ADVERTISEMENT

ಮೈಸೂರು: ಪುಷ್ಪ ಕೃಷಿಯತ್ತ ರೈತರ ಒಲವು

3 ಸಾವಿರ ಹೆಕ್ಟೇರ್‌ನಲ್ಲಿ ಕೃಷಿ ಕಾರ್ಯ; ದಿನದ ಲೆಕ್ಕದಲ್ಲಿ ಆದಾಯ ಗಳಿಕೆ

ಆರ್.ಜಿತೇಂದ್ರ
Published 2 ಜುಲೈ 2025, 7:01 IST
Last Updated 2 ಜುಲೈ 2025, 7:01 IST
ಮೈಸೂರು ತಾಲ್ಲೂಕಿನ ಯಲಚಹಳ್ಳಿ ಬಳಿ ಹೊಲವೊಂದರಲ್ಲಿ ಬೆಳೆದ ‘ಸುಗಂಧ ರಾಜ’
ಮೈಸೂರು ತಾಲ್ಲೂಕಿನ ಯಲಚಹಳ್ಳಿ ಬಳಿ ಹೊಲವೊಂದರಲ್ಲಿ ಬೆಳೆದ ‘ಸುಗಂಧ ರಾಜ’   

ಮೈಸೂರು: ಜಿಲ್ಲೆಯಲ್ಲಿ ಪುಷ್ಪ ಕೃಷಿಯತ್ತ ರೈತರ ಚಿತ್ತ ಹರಿದಿದ್ದು, ಹೂ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹಿರಿದಾಗುತ್ತಿದೆ.

ಪ್ರಸ್ತುತ ಜಿಲ್ಲೆಯಾದ್ಯಂತ 3ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬಗೆಬಗೆಯ ಹೂವನ್ನು ಬೆಳೆಯಲಾಗುತ್ತಿದೆ. ಇದರಲ್ಲಿ ಚೆಂಡುಮಲ್ಲಿಗೆಯದ್ದು ಸಿಂಹಪಾಲು. ಸುಮಾರು 1,750 ಹೆಕ್ಟೇರ್‌ನಷ್ಟು ಜಮೀನಿನಲ್ಲಿ ಈ ಹೂವನ್ನು ರೈತರು ಬೆಳೆಯುತ್ತಿದ್ದಾರೆ. ನಂತರದಲ್ಲಿ ಸೇವಂತಿಗೆ, ಸುಗಂಧರಾಜ, ಗುಲಾಬಿ ಹಾಗೂ ಕಾಕಡ ಸ್ಥಾನ ಪಡೆದುಕೊಂಡಿವೆ.

ಮಲ್ಲಿಗೆಗೆ ಮೈಸೂರು ಹೆಸರಾಗಿದ್ದು, ಜಿಯೊ ಟ್ಯಾಗ್‌ ಕೂಡ ಪಡೆದಿದೆ. ಸುವಾಸನೆಯುಕ್ತ ದುಂಡು ಮಲ್ಲಿಗೆಗೆ ಬೇಡಿಕೆಯಂತೂ ಇದ್ದೇ ಇದೆ. ಪೂಜೆ, ಮುಡಿಯಲು ಹಾಗೂ ಸುಗಂಧ ದ್ರವ್ಯ ತಯಾರಿಕೆಗೂ ಇದನ್ನು ಬಳಸಲಾಗುತ್ತಿದೆ. ಆದಾಗ್ಯೂ ಬೇರೆ ಹೂವುಗಳಿಗೆ ಹೋಲಿಸಿದರೆ ಮಲ್ಲಿಗೆ ಬೆಳೆಯುವ ಪ್ರದೇಶ ಕಡಿಮೆಯೇ ಇದೆ.

ADVERTISEMENT

ನಿತ್ಯದ ಆದಾಯ: ಬೇರೆ ಕೃಷಿಗೆ ಹೋಲಿಸಿದರೆ ಹೂವಿನ ಕೃಷಿ ನಿತ್ಯ ಆದಾಯ ತಂದು ಕೊಡುವ ಕೆಲಸ. ಹೀಗಾಗಿ ಪ್ರತಿದಿನದ ಖರ್ಚು ದೂಗಿಸಲೆಂದೇ ಹೂವು ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಆದಾಯದ ಮೂಲವೂ ಆಗಿದೆ. 5 ಗುಂಟೆಯಿಂದ 20 ಗುಂಟೆ, ಒಂದು ಎಕರೆ ವಿಸ್ತೀರ್ಣದಲ್ಲಿ ಹೂವು ಬೆಳೆಯುವವರು ಇದ್ದಾರೆ.

ಚೆಂಡು ಹೂವು ಪ್ರತಿ ಕೆ.ಜಿ.ಗೆ ಸಾಮಾನ್ಯ ದಿನಗಳಲ್ಲಿ ₹25–30ರಂತೆ ಮಾರಾಟವಾದರೆ, ಹಬ್ಬದ ದಿನಗಳಲ್ಲಿ ₹60–80ರವರೆಗೂ ಬೆಲೆ ಇರುತ್ತದೆ. ಬೇರೆ ಹೂವುಗಳಿಗೆ ಹೋಲಿಸಿದರೆ ಇಳುವರಿ ಹೆಚ್ಚು. ಸೇವಂತಿಗೆ ಸಾಮಾನ್ಯವಾಗಿ ₹100–120ರಿಂದ ವಿಶೇಷ ಸಂದರ್ಭಗಳಲ್ಲಿ ₹200–250ರವರೆಗೂ ಬೆಲೆ ಏರಿಸಿಕೊಳ್ಳುತ್ತದೆ. ಸುಗಂಧರಾಜ ಸರಾಸರಿ ₹60–70 ಬೆಲೆ ಹೊಂದಿದ್ದು, ಹಬ್ಬದಂದು ₹150ರವರೆಗೂ ಬೆಲೆ ಇರುತ್ತದೆ.

ಹೂವುಗಳ ಪೈಕಿ ಕನಕಾಂಬರ ಅತಿ ಹೆಚ್ಚು ಬೆಲೆ ಹೊಂದಿದ್ದು, ಸಾಮಾನ್ಯ ದಿನಗಳಲ್ಲಿ ₹400–500 ಹಾಗೂ ಹಬ್ಬದ ದಿನಗಳಲ್ಲಿ ₹1,500–2,000ವರೆಗೂ ಮಾರಾಟವಾದ ದಾಖಲೆ ಇದೆ. ಅಲ್ಲಲ್ಲಿ ಹೂವಿನ ಮಾರುಕಟ್ಟೆಗಳಿದ್ದು, ರೈತರು ಬೆಳಿಗ್ಗೆಯೇ ಹೂವು ಕೊಯ್ಲು ಮಾಡಿ ಕೊಂಡೊಯ್ಯುತ್ತಾರೆ. ಕೆಲವೆಡೆ ವರ್ತಕರು–ದಲ್ಲಾಳಿಗಳೇ ಜಮೀನಿಗೆ ಬಂದು ಹೂವು ಖರೀದಿಸುತ್ತಾರೆ.

‘ಅರ್ಧ ಎಕರೆಯಲ್ಲಿ ಕನಕಾಂಬರ ಸಸಿ ನೆಟ್ಟಿದ್ದು, ಗೊಬ್ಬರ ಸೇರಿ ₹20ಸಾವಿರ ಖರ್ಚು ಆಗಿದೆ. ಮೂರು ತಿಂಗಳ ಬಳಿಕ ಹೂವು ಸಿಗಲು ಆರಂಭಿಸಿದ್ದು, ಎರಡು ವರ್ಷದವರೆಗೂ ನಿರಂತರ ಕೊಯ್ಲು ಮಾಡಬಹುದು. ಸದ್ಯ ವಾರಕ್ಕೆ 2–3 ದಿನ ಹೂವು ಕೊಯ್ಯುತ್ತೇವೆ. ಖರ್ಚೆಲ್ಲ ಕಳೆದು ವಾರಕ್ಕೆ ₹2–3 ಸಾವಿರ ಸಿಗುತ್ತದೆ. ದಿನದ ಲೆಕ್ಕದಲ್ಲಿ ಆದಾಯ ಸಿಗುವುದರಿಂದ ಜೀವನ ನಿರ್ವಹಣೆಗೂ ಅನುಕೂಲವಾಗಿದೆ’ ಎನ್ನುತ್ತಾರೆ ಮೈಸೂರು ತಾಲ್ಲೂಕಿನ ಕೊಮ್ಮೇಗೌಡನಕೊಪ್ಪಲಿನ ರೈತ ನಾಗೇಶ್‌.

‘ಹೂವನ್ನು ವರ್ಷವಿಡೀ ಕೊಯ್ಲು ಮಾಡಬಹುದಾಗಿದ್ದು, ಮಾರುಕಟ್ಟೆಯೂ ಉತ್ತಮವಾಗಿದೆ. ಪೂಜೆ–ಅಲಂಕಾರಕ್ಕೆ ಮಾತ್ರವಲ್ಲದೇ ಸುಗಂಧ ದ್ರವ್ಯ, ಔಷಧಿ ಮೊದಲಾದ ಕಾರ್ಯಗಳಿಗೂ ಹೂವನ್ನು ಬಳಸಲಾಗುತ್ತಿದೆ. ಪ್ರತಿದಿನವೂ ಆದಾಯ ಗಳಿಸುವ ಅವಕಾಶ ಇರುವ ಕಾರಣ ರೈತರು ಪುಷ್ಪ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಸಣ್ಣ ಪ್ರಮಾಣದಲ್ಲೇ ಕೃಷಿ ಮಾಡಿ ಗಳಿಕೆ ಮಾಡಬಹುದಾಗಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ ಅಂಗಡಿ.

ವಾಣಿಜ್ಯ ಕೃಷಿ

ಉತ್ತಮ ಬಂಡವಾಳದೊಂದಿಗೆ ಅಲಂಕಾರಿಕ ಹೂವುಗಳನ್ನು ಬೆಳೆಯುವ ಮೂಲಕವೂ ಕೆಲವು ರೈತರು ಯಶಸ್ಸು ಕಾಣುತ್ತಿದ್ದಾರೆ. ಜಿಲ್ಲೆಯ ಅಲ್ಲಲ್ಲಿ ಪಾಲಿಹೌಸ್‌ಗಳಲ್ಲಿ  ಹೂವಿನ ಕೃಷಿಯ ಪ್ರಯೋಗಗಳು ನಡೆದಿವೆ. ಬಗೆಬಗೆಯ ಗುಲಾಬಿ ಜರ್ಬೆರಾ ಲಿಸಿಯಾಂತಸ್ ಕಾರ್ನಿಷಿಯನ್‌ ಮೊದಲಾದ ಅಲಂಕಾರಿಕ ಹೂವುಗಳನ್ನು ಬೆಳೆದು ಅವುಗಳನ್ನು ಹೊರ ರಾಜ್ಯ–ದೇಶಗಳಿಗೆ ಕಳುಹಿಸಲಾಗುತ್ತಿದೆ.

ವರ್ಷವಿಡೀ ಹೂವಿಗೆ ಉತ್ತಮ ಮಾರುಕಟ್ಟೆ ಇದ್ದು ದಿನದ ಲೆಕ್ಕದಲ್ಲಿ ಆದಾಯ ಸಿಗುವುದರಿಂದ ಹೆಚ್ಚು ರೈತರು ಪುಷ್ಪ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ.
-ಮಂಜುನಾಥ ಅಂಗಡಿ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.