ADVERTISEMENT

ಫೆ.7ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:23 IST
Last Updated 17 ಜನವರಿ 2026, 5:23 IST
ಕುರುಬೂರು ಶಾಂತಕುಮಾರ್‌
ಕುರುಬೂರು ಶಾಂತಕುಮಾರ್‌   

ಮೈಸೂರು: ‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಆಗ್ರಹಿಸಿ ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ವತಿಯಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ
ರೈತ ಜಾಗೃತಿ ಯಾತ್ರೆಯನ್ನು ಫೆ.7ರಿಂದ 40 ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ’
ಎಂದು ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದರು.

‘ಮಾರ್ಚ್ 19ರಂದು ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ದೇಶದ ಎಲ್ಲಾ ರೈತರ ಬೃಹತ್ ಸಮಾವೇಶ ನಡೆಸಲಾಗುವುದು. ರೈತರ ಸಹಿ ಸಂಗ್ರಹದ ಮನವಿಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಾಗುವುದು’ ಎಂದು ಶುಕ್ರವಾರಪತ್ರಿಕಾಗೋಷ್ಠಿಯಲ್ಲಿ ಮಾಹಿತಿನೀಡಿದರು.

‘ದೆಹಲಿಯ →ಗಡಿಯಲ್ಲಿ ರೈತರು ಚಳವಳಿ ನಡೆಸಿ ಸರ್ಕಾರವನ್ನು
ಎಚ್ಚರಿಸಿದ್ದರು. ಆದರೂ ಗಂಭೀರವಾದ ಕ್ರಮವಾಗದ ಕಾರಣದಿಂದ ರಾಷ್ಟ್ರೀಯ ಸಂಚಾಲಕ ಜಗಜಿತ್‌ಸಿಂಗ್ ಡಲ್ಲೇವಾಲ್‌ 131 ದಿನ ಉಪವಾಸ ಸತ್ಯಾಗ್ರಹ ನಡೆಸಿದ ಪರಿಣಾಮ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನವಾಬ್‌ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸಮಸ್ಯೆ ಪರಿಹಾರಕ್ಕೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಸಮಿತಿಯು ರೈತರ ಪರವಾಗಿ ವರದಿ ನೀಡಿದೆ. ಕೇಂದ್ರದ 31 ಮಂದಿಯ ಸಂಸದೀಯ ಸಮಿತಿಯೂ, ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಬೆಂಬಲಿಸಿದೆ. ಆದರೆ, ಈ ಬಗ್ಗೆ ಸರ್ಕಾರ ಚಕಾರವನ್ನೇ ಎತ್ತದಿರುವುದನ್ನು ಖಂಡಿಸಿ ಯಾತ್ರೆಗೆ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು. 

ADVERTISEMENT

‘ಎಂಎಸ್‌ಪಿ ಖಾತರಿ ಕಾನೂನು ಇಲ್ಲದ ಕಾರಣ ವರ್ಷಕ್ಕೆ ₹ 15 ಲಕ್ಷ ಕೋಟಿ ನಷ್ಟವನ್ನು ನಮ್ಮ ದೇಶದ ರೈತರು ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.