ADVERTISEMENT

ಮೈಸೂರು: ‘ರೋಗಿಗಳ ಬಂಧು’ಗೆ ನಾಲ್ಕಂತಸ್ತಿನ ಡಾರ್ಮೆಟರಿ

ಎಂ.ಮಹೇಶ
Published 15 ಮೇ 2025, 6:04 IST
Last Updated 15 ಮೇ 2025, 6:04 IST
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ ಡಾರ್ಮೆಟರಿ ನಿರ್ಮಾಣ ಕಾರ್ಯ ನಡೆದಿದೆ
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ ಡಾರ್ಮೆಟರಿ ನಿರ್ಮಾಣ ಕಾರ್ಯ ನಡೆದಿದೆ   

ಮೈಸೂರು: ಇಲ್ಲಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಬಂಧುಗಳು ತಂಗಲೆಂದು ಡಾರ್ಮೆಟರಿಯನ್ನು ನಿರ್ಮಿಸಲಾಗುತ್ತಿದ್ದು, ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ.

ರಾಜ್ಯ ಸರ್ಕಾರದ ಈ ಆಸ್ಪತ್ರೆಯಲ್ಲಿ ₹ 4.50 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 80 ಹಾಸಿಗೆಗಳ ಸಾಮರ್ಥ್ಯದ ಈ ಡಾರ್ಮೆಟರಿಯಲ್ಲಿ (ಪೇಶೆಂಟ್ ಅಟೆಂಡರ್‌ ವೇಟಿಂಗ್ ಲಾಂಜ್) ಏಕಕಾಲಕ್ಕೆ ನೂರು ಮಂದಿ ಉಳಿದುಕೊಳ್ಳಬಹುದು.

ಈ ಆಸ್ಪತ್ರೆಗೆ ಹೃದ್ರೋಗ ತ‍ಪಾಸಣೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆಂದು ಮೈಸೂರು ನಗರ ಹಾಗೂ ಜಿಲ್ಲೆಗಳವರೊಂದಿಗೆ, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಿಂದ ನಿತ್ಯವೂ ನೂರಾರು ಮಂದಿ ಬರುತ್ತಾರೆ. ಆ್ಯಂಜಿಯೊಪ್ಲಾಸ್ಟಿ, ಆ್ಯಂಜಿಯೊಗ್ರಾಂ ಮೊದಲಾದ ಚಿಕಿತ್ಸೆ ನೀಡುವಾಗ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳನ್ನು ‘ಒಳರೋಗಿ’ಗಳಿಗೆ ದಾಖಲಿಸಿಳ್ಳಲಾಗುತ್ತದೆ. ಅವರ ಜೊತೆಯಲ್ಲಿ ಬರುವ ಕುಟುಂಬದವರು ಅಥವಾ ‘ಆರೈಕೆದಾರರು’ ವಿಶೇಷ ವಾರ್ಡ್‌ನಲ್ಲಿ ಕೊಠಡಿ ಪಡೆದರೆ ಮಾತ್ರ ರೋಗಿಯ ಜೊತೆಯಲ್ಲಿ ರಾತ್ರಿ ವೇಳೆ ಉಳಿದುಕೊಳ್ಳಬಹುದು. ಕೊಠಡಿ ಪಡೆಯದವರು ಹೊರಗೆಲ್ಲಾದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲವೇ ಆಸ್ಪತ್ರೆಯ ಆವರಣದಲ್ಲಿ ಅಥವಾ ಅನಿವಾರ್ಯವಾಗಿ ಹೊರ ಗಿರಬೇಕು.

ADVERTISEMENT

ತೊಂದರೆ ಇಲ್ಲ:  ‘ಉಳ್ಳವರು’ ವಿಶೇಷ ವಾರ್ಡ್‌ ತೆಗೆದುಕೊಳ್ಳುತ್ತಾರೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅದನ್ನು ಪಡೆಯಲು ಆಗುವುದಿಲ್ಲ. ಅಂಥವರು ಹೊರಗಡೆ ಹೋಟೆಲ್‌ನಲ್ಲಿ ರೂಂ ಮಾಡಿದರೆ ದುಬಾರಿಯಾಗುತ್ತದೆ. ಅಂಥವರಿಗೆ ಕಡಿಮೆ ಬಾಡಿಗೆಗೆ ನೀಡುವುದಕ್ಕಾಗಿಯೇ ಡಾರ್ಮೆಟರಿ ನಿರ್ಮಿಸ ಲಾಗುತ್ತಿದೆ. ರೂಂಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮಾತ್ರ ಮೀಸಲಾಗಿರಲಿವೆ. ಸದ್ಯ ಬೆಂಗಳೂರಿನ ಆಸ್ಪತ್ರೆಯಲ್ಲಿ ಇಂತಹ ವ್ಯವಸ್ಥೆ ಇದ್ದು, ದಿನಕ್ಕೆ ₹ 100ರಿಂದ ₹150 ಪಡೆದುಕೊಳ್ಳಲಾಗುತ್ತಿದೆ. ಅದೇ ಮಾದರಿಯಲ್ಲಿ ಇಲ್ಲೂ ಅನುಸರಿಸಲು ಯೋಜಿಸಲಾಗಿದೆ.

‘ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರ ಕಡೆಯವರು ತಂಗು ವುದಕ್ಕೆ ತೊಂದರೆ ಪಡಬಾರದೆಂದು ಡಾರ್ಮೆಟರಿ ನಿರ್ಮಿಸಲಾಗುತ್ತಿದೆ. ಅವರು ಹೊರಗೆಲ್ಲೋ, ಚಳಿಯಲ್ಲಿ ಮಲಗುವುದು ತ‍ಪ್ಪುತ್ತದೆ ಅಥವಾ ಹೋಟೆಲ್‌ನಲ್ಲಿ ರೂಂ ಮಾಡುವ ಅಗತ್ಯವಿರುವುದಿಲ್ಲ. ಕೊಠಡಿಯಲ್ಲಿ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಲಾಕರ್, ಶೌಚಾಲಯ ಹಾಗೂ ಸ್ನಾನದ ಕೋಣೆ ಇರಲಿದೆ’ ಎಂದು ಆಸ್ಪತ್ರೆಯ ಮೆಡಿಕಲ್‌ ಸೂಪರಿಂಟೆಂಡೆಂಟ್ ಡಾ. ಕೆ.ಎಸ್. ಸದಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

200ರಿಂದ 250 ಮಂದಿ: ಆಸ್ಪತ್ರೆಯಲ್ಲಿ ಸರಾಸರಿ 200ರಿಂದ 250 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಡಾರ್ಮೆಟರಿ ನಿರ್ಮಾಣಗೊಂಡ ನಂತರದ ಪ್ರತಿಕ್ರಿಯೆ ಆಧರಿಸಿ ಮತ್ತಷ್ಟು ಕೊಠಡಿಗಳ ನಿರ್ಮಾಣಕ್ಕೂ ಯೋಜಿಸಲಾಗಿದೆ.

ಈ ಕಟ್ಟಡದ ಮೇಲೆ ಪಿಜಿ ಡಾಕ್ಟರ್‌ಗಳು ಉಳಿದುಕೊಳ್ಳಲೆಂದು ಒಂದು ಅಂತಸ್ತಿನಲ್ಲಿ ಕನಿಷ್ಠ 8ರಿಂದ 10 ಕೊಠಡಿಗಳನ್ನು ನಿರ್ಮಿಸುವುದಕ್ಕೂ ಯೋಜಿಸಲಾಗಿದೆ. ಆಸ್ಪತ್ರೆಯ ಆಂತರಿಕ ಸಂಪನ್ಮೂಲವನ್ನು ಬಳಸಲು ಉದ್ದೇಶಿಸಲಾಗಿದೆ. ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅವರ ಸೂಚನೆಯಂತೆ ಪಿಜಿ ವೈದ್ಯರಿಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಡಾ.ಕೆ.ಎಸ್. ಸದಾನಂದ
ಡಾರ್ಮೆಟರಿ ಕಾಮಗಾರಿಯನ್ನು ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸಿ ರೋಗಿಗಳ ಬಂಧುಗಳ ಸೇವೆಗೆ ಮುಕ್ತಗೊಳಿಸಬೇಕು ಎಂಬ ಉದ್ದೇಶ ಹೊಂದಲಾಗಿದೆ
ಡಾ.ಕೆ.ಎಸ್. ಸದಾನಂದ ಮೆಡಿಕಲ್ ಸೂಪರಿಂಟೆಂಡೆಂಟ್ ಜಯದೇವ ಹೃದ್ರೋಗ ಆಸ್ಪತ್ರೆ
ವರ್ಷದಲ್ಲಿ 892 ರೋಗಿಗಳಿಗೆ ಸರ್ಜರಿ
ಈ ಆಸ್ಪತ್ರೆಯಲ್ಲಿ 2024ರಲ್ಲಿ 19047 ಕ್ಯಾತ್‌ಲ್ಯಾಬ್ ಪ್ರಕ್ರಿಯೆ ನಡೆದಿದೆ. 11375 ಮಂದಿಗೆ ಆಂಜಿಯೋಗ್ರಾಂ ಮಾಡಲಾಗಿದ್ದು ಅದರಲ್ಲಿ 6297 ಮಂದಿಗೆ ಆಂಜಿಯೋಪ್ಲಾಸ್ಟಿ ಆಗಿದೆ. 892 ರೋಗಿಗಳಿಗೆ ಸರ್ಜರಿ ಮಾಡಲಾಗಿದೆ. 232129 ಮಂದಿ ಹೊರರೋಗಿಗಳಾಗಿ ಹಾಗೂ 20286 ರೋಗಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 182963 ಮಂದಿಗೆ ಇಸಿಜಿ ನಡೆಸಲಾಗಿದೆ. 8594 ರೋಗಿಗಳಿಗೆ ಟಿಎಂಟಿ ಮಾಡಲಾಗಿದೆ. ರೋಗಿಗಳಿಗೆ ಉತ್ತಮ ಸೇವೆ ಒದಗಿಸಲು ಹಾಗೂ ಆಸ್ಪತ್ರೆಯ ಆವರಣ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ಸದಾನಂದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.