
ಹುಣಸೂರು: ‘ರೈತ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟು ಅತಿ ಮುಖ್ಯವಾಗಿದ್ದು, ಒಗ್ಗಟ್ಟಿನಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಿಂಗಮ್ಮ ಹೇಳಿದರು.
ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಶುಕ್ರವಾರ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ, ‘ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಮ್ಮೊಳಗೆ ಒಗ್ಗಟ್ಟು ಮುಖ್ಯವಾಗಿದೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ರೈತ ಸಮುದಾಯದ ಒಳಿತಿಗೆ ಒಗ್ಗೂಡಬೇಕು’ ಎಂದರು.
‘ಸಮಾಜದಲ್ಲಿ ಎದುರಾಗುವ ಅನ್ಯಾಯದ ವಿರುದ್ಧ ಅನ್ನದಾತರು ಧ್ವನಿ ಎತ್ತಬೇಕಾಗಿದೆ. ಅಧಿಕಾರಿ ವರ್ಗದವರು ಅನ್ನದಾತರನ್ನು ಅನಕ್ಷರಸ್ಥರು ಎಂಬ ಭಾವನೆಯಲ್ಲಿ ನೋಡುತ್ತಿದ್ದು ಅವರಿಗೆ ನಮ್ಮ ಅಂತರಿಕ ಜ್ಞಾನವನ್ನು ತಿಳಿಸುವ ದಿಕ್ಕಿನಲ್ಲಿ ನಮ್ಮ ಸಾಮರ್ಥ್ಯವನ್ನು ತಿಳಿಸಬೇಕಾಗಿದೆ. ಆ ಮೂಲಕ ಸಮಾಜದಲ್ಲಿ ಇರುವ ಭ್ರಷ್ಟಾಚಾರ ಮತ್ತು ಇತರೆ ಅಸಮಾನತೆಯನ್ನು ನಿಯಂತ್ರಿಸಲು ಸಾಧ್ಯ’ ಎಂದರು.
‘ರೈತ ಸಂಘದ ಸದಸ್ಯರು ಯಾವುದೇ ರಾಜಕೀಯ ಪಕ್ಷಗಳ ಹಿಂಬಾಲಕರಾಗದೆ ನಮ್ಮ ಸಂಘಟನೆಯನ್ನು ಬಲಗೊಳಿಸುವ ದಿಕ್ಕಿನಲ್ಲಿ ಶಕ್ತಿ ತುಂಬಿಸಬೇಕಾಗಿದೆ. ಸ್ವಾತಂತ್ರ್ಯ ದಿನದಿಂದಲೂ ರೈತರು ಇತರರ ಸೇವೆಯಲ್ಲಿ ಜೀವ ಮುಡಿಪಾಗಿಟ್ಟಿದ್ದು, ಈಗಲಾದರೂ ನಮ್ಮ ಸಾಮರ್ಥ್ಯದ ಮೇಲೆ ನಮ್ಮ ಶಕ್ತಿ ತುಂಬಿಸಿ’ ಎಂದರು.
ರಾಜ್ಯ ರೈತ ಸಂಘದ ಯುವ ಘಟಕದ ಅಧ್ಯಕ್ಷ ರವಿಸಿದ್ದೇಗೌಡ ಮಾತನಾಡಿ, ‘ಪ್ರತಿ ಹಳ್ಳಿಯಲ್ಲೂ ಗ್ರಾಮ ಘಟಕ ಆರಂಭಿಸಿ ರೈತರ ಶಕ್ತಿ ಮತ್ತಷ್ಟು ಹೆಚ್ಚಾಗುವುದರಿಂದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಆಧುನಿಕ ಮಾರುಕಟ್ಟೆ, ಕೋಲ್ಡ್ ಸ್ಟೋರೇಜ್‌ಗಳು ಸೇರಿದಂತೆ ರೈತನ ಹೊಲಕ್ಕೆ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ಈಡೇರಿಸಿಕೊಳ್ಳಲು ಸಹಕಾರವಾಗಲಿದೆ’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ರೇವಣ್ಣ, ಉಮಾದೇವಿ ಕುಮಾರಸ್ವಾಮಿ, ಮಹದೇವಮ್ಮ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಶಶಿಧರ್, ಗ್ರಾಮ ಘಟಕದ ಅಧ್ಯಕ್ಷ ಸ್ವಾಮಿ, ಉಪಾಧ್ಯಕ್ಷ ಕೃಷ್ಣಪ್ಪ, ಶ್ರೀನಿವಾಸ್, ಸುರೇಶ್, ಕುಮಾರ್, ರಾಜು, ಮಹದೇವ್, ಸೋಮೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.