
ಧರ್ಮಾಪುರ: ಗ್ರಾಮದ ಈಶ್ವರ ಸ್ವಾಮಿ, ಮಹದೇಶ್ವರ ಸ್ವಾಮಿಯ ಕೊಂಡೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು.
ಸೋಮವಾರ ರಾತ್ರಿ ಮಾದೇಶ್ವರ ದೇವಾಲಯದಲ್ಲಿ ಹೋಮ, ಹವನ, ವಿಶೇಷ ಪೂಜೆ ಮಾಡಲಾಯಿತು. ಬಳಿಕ ಕೊಂಡಕ್ಕೆ ಹದಗೊಳಿಸಿದ ಸೌದೆಗೆ ಕರ್ಪೂರ ಹಚ್ಚುವ ಮೂಲಕ ಕೊಂಡಕ್ಕೆ ಸಿದ್ಧತೆ ನಡೆಸಲಾಯಿತು. ನಂತರ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು.
ಮಂಗಳವಾರ ಬೆ. 7ಕ್ಕೆ ಗ್ರಾಮದ ಮೂಡಲಕೆರೆಯಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಾದೇಶ್ವರ ಸ್ವಾಮಿ, ಬೈರವೇಶ್ವರ ಸ್ವಾಮಿಯ ಹುಲಿ ವಾಹನಗಳನ್ನು ಕರೆತರಲಾಯಿತು. ಅರ್ಚಕರು ಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಈಶ್ವರ ಸ್ವಾಮಿಯ ಅರ್ಚಕ ಚಂದ್ರಪ್ಪ, ಮಾದೇಶ್ವರ ಸ್ವಾಮಿಯ ಅರ್ಚಕ ಪಾಪಣ್ಣ ಕೊಂಡ ಹಾಯ್ದರು.
ದೇವಸ್ಥಾನದ ಗರ್ಭಗುಡಿ, ಮಾದೇಶ್ವರ ವಿಗ್ರಹ, ಹಾಗೂ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕೊಂಡೋತ್ಸವ ಮುಗಿದ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ನಂತರ ಹರಕೆ ಒತ್ತಿದ್ದ ಭಕ್ತರು ಎಳ್ಳು, ಹರಳು ಬೀಜಗಳನ್ನು ಪೂಜೆ ಸಲ್ಲಿಸಿ ಕೊಂಡಕ್ಕೆ ಅರ್ಪಿಸಿದರು.
ಅನ್ನ ಸಂತರ್ಪಣೆ:
ಕೊಂಡೋತ್ಸವಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮುಖಂಡರಾದ ಡಿ.ಕೆ. ಕುನ್ನೇಗೌಡ, ಮಹದೇವ ವಿ, ವಿಶ್ವನಾಥ್, ಯಜಮಾನರಾದ ರಾಮಚಂದ್ರ, ಸೋಮಣ್ಣ ಶೆಟ್ಟಿ, ನಿಂಗೇಗೌಡ, ಶಂಕರೇಗೌಡ, ಅಣ್ಣೇಗೌಡ, ನಾರಾಯಣ ನಾಯಕ ಹಾಗೂ ಸುತ್ತಮುತ್ತಲ ಹಳ್ಳದ ಕೊಪ್ಪಲು, ಮಲ್ಲೇಗೌಡನ ಕೊಪ್ಪಲು, ಗದ್ದಿಗೆ, ನಾಡಪ್ಪನಹಳ್ಳಿ, ಕರಿಮುದ್ದನಹಳ್ಳಿ, ಗೌರಿಪುರ, ನಂಜಾಪುರ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.