ಪೊಲೀಸ್ – ಪ್ರಾತಿನಿಧಿಕ ಚಿತ್ರ
ಶ್ರೀರಂಗಪಟ್ಟಣ: 7 ಜನರ ತಂಡವೊಂದು ಅಪಹರಿಸಿ ನಗದು– ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ ಎಂದು ತುರ್ತು ಸಹಾಯವಾಣಿ ‘112’ ಕರೆ ಮಾಡಿ ಸುಳ್ಳು ದೂರು ನೀಡಿದ್ದ ಯುವಕನಿಂದಾಗಿ ಪೊಲೀಸರು ರಾತ್ರಿ ಇಡೀ ಶೋಧಕಾರ್ಯ ನಡೆಸುವಂತೆ ಮಾಡಿ ಬೇಸ್ತು ಬೀಳಿಸಿದ್ದಾನೆ.
ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಮಾವಿನಹಳ್ಳಿಯ ಪ್ರಸನ್ನ (24) ಸುಳ್ಳು ದೂರು ನೀಡಿದವನು.
ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಬಳಿ ಸರ್ವೀಸ್ ರಸ್ತೆಯಲ್ಲಿ ಗೂಡ್ಸ್ ಗಾಡಿಯಲ್ಲಿ ತೆರಳುವಾಗ ದುಷ್ಕರ್ಮಿಗಳು ಅಪಹರಿಸಿದ್ದಾರೆ. ₹17 ಸಾವಿರ ಹಣ ಮತ್ತು ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದು, ಮತ್ತಷ್ಟು ಹಣ ಕೊಡುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಸಹಾಯವಾಣಿಗೆ ತಿಳಿಸಿದ್ದನು. ಮನೆಯವರಿಗೂ ಇದೇ ರೀತಿ ಹೇಳಿದ್ದು, ಖಾತೆಗೆ ₹56 ಸಾವಿರ ಹಣ ಹಾಕಿಸಿಕೊಂಡಿದ್ದಾನೆ.
ಯುವಕ ಹೇಳಿದ ಸ್ಥಳಕ್ಕೆ ತಕ್ಷಣ ಧಾವಿಸಿದ ಪೊಲೀಸರು ದುಷ್ಕರ್ಮಿಗಳಿಗಾಗಿ ಇಡೀ ರಾತ್ರಿ ಶೋಧ ನಡೆಸಿದ್ದಾರೆ. ಹೆಚ್ಚುವರಿ ಎಸ್‌ಪಿ ಗಂಗಾಧರಸ್ವಾಮಿ, ಡಿವೈಎಸ್‌ಪಿ ಶಾಂತಮಲ್ಲಪ್ಪ, ಸಿಪಿಐ ಆನಂದಕುಮಾರ್ ನೇತೃತ್ವದ ತಂಡ ಭಾನುವಾರ ಮಧ್ಯಾಹ್ನದವರೆಗೂ ತನಿಖೆ ನಡೆಸಿದೆ.
‘ಕರೆ ಮಾಡಿ ದೂರು ನೀಡಿದ ಯುವಕ ಮೈಸೂರಿನ ಚಾಮುಂಡಿ ಬೆಟ್ಟದ ಆಸುಪಾಸಿನಲ್ಲೇ ಇದ್ದು, ಸುಳ್ಳು ಮಾಹಿತಿ ನೀಡಿದ್ದಾನೆ. ಪ್ರಸನ್ನ ಮತ್ತು ಆತನ ಬಂಧುಗಳನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಗೂಡ್ಸ್ ವಾಹನ ಚಾಲಕನಾಗಿರುವ ಪ್ರಸನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡವನಂತೆ ವರ್ತಿಸುತ್ತಿದ್ದಾನೆ’ ಎಂದು ಸಿಪಿಐ ಎಚ್.ಆನಂದಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.