಥೆಗಳ ಬಗ್ಗೆ ಪವರ್ ಪಾಯಿಂಟ್ ಮೂಲಕ ವಿವರಿಸಿದರು. ಪ್ರಸ್ತುತ ನಗರ ಪೊಲೀಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ, ಡಿಎಆರ್, ಸಿಎಆರ್, ಸಂಚಾರ, ಕೆಎಸ್‌ಆರ್‌ಪಿ, ಮೌಂಟೆಡ್ ಪೊಲೀಸ್, ಚಾಮುಂಡಿ, ಕಮಾಂಡೋ ಪಡೆ ಸಿಬ್ಬಂದಿ ಹಾಗೂ ಸಂಖ್ಯೆಯ ಕುರಿತು ಮಾಹಿತಿ ನೀಡಿದರು.
ದಕ್ಷಿಣ ವಲಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಐಜಿಪಿ ಡಾ.ಬೋರೆಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಎಎಸ್‌ಪಿಗಳಾದ ಮಲ್ಲಿಕ್ ಹಾಗೂ ನಾಗೇಶ್ ಭಾಗವಹಿಸಿದ್ದರು. ಉತ್ತನಹಳ್ಳಿಯಲ್ಲಿ ನಡೆಯಲಿರುವ ಯುವ ದಸರಾಕ್ಕಾಗಿ ನಡೆಸಿರುವ ಸಿದ್ಧತೆ ಕುರಿತು ಡಿಜಿಪಿ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.