ADVERTISEMENT

ಶೈಕ್ಷಣಿಕ ಸಂವಹನ ಒಕ್ಕೂಟ ಆಯೋಜನೆ: ಸಾಕ್ಷ್ಯಚಿತ್ರೋತ್ಸವ- 4 ಚಿತ್ರಕ್ಕೆ ಪ್ರಶಸ್ತಿ

₹ 50 ಸಾವಿರ ನಗದು ಬಹುಮಾನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 4:14 IST
Last Updated 28 ನವೆಂಬರ್ 2021, 4:14 IST
ಮಾನಸಗಂಗೋತ್ರಿಯಲ್ಲಿ ಶನಿವಾರ ‘ಪ್ರಕೃತಿ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ’ದಲ್ಲಿ ಪ್ರಶಸ್ತಿ ಹಾಗೂ ಪ್ರದರ್ಶನ ಪ್ರಮಾಣ ಪತ್ರ ಪಡೆದ ಚಿತ್ರ ನಿರ್ದೇಶಕರೊಂದಿಗೆ ಇಎಂಆರ್‌ಸಿ ನಿರ್ದೇಶಕ ಪ್ರೊ.ಎಚ್‌.ರಾಜಶೇಖರ್‌, ಸಿಇಸಿ ನಿರ್ದೇಶಕ ಪ್ರೊ.ಜಗತ್‌ ಭೂಷಣ್‌ ನಡ್ಡ, ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ಮದ್ರಾಸ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಗೌರಿ, ಚಿತ್ರೋತ್ಸವದ ಸಂಯೋಜಕ ಡಾ.ಸುನಿಲ್‌ ಮೆಹ್ರು ಇದ್ದರು
ಮಾನಸಗಂಗೋತ್ರಿಯಲ್ಲಿ ಶನಿವಾರ ‘ಪ್ರಕೃತಿ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ’ದಲ್ಲಿ ಪ್ರಶಸ್ತಿ ಹಾಗೂ ಪ್ರದರ್ಶನ ಪ್ರಮಾಣ ಪತ್ರ ಪಡೆದ ಚಿತ್ರ ನಿರ್ದೇಶಕರೊಂದಿಗೆ ಇಎಂಆರ್‌ಸಿ ನಿರ್ದೇಶಕ ಪ್ರೊ.ಎಚ್‌.ರಾಜಶೇಖರ್‌, ಸಿಇಸಿ ನಿರ್ದೇಶಕ ಪ್ರೊ.ಜಗತ್‌ ಭೂಷಣ್‌ ನಡ್ಡ, ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ಮದ್ರಾಸ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಗೌರಿ, ಚಿತ್ರೋತ್ಸವದ ಸಂಯೋಜಕ ಡಾ.ಸುನಿಲ್‌ ಮೆಹ್ರು ಇದ್ದರು   

ಮೈಸೂರು: ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ‘ಪ್ರಕೃತಿ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ’ಕ್ಕೆ ಶನಿವಾರ ತೆರೆಬಿದ್ದಿದ್ದು, ಸಮಾರೋಪದಲ್ಲಿ ನಾಲ್ಕು ಸಾಕ್ಷ್ಯಚಿತ್ರಗಳು ₹ 50 ಸಾವಿರ ನಗದಿನೊಂದಿಗೆ ಪ್ರಶಸ್ತಿ ಗಳಿಸಿದವು

ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ), ಶೈಕ್ಷಣಿಕ ಸಂವಹನ ಒಕ್ಕೂಟ (ಸಿಇಸಿ) ಹಾಗೂ ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಆರ್‌ಸಿ) ಉತ್ಸವವನ್ನು ಇದೇ 24ರಿಂದ ಆಯೋಜಿಸಿದ್ದವು.

ಆಶೀಶ್‌ ಭವಾಲ್ಕರ್‌ ಅವರ ‘ಗ್ರೀನ್ ಮೋಕ್ಷ’, ಅಶೋಕ್‌ ಭೂತಾನಿ ನಿರ್ದೇಶನದ ‘ವೇವ್ ಆಫ್‌ ಟ್ರಾನ್ಸ
ಫರ್‌ಮೇಷನ್‌’, ಜಯಾ ಜೋಸ್‌ರಾಜ್‌ ಅವರ ‘ಬ್ಲೂಮಿಂಗ್‌ ಟುಗೆದರ್’ ಹಾಗೂ ಬೆಂಗಳೂರಿನ ಟಿ.ಪಿ.ವರದನಾಯಕ್ ನಿರ್ದೇಶನದ ‘ಸಿಕ್ಸ್ ವುಮನ್ಸ್– ಸಾಲಿಡ್ ವೇಸ್ಟ್‌ ಮ್ಯಾನೇಜ್‌ಮೆಂಟ್‌’ ಚಿತ್ರಗಳು ಕ್ರಮವಾಗಿ ಪರಿಸರ, ಅಭಿವೃದ್ಧಿ, ಮಾನವಹಕ್ಕುಗಳು ಹಾಗೂ ಸ್ವಚ್ಛಭಾರತ ವಿಭಾಗದಲ್ಲಿ ಪ್ರಶಸ್ತಿ ಗಿಟ್ಟಿಸಿದವು.

ADVERTISEMENT

ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಶೈಕ್ಷಣಿಕ ವಿಡಿಯೊ ಸ್ಪರ್ಧೆಯ 12 ಚಿತ್ರ ಹಾಗೂ 17 ಸಾಕ್ಷ್ಯಚಿತ್ರಗಳಿಗೂ ಪ್ರದರ್ಶನ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರಶಸ್ತಿ ವಿತರಿಸಿ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ‘ಸಮಾಜದ ವಿದ್ಯಮಾನಗಳನ್ನು ವಾಸ್ತವದ ನೆಲೆಯಲ್ಲಿಯೇ ಸಾಕ್ಷ್ಯಚಿತ್ರಗಳು ಕಟ್ಟಿಕೊಡುತ್ತವೆ. ವಸ್ತುವಿಷಯದ ವೈಭವೀಕರಣ ಇರುವುದಿಲ್ಲ. ನೋಡುಗರಲ್ಲಿ ಚಿಂತನೆ ಹುಟ್ಟಿಸುತ್ತವೆ. ಸಮಸ್ಯೆಗೆ ಪರಿಹರಿಸಲು ಹೊಳಹುಗಳನ್ನು ನೀಡುತ್ತವೆ’ ಎಂದರು.

‘ಕಲೆ ಮತ್ತು ವಿಜ್ಞಾನಗಳು ವೈಚಾರಿಕ ಸಮಾಜವನ್ನು ನಿರ್ಮಾಣಕ್ಕೆ ಶ್ರಮಿಸುತ್ತವೆ. ಸಾಕ್ಷ್ಯಚಿತ್ರಕ್ಕೆ ಈ ಎರಡೂ ಜ್ಞಾನ
ಶಾಖೆಗಳ ನೆರವು ಬೇಕು’ ಎಂದರು.

ಮದ್ರಾಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಗೌರಿ ಮಾತನಾಡಿ, ‘ಶಾಲಾ– ಕಾಲೇಜುಗಳಲ್ಲಿ ಸಾಕ್ಷ್ಯಚಿತ್ರಗಳು ಹೆಚ್ಚು ಪ್ರದರ್ಶನಗೊಳ್ಳಬೇಕು. ಮುಂದಿನ ಸಾಲಿನ ಚಿತ್ರೋತ್ಸವವನ್ನು ನಡೆಸಲು ವಿಶ್ವವಿದ್ಯಾಲಯವು ಉತ್ಸುಕವಾಗಿದ್ದು, ಸಿಇಸಿ ಅವಕಾಶ ನೀಡಬೇಕು’ ಎಂದು ಕೋರಿದರು.

ಸಿಇಸಿ ನಿರ್ದೇಶಕ ಪ್ರೊ.ಜಗತ್ ಭೂಷಣ್ ನಡ್ಡ, ಚಿತ್ರೋತ್ಸವದ ಸಂಯೋಜಕ ಡಾ.ಸುನೀಲ್ ಮೆಹ್ರು ಇದ್ದರು.

ಕನ್ನಡಿಗರ ಮೂರು ಸಾಕ್ಷ್ಯಚಿತ್ರಗಳು!: ಮಂಡ್ಯದ ಕುಂದನಿ ಬೆಟ್ಟದಲ್ಲಿ ಕಟ್ಟೆಗಳನ್ನು ನಿರ್ಮಿಸಿದ ಕಾಮೇಗೌಡ ಅವರ ಜೀವನ ಆಧರಿತ ಟಿ.ಕೆಂಪಣ್ಣ ನಿರ್ದೇಶನದ ಸಾಕ್ಷ್ಯಚಿತ್ರ ‘ಕಾಮೇಗೌಡ ಎ ಯೂನಿಕ್ ರೋಲ್ ಮಾಡಲ್’ (ಇಂಗ್ಲಿಷ್), ಮೈಸೂರು ವಿಶ್ವವಿದ್ಯಾಲಯದ ಇಎಂಆರ್‌ಸಿಯ ಕೆ.ಗೋಪಿನಾಥ್ ನಿರ್ದೇಶನದ ‘ಸೋಲಾರ್ ಇನ್ಸೆಕ್ಟ್‌ ಟ್ರ್ಯಾಪ್, ಕರಿಬಸಪ್ಪ ಇನೊವೆಟಿವ್ ರಿಫಾರ್ಮರ್‌’ (ಇಂಗ್ಲಿಷ್) ಚಿತ್ರಗಳು ಪ್ರದರ್ಶನ ಪ್ರಮಾಣ ಪತ್ರ ಪಡೆದವು.ಬೆಂಗಳೂರಿನ ಟಿ.ಪಿ.ವರದನಾಯಕ್ ನಿರ್ದೇಶನದ ‘ಸಿಕ್ಸ್ ವುಮನ್ಸ್– ಸಾಲಿಡ್‌ ವೇಸ್ಟ್‌ ಮ್ಯಾನೆಜ್‌ಮೆಂಟ್‌’ (ಇಂಗ್ಲಿಷ್) ಸ್ವಚ್ಛಭಾರತದ ವಿಭಾಗದಲ್ಲಿ ನಗದು ಪುರಸ್ಕಾರ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.