ಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಕಳೆದ 4 ವರ್ಷಗಳಿಂದ ಸಂದರ್ಶಕರನ್ನು ಆಕರ್ಷಿಸುತ್ತಿದ್ದ ಹೆಣ್ಣು ಒರಾಂಗೂಟಾನ್ ‘ಮಿನ್ನಿ’ (10 ವರ್ಷ 8 ತಿಂಗಳು) ಬುಧವಾರ ಅನಾರೋಗ್ಯದಿಂದ ಮೃತಪಟ್ಟಿತು.
‘ದೂಡ್ಡವಾನರ’ ಜಾತಿಗೆ ಸೇರಿದ ಈ ಪ್ರಾಣಿಯನ್ನು 2021ರ ಏ.2ರಂದು ‘ಪ್ರಾಣಿ ವಿನಿಮಯ ಕಾರ್ಯಕ್ರಮ’ದಡಿ ಮಲೇಷ್ಯಾ ಮೃಗಾಲಯದಿಂದ ಆಮದು ಮಾಡಿಕೊಳ್ಳಲಾಗಿತ್ತು. ಶ್ವಾಸಕೋಶ ರೋಗದ ಕಾರಣದಿಂದ ಆಗಾಗ ಉಸಿರಾಟದ ತೊಂದರೆಯಿಂದ ಬಳಲಿತ್ತು. ಇತ್ತೀಚೆಗೆ ಅದರ ಆರೋಗ್ಯ ತೀವ್ರವಾಗಿ ಕ್ಷೀಣಿಸಿತ್ತು.
ಮೃಗಾಲಯದ ತಜ್ಞ ಪಶುವೈದ್ಯರು ಗುರುವಾರ ಬೆಳಿಗ್ಗೆ 10ರಿಂದ ಪರೀಕ್ಷಾ ಕೊಠಡಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ‘ಮಿನ್ನಿ’ಯು ನ್ಯುಮೋನಿಯಾ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವುದನ್ನು ಪಶುವೈದ್ಯರು ದೃಢಪಡಿಸಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ರಂಗಸ್ವಾಮಿ ತಿಳಿಸಿದ್ದಾರೆ.
ಯುಕೆ ಹಾಗೂ ಮಲೇಷ್ಯಾದ ಪಶುವೈದ್ಯ ತಜ್ಞರ ಮಾರ್ಗದರ್ಶನ ಮತ್ತು ಬೆಂಬಲ ದೊಂದಿಗೆ ಮೃಗಾಲಯದ ಪಶುವೈದ್ಯರ ತಂಡ ನಡೆಸಿದ ನಿರಂತರ ಪ್ರಯತ್ನದ ನಡುವೆಯೂ ‘ಮಿನ್ನಿ’ಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅದರ ಆರೋಗ್ಯ ಸುಧಾರಣೆಗೆ ಸಾಧ್ಯವಿರುವ ಎಲ್ಲಾ ಬಗೆಯ ಚಿಕಿತ್ಸಾ ಶಿಷ್ಟಾಚಾರಗಳನ್ನೂ ಅನುಸರಿಸಲಾಗಿದೆ. ಆ ಪ್ರಾಣಿಯ ಅನಾರೋಗ್ಯದ ಮೂಲ ಕಾರಣಗಳನ್ನು ಅರಿಯುವ ಉದ್ದೇಶದಿಂದ ಹೆಚ್ಚಿನ ತನಿಖೆಗಾಗಿ ಅದರ ಜೈವಿಕ ಮಾದರಿಗಳನ್ನು ಸುಧಾರಿತ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಹಾಗೂ ದೃಢೀಕೃತ ರೋಗ ನಿರ್ಣಯದ ವರದಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
‘ಈ ದೃಢೀಕೃತ ರೋಗ ನಿರ್ಣಯ ಪರೀಕ್ಷಾ ವರದಿಗಳು ಅಥವಾ ಸಂಶೋಧನೆಗಳು ಒರಾಂಗೂಟಾನ್ ಪ್ರಾಣಿಗಳಿಗೆ ಸಂಭವಿಸ ಬಹುದಾದ ಉಸಿರಾಟದ ಕಾಯಿಲೆ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಲು ಸಹಕಾರಿಯಾಗಲಿದೆ. ಭವಿಷ್ಯದಲ್ಲಿ ವನ್ಯಜೀವಿಗಳ ಆರೋಗ್ಯ ನಿರ್ವಹಣೆಗೆ ಸಹಾಯಕವಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.