ADVERTISEMENT

ಆಮಿಷಗಳಿಗೆ ಬಲಿಯಾಗದಿರಿ: ದೇವನೂರ ಮಹಾದೇವ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾದ 100ಕ್ಕೂ ಅಧಿಕ ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 3:45 IST
Last Updated 6 ಜನವರಿ 2021, 3:45 IST
ಸ್ವರಾಜ್ ಇಂಡಿಯಾ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರಿನ ಕೃಷಿ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನೂತನ ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸಲಾಯಿತು
ಸ್ವರಾಜ್ ಇಂಡಿಯಾ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರಿನ ಕೃಷಿ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನೂತನ ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸಲಾಯಿತು   

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚುನಾಯಿತರಾದವರನ್ನು ಬಿಜೆಪಿ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ಸೆಳೆಯುತ್ತಿವೆ. ಸದಸ್ಯರು ಆಸೆ, ಆಮಿಷಗಳಿಗೆ ಬಲಿಯಾಗಬಾರದು ಎಂದು ಸಾಹಿತಿ ದೇವನೂರ ಮಹಾದೇವ ಅವರು ಸ್ವರಾಜ್ ಇಂಡಿಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕರೆ ನೀಡಿದರು.

ಸ್ವರಾಜ್ ಇಂಡಿಯಾ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ದಲಿತ ಸಂಘರ್ಷ ಸಮಿತಿ ವತಿಯಿಂದ ಇಲ್ಲಿನ ಕೃಷಿ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ನೂತನ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಗ ಸಾಧಿಸಿರುವುದು ಕೇವಲ ಬಹಿರಂಗದ ಗೆಲುವು ಮಾತ್ರ. ಬೇರೆ ಪಕ್ಷದವರು ನೀಡುವ ಆಮಿಷಕ್ಕೆ ಬಲಿಯಾಗದೇ ಅದರ ವಿರುದ್ಧ ಗೆದ್ದರೆ ಅದುಅಂತರಂಗದ ಗೆಲುವು ಹಾಗೂ ನಿಜವಾದ ಗೆಲುವೂ ಹೌದು. ಇನ್ನು ಮುಂದೆ ನಿತ್ಯವೂ ನೀವು ಇಂತಹ ಆಮಿಷಗಳ ಎದುರು ಗೆಲ್ಲಬೇಕಿದೆ. ಹೊಸದೊಂದು ಜವಾಬ್ದಾರಿ ನಿಮ್ಮ ಹೆಗಲೇರಿದೆ. ಅದನ್ನು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಸೋತವರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಿಮ್ಮದೇ ದೃಷ್ಟಿಕೋನದಲ್ಲಿ, ರಚನಾತ್ಮಕವಾಗಿ ಕೆಲಸ ಮಾಡಬೇಕು’
ಎಂದರು.

1,800 ಮಂದಿ ಆಯ್ಕೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸ್ವರಾಜ್ ಇಂಡಿಯಾ, ದಸಂಸ ಹಾಗೂ ರೈತ ಸಂಘದ ಬೆಂಬಲಿತ ಅಭ್ಯರ್ಥಿಗಳು ಇಡೀ ರಾಜ್ಯದಲ್ಲಿ 1,800 ಹಾಗೂ ಮೈಸೂರು ಜಿಲ್ಲೆಯಲ್ಲಿ 100 ಮಂದಿ ಆಯ್ಕೆಯಾಗಿದ್ದಾರೆ. ಇದೊಂದು ಅನಿರೀಕ್ಷಿತವಾದ ಜಯ ಎಂದು ಹೇಳಿದರು.

‘ನಮ್ಮ ಗಮನವೆಲ್ಲ ಸರ್ಕಾರದ ವಿರುದ್ಧದ ಚಳವಳಿ ಕಡೆಗೆ ಹರಿಯಿತು. ಚುನಾವಣೆ ಕಡೆಗೆ ಕಡಿಮೆ ಗಮನಕೊಟ್ಟೆವು. ಒಂದು ವೇಳೆ ಹೆಚ್ಚಿನ ಗಮನ ಕೊಟ್ಟಿದ್ದರೆ ಇನ್ನಷ್ಟು ಗೆಲುವು ಸಾಧ್ಯವಾಗುತ್ತಿತ್ತು’
ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯ ಗಳಿಸಿದ 50ಕ್ಕೂ ಹೆಚ್ಚು ಜನರನ್ನು ಸಭೆಯಲ್ಲಿ ಗೌರವಿಸಲಾಯಿತು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್,
ಸ್ವರಾಜ್ ಇಂಡಿಯಾದ ನಗರ ಘಟಕದ ಅಧ್ಯಕ್ಷ ಉಗ್ರನರಸಿಂಹೇಗೌಡ, ಮುಖಂಡರಾದ ಅಶ್ವಥ್‍ರಾಜೇ ಅರಸ್, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಗರುಡಗಂಬಸ್ವಾಮಿ, ಪ್ರಸನ್ನ ಎನ್.ಗೌಡ, ಪುನೀತ್, ಆಲಗೂಡು ಶಿವಕುಮಾರ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.