ADVERTISEMENT

ಎಂಸಿಡಿಸಿಸಿ ಬ್ಯಾಂಕ್‌: ದೊಡ್ಡಸ್ವಾಮೇಗೌಡ ಅಧ್ಯಕ್ಷ

ಉಪಾಧ್ಯಕ್ಷರಾಗಿ ಯಳಂದೂರಿನ ಜಯರಾಮು ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:32 IST
Last Updated 31 ಡಿಸೆಂಬರ್ 2025, 4:32 IST
   

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಎಂಸಿಡಿಸಿಸಿ) ಅಧ್ಯಕ್ಷರಾಗಿ ಕೆ.ಆರ್.ನಗರದ ದೊಡ್ಡಸ್ವಾಮೇಗೌಡ ಹಾಗೂ ಉಪಾಧ್ಯಕ್ಷರಾಗಿ ಯಳಂದೂರು ತಾಲ್ಲೂಕಿನ ವೈ.ಎನ್.ಜಯರಾಮು ಅವಿರೋಧವಾಗಿ ಆಯ್ಕೆಯಾದರು.

ನಗರದ ಅಶೋಕ ವೃತ್ತದಲ್ಲಿರುವ ಬ್ಯಾಂಕ್ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್ ಅವರ ತಂದೆ ದೊಡ್ಡಸ್ವಾಮೇಗೌಡ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ವೈ.ಎನ್.ಜಯರಾಮು ಅವರು ಉಪ ವಿಭಾಗಾಧಿಕಾರಿಗಳೂ ಆದ ಚುನಾವಣಾಧಿಕಾರಿ ಆಶಪ್ಪ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು. ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ನಾಮಪತ್ರವನ್ನು ಪರಿಶೀಲಿಸಿ ಕ್ರಮಬದ್ಧವೆಂದು ಘೋಷಣೆ ಮಾಡಲಾಯಿತು.

ನಿಗದಿತ ಸಮಯದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದ ಆಶಪ್ಪ, ನಿರ್ದೇಶಕರ ಹಾಜರಾತಿ ಸಹಿ ಪಡೆದುಕೊಂಡ ಬಳಿಕ ಅವಿರೋಧವಾಗಿ ಆಯ್ಕೆಯಾದರೆಂದು ಘೋಷಿಸಿದರು.

ADVERTISEMENT

ಶಾಸಕರಾದ ಅನಿಲ್ ಚಿಕ್ಕಮಾದು, ಶಾಸಕ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಆರ್.ನರೇಂದ್ರ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳ ಅಧ್ಯಕ್ಷ ಎಸ್.ಚಂದ್ರಶೇಖರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಎಂ.ಕೆಂಚಪ್ಪ, ಶಾಸಕ ತನ್ವೀರ್ ಸೇಠ್ ಆಪ್ತ ಜಿ.ಎನ್.ಮಂಜುನಾಥ್, ವೈ.ಎನ್.ಜಯರಾಮು, ಇ.ಪಿ.ಲೋಕೇಶ್ ಹಾಜರಿದ್ದರು.

ಬ್ಯಾಂಕಿನ ಆಡಳಿತಾಧಿಕಾರಿ ಕೆ.ಎಂ.ಆಶಾ ಅವರು ಹೂಗುಚ್ಛ ನೀಡಿ ದೊಡ್ಡಸ್ವಾಮೇಗೌಡರಿಗೆ ಅಭಿನಂದಿಸಿ, ಅಧಿಕಾರ ಹಸ್ತಾಂತರ ಮಾಡಿದರು. ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಆರ್.ಜೆ.ಕಾಂತರಾಜ್ ಇದ್ದರು.

ವಿಜಯೋತ್ಸವ: ಚುನಾವಣೆ ಬಳಿಕ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಶಾಸಕ ಡಿ.ರವಿಶಂಕರ್ ಹಾಗೂ ದೊಡ್ಡಸ್ವಾಮೇಗೌಡರು ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಹಾರ ಹಾಕಿ, ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಜೈಕಾರದ ಘೋಷಣೆಗಳನ್ನು ಕೂಗಿದರು. ಕೆಲಕಾಲ ಅಶೋಕ ವೃತ್ತದ ಬಳಿ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರು ಪ್ರತ್ಯೇಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.