ADVERTISEMENT

ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರ ಆಕ್ರೋಶ

ಮೈಸೂರಿನಲ್ಲಿ 3 ಕಡೆ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:12 IST
Last Updated 7 ಫೆಬ್ರುವರಿ 2021, 1:12 IST
ಮೈಸೂರಿನ ಎಪಿಎಂಸಿ ಮುಂಭಾಗ ರಸ್ತೆಯಲ್ಲೇ ಕುರಿ, ಮೇಕೆಗಳನ್ನು ತಂದು ರೈತರು ಶನಿವಾರ ಪ್ರತಿಭಟನೆ ನಡೆಸಿದರು
ಮೈಸೂರಿನ ಎಪಿಎಂಸಿ ಮುಂಭಾಗ ರಸ್ತೆಯಲ್ಲೇ ಕುರಿ, ಮೇಕೆಗಳನ್ನು ತಂದು ರೈತರು ಶನಿವಾರ ಪ್ರತಿಭಟನೆ ನಡೆಸಿದರು   

ಮೈಸೂರು: ನಗರದಲ್ಲಿ ಶನಿವಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೈತರ ಆಕ್ರೋಶದ ಕಟ್ಟೆ ಹೊಡೆಯಿತು.

ಮೈಸೂರು– ಬೆಂಗಳೂರು, ಬೆಂಗಳೂರು–ನೀಲಗಿರಿ ಹಾಗೂ ಮೈಸೂರು–ಮಾನಂದವಾಡಿ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ಒಂದು ಗಂಟೆಗೂ ಹೆಚ್ಚು ಕಾಲ ತಡೆದರು. ಪರಿಸ್ಥಿತಿ ನಿಭಾಯಿಸಲು ಪೊಲೀಸರು 150ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಸ್ವರಾಜ್ ಇಂಡಿಯಾ, ಎಡಪಕ್ಷಗಳು,ಸಂವಿಧಾನ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಕೊಲಂಬಿಯಾ ಏಷಿಯಾ ಆಸ್ಪತ್ರೆ ಮುಂಭಾಗ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು ಒಂದು ಗಂಟೆಗಳ ಕಾಲ ತಡೆದರು.

ADVERTISEMENT

ರಿಂಗ್‌ರಸ್ತೆಯ ಜಂಕ್ಷನ್‌ನಲ್ಲಿ ಕುಳಿತ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಮಾತನಾಡಿದ ಎಲ್ಲ ನಾಯಕರೂ ಸರ್ಕಾರದ ಕೃಷಿ ನೀತಿಯನ್ನು ಖಂಡಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ‘ಕಳೆದ 3 ತಿಂಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 70ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಈ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲ’ ಎಂದು ಟೀಕಿಸಿದರು.

‘ನಿಜವಾದ ದೇಶದ್ರೋಹಿಗಳು ಬಿಜೆಪಿಯವರೇ ಹೊರತು ರೈತರಲ್ಲ. ನಮ್ಮ ಜತೆ ಇರುವ ಭಯೋತ್ಪಾದಕರು ಯಾರು ಎಂಬುದನ್ನು ಹಿಡಿದುಕೊಡಿ’ ಎಂದು ಸವಾಲೆಸೆದರು.

ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ‘ರೈತರು ಬದುಕುವುದೇ ದುಸ್ತರವಾದ ವಾತಾವರಣ ದೇಶದಲ್ಲಿದೆ. ಇಂತಹ ಹೊತ್ತಿನಲ್ಲಿ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತಂದು ಅವರ ಬದುಕನ್ನು ಇನ್ನಷ್ಟು ದುರ್ಬರಗೊಳಿಸಲಾಗುತ್ತಿದೆ’ ಎಂದು ಕಿಡಿಕಾರಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಮಾತನಾಡಿ, ‘ಕೇಂದ್ರ ಸರ್ಕಾರದ ವಿರುದ್ಧ ದನಿಯೆತ್ತಿ ಹೋರಾಡುತ್ತಿರುವ ರೈತರಿಗೆ ನಿಜಕ್ಕೂ ಸೆಲ್ಯೂಟ್ ಮಾಡಬೇಕು’ ಎಂದು ಶ್ಲಾಘಿಸಿದರು.

ಒಂದು ಗಂಟೆಯ ನಂತರ ಡಿಸಿಪಿ ಡಾ.ಎ.ಎನ್‌.ಪ್ರಕಾಶಗೌಡ ಸ್ಥಳಕ್ಕೆ ಬಂದು, ‘ರಸ್ತೆ ತಡೆಯಿಂದ ಜನರಿಗೆ ಅನನುಕೂಲವಾಗುತ್ತಿದೆ. ಜನರಿಗೆ ತೊಂದರೆಯಾಗದಂತೆ ಪ್ರತಿಭಟನೆ ಮಾಡಿ’ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ಪ್ರತಿಭಟನಕಾರರು ಮಧ್ಯಾಹ್ನ 3 ಗಂಟೆಯವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪಟ್ಟು ಹಿಡಿದರು. ನಂತರ, ಬಲವಂತವಾಗಿ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ಮುಖಂಡರಾದ ಉಮಾದೇವಿ, ಮರಂಕಯ್ಯ, ಪುನೀತ್, ಚಂದ್ರಶೇಖರ್ ಮೇಟಿ, ಶಬ್ಬೀರ್ ಮುಸ್ತಾಫ, ಸಂಧ್ಯಾ, ಆಸಿಯಾ ಹಾಗೂ ಇತರರು ಇದ್ದರು.

ಜಯಪುರ ಹೋಬಳಿಯಲ್ಲಿ ಮೈಸೂರು-ಮಾನಂದವಾಡಿ ರಾಜ್ಯ ಹೆದ್ದಾರಿಯಲ್ಲಿ ಅಡ್ಡಲಾಗಿ ಟ್ರಾಕ್ಟರ್ ನಿಲ್ಲಿಸಿ ರೈತರು ಕೆಲಕಾಲ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.