ADVERTISEMENT

‘ಹೋರಾಟಗಾರರಿಗೆ ರಕ್ಷಣೆ ಒದಗಿಸಿ’: ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:11 IST
Last Updated 12 ಸೆಪ್ಟೆಂಬರ್ 2025, 5:11 IST
   

ಮೈಸೂರು: ‘ಧರ್ಮಸ್ಥಳದ ಅತ್ಯಾಚಾರಿಗಳ ವಿರುದ್ಧದ ನ್ಯಾಯಬದ್ಧ ಹೋರಾಟದ ಹಳಿ ತಪ್ಪಿಸಲು ಧರ್ಮದ ಹೆಸರು ಬಳಸುತ್ತಿರುವ ಮತಾಂಧ ಶಕ್ತಿಗಳ ನಡೆಯನ್ನು ಖಂಡಿಸಿ’ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಚಿಕ್ಕಗಡಿಯಾರದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

‘ಸೌಜನ್ಯ ಪ್ರಕರಣವೂ ಸೇರಿದಂತೆ ಧರ್ಮಸ್ಥಳದಲ್ಲಿ ನಾಲ್ಕೈದು ದಶಕಗಳಿಂದ ನಡೆದಿರುವ ಅತ್ಯಾಚಾರ, ಕೊಲೆ, ಮಹಿಳೆಯರ ಅಚಾನಕ್‌ ಕಾಣೆ ಪ್ರಕರಣಗಳ ಹಿಂದಿರುವ ಸತ್ಯ ತಿಳಿಯುವುದು ರಾಷ್ಟ್ರದ ಪ್ರತಿಯೊಬ್ಬರ ಹಕ್ಕು. ಆ ನಿಟ್ಟಿನಲ್ಲಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಷ್ಟಕ್ಕೇ ಬೆಚ್ಚಿ ಬಿದ್ದಿರುವ ಕೆಲವು ಮತಾಂಧ ಶಕ್ತಿಗಳು ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಆರಂಭಿಸಿವೆ’ ಎಂದು ಆರೋಪಿಸಿದರು.

‘ವಿರೋಧ ಪಕ್ಷದ ನಾಯಕರೂ ಇದನ್ನು ಬೆಂಬಲಿಸುತ್ತಿರುವುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಮುಕ್ತ, ಒತ್ತಡರಹಿತ ಹಾಗೂ ನ್ಯಾಯಯುತವಾಗಿ ತನಿಖೆ ನಡೆಸುವಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸತ್ಯವನ್ನು ಜನರ ಮುಂದಿಡಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ನೊಂದವರಿಗೆ ರಾಜ್ಯದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಮೂಡಿಸಬೇಕು. ಹೋರಾಡುವವರಿಗೆ ರಕ್ಷಣೆ ನೀಡುವ ಹೊಣೆ ಹೊರಬೇಕು’ ಎಂದು ನಿರ್ಣಯ ಕೈಗೊಂಡರು.

ಮುಖಂಡರಾದ ಸವಿತಾ ಮಲ್ಲೇಶ್, ಹೊಸಕೋಟೆ ಬಸವರಾಜು, ಸಬಿಹಾ ಭೂಮಿಗೌಡ, ಕೆ.ವಿ.ಸ್ಟಾನ್ಲಿ, ರತಿರಾವ್‌, ಉಗ್ರನರಸಿಂಹೇ ಗೌಡ, ಟಿ.ಗುರುರಾಜ್‌, ಶಂಭುಲಿಂಗಸ್ವಾಮಿ, ವಿಜಯ್ ಕುಮಾರ್, ಲಿಲಿತಾ, ಸುಶೀಲಾ, ಪ್ರೊ. ಕಾಳಚನ್ನೇಗೌಡ, ರವಿ, ಮರಂಕಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.