ADVERTISEMENT

ಮಾಗಿ ಉತ್ಸವ | ಮೈಸೂರು ಅರಮನೆಯಲ್ಲಿ ಡಿ.21ರಿಂದ ಫಲಪುಷ್ಪ ಪ್ರದರ್ಶನ

ಡಿ.21ರಿಂದ 31ರವರಗೆ ‘ಫಲಪುಷ್ಪ ಪ್ರದರ್ಶನ’ l ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 15:30 IST
Last Updated 16 ಡಿಸೆಂಬರ್ 2024, 15:30 IST
ಅರಮನೆಯ ವರಾಹ ಪ್ರವೇಶದ್ವಾರದ ಬಳಿ ಪುಷ್ಪ ಪ್ರದರ್ಶನ (ಸಂಗ್ರಹ ಚಿತ್ರ)
ಅರಮನೆಯ ವರಾಹ ಪ್ರವೇಶದ್ವಾರದ ಬಳಿ ಪುಷ್ಪ ಪ್ರದರ್ಶನ (ಸಂಗ್ರಹ ಚಿತ್ರ)   

ಮೈಸೂರು: ಅರಮನೆ ಅಂಗಳದಲ್ಲಿ ‘ಅರಮನೆ ಮಂಡಳಿ’ಯು ಇದೇ 21ರಿಂದ ‘ಮಾಗಿ ಉತ್ಸವ’ ಪ್ರಯುಕ್ತ ‘ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ಜೊತೆಯಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ.

ಕ್ರಿಸ್‌ಮಸ್‌ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರು ನಗರಕ್ಕೆ ಲಗ್ಗೆ ಇಡಲಿದ್ದು, ಅವರಿಗಾಗಿ 10 ದಿನಗಳ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ಡಿ.31ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರವಾಸಿಗರು, ನಾಗರಿಕರು ಹೂಗಳ ಲೋಕವನ್ನು ಕಣ್ತುಂಬಿಕೊಳ್ಳಬಹುದು.

ಡಿ.21ರ ಸಂಜೆ 5ಕ್ಕೆ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಇದೇ ವೇಳೆ ವರಾಹ ಉದ್ಯಾನದಲ್ಲಿ ಕುಸ್ತಿ ಪಂದ್ಯಾವಳಿ ಹಾಗೂ ಬೊಂಬೆ ಮನೆ ಉದ್ಘಾಟನೆಯೂ ನೆರವೇರಲಿದೆ. ಡಿ.21ರಿಂದ 25ರವರೆಗೆ ಸಂಗೀತ ಕಾರ್ಯಕ್ರಮ ಇರಲಿದ್ದು, ಚಲನಚಿತ್ರ ಗಾಯಕ ವಿಜಯಪ್ರಕಾಶ್‌ ಈ ಬಾರಿಯ ಆಕರ್ಷಣೆ.

ADVERTISEMENT

ಪ್ರವೇಶ ದರ: ವಯಸ್ಕರು ಹಾಗೂ ವಿದೇಶಿಯರಿಗೆ ₹ 30 ಹಾಗೂ 10ರಿಂದ 18 ವರ್ಷದೊಳಗಿನ ಮಕ್ಕಳಿಗೆ ₹ 20 ಪ್ರವೇಶ ದರವಿದ್ದು, 10 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

‘10 ವರ್ಷದಿಂದ ಪ್ರತಿ ವರ್ಷಾಂತ್ಯದಲ್ಲಿ ಮಾಗಿ ಉತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. 25ಸಾವಿರಕ್ಕೂ ಹೆಚ್ಚಿನ ಅಲಂಕಾರಿಕ ಹೂಕುಂಡಗಳು, ಬೋನ್ಸಾಯ್‌ ಗಿಡಗಳು, 35 ಜಾತಿಯ ಹೂ ಗಿಡಗಳು ಪ್ರದರ್ಶನದಲ್ಲಿದ್ದು, 6 ಲಕ್ಷಕ್ಕೂ ಹೆಚ್ಚು ಹೂಗಳಿಂದ ಚಿತ್ರ ಹಾಗೂ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಅರಮನೆ ಮಂಡಳಿ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

ನವದೆಹಲಿಯ ಅಕ್ಷರಧಾಮ, ಮುಮ್ಮಡಿ ಕೃಷ್ಣರಾಜ ಒಡೆಯರ್, ನಂಜನಗೂಡಿನ ನಂಜುಂಡೇಶ್ವರ, ಹದ್ದು, ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳು, ಮರಿಯಾನೆ, ಗಂಡಭೇರುಂಡ, ಆಮೆ, ವನ್ಯಜೀವಿಗಳು, ಕಾರ್ಗಿಲ್‌ ಯುದ್ಧ ಸ್ಮಾರಕ, ನವಿಲು, ಸಂವಿಧಾನ ಪೀಠಿಕೆ ಮಾದರಿ ಚಿತ್ರಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ.  

ಸಂಗೀತದ ಇಂಪು: ಅಂಗಳದಲ್ಲಿ ಫಲಪುಷ್ಪಗಳನ್ನು ವೀಕ್ಷಿಸುತ್ತಲೇ ಜಯಚಾಮರಾಜ ಒಡೆಯರ್‌ ಅವರ ಕರ್ನಾಟಕ ಸಂಗೀತ ಕೃತಿಗಳನ್ನು ಆಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಉದ್ಘಾಟನಾ ದಿನದಂದು 500 ಜನರಿಗೆ ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಮೊದಲಾದ ಸಸಿಗಳನ್ನು ಸಾಂಕೇತಿಕವಾಗಿ ನೀಡಲಾಗುತ್ತಿದೆ. ಟೋಪಿ, ಚಿಟ್ಟೆ, ಹದ್ದು, ಮಾವು ಸೆಲ್ಫಿ ಪಾಯಿಂಟ್‌ಗಳೂ ಚಿತ್ರಪ್ರಿಯರನ್ನು ಕಾಯುತ್ತಿವೆ.

ದೀಪಾಲಂಕಾರ, ಶಬ್ಧರಹಿತ ಬಾಣಬಿರುಸು

22ರಿಂದ ನಿತ್ಯ 7ರಿಂದ 9ರವರೆಗೆ ಅರಮನೆ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸಲಿದೆ. 22ರಿಂದ 25ರವರೆಗೆ ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಡಿ.31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್‌ ಬ್ಯಾಂಡ್‌ ವಾದ್ಯ ಸಂಗೀತ ಇರಲಿದೆ. ಅಂದು ಮಧ್ಯರಾತ್ರಿ 12ರಿಂದ 12.15ರವರೆಗೆ ಹಸಿರು ಪಟಾಕಿಯ ಬಾಣ– ಬಿರುಸುಗಳಿಂದ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. 

ಸಾಂಸ್ಕೃತಿಕ ಕಾರ್ಯಕ್ರಮ 

ಡಿ.21ರಂದು ಸಂಜೆ 5.30ಕ್ಕೆ ಸಿ.ಆರ್.ರಾಘವೇಂದ್ರ ರಾವ್‌ ಅವರಿಂದ ವಾದ್ಯಸಂಗೀತ ಸಂಜೆ 7ಕ್ಕೆ ಎ.ಆರ್.ಕಲಾ ಅವರಿಂದ ನಾಡಗೀತೆ ಸಂಸ್ಥಾನ ಗೀತೆ ಗಾಯನ 7.30ರಿಂದ ಮಧುಬಾಲಕೃಷ್ಣನ್ ಅವರಿಂದ ಸಂಗೀತ ಸಂಜೆ ಡಿ.22ರಂದು ಸಂಜೆ 6ಕ್ಕೆ ರಘು ಮತ್ತು ತಂಡದಿಂದ ಗೀತ ಗಾಯನ 6.45ಕ್ಕೆ ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳಿಂದ ‘ನೃತ್ಯ ರೂಪಕ’ 7.30ರಿಂದ ವಿಜಯಪ್ರಕಾಶ್‌ ಅವರಿಂದ ‘ಸಂಗೀತ ರಸಸಂಜೆ’ ಡಿ.23ರಂದು ಸಂಜೆ 6ಕ್ಕೆ ಎಂ.ಡಿ.ಆಯುಷ್‌ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ 7ರಿಂದ ಆನೂರು ಅನಂತಕೃಷ್ಣಶರ್ಮ ಅವರಿಂದ ‘ಲಯ– ಲಾವಣ್ಯ’ ಡಿ.24ರಂದು ಸಂಜೆ 6ಕ್ಕೆ ಷಡ್ಜ್‌ ಗೋಡ್ಖಿಂಡಿ– ಅಪೂರ್ವ ಕೃಷ್ಣ ಅವರಿಂದ ಕೊಳಲು– ವಯಲಿನ್ ಫ್ಯೂಷನ್ ಸಂಗೀತ 7ಕ್ಕೆ ಹಿಂದೂಸ್ಥಾನಿ ಸಂಗೀತ– ಸಿದ್ಧಾರ್ಥ ಬೆಲ್ಮಣ್ಣು ಗಂಜೀಫ ರಘುಪತಿ ಭಟ್‌ ಅವರಿಂದ ‘ದಾಸವಾಣಿ ಚಿತ್ರಣ’ 8ಕ್ಕೆ ಚಂಕಪ ಅಕಾಡೆಮಿ ಅವರಿಂದ ನೃತ್ಯರೂಪಕ ಡಿ.25ರಂದು ಸಂಜೆ 5.45ರಿಂದ ನಾಹರ್ ಗುರುದತ್ತ ಅವರಿಂದ ಶಾಸ್ತ್ರೀಯ ಸಂಗೀತ. ಕೇಶವಚಂದ್ರ ಅವರಿಂದ ದ್ವಂದ್ವ ವೇಣುವಾದನ. ಗಾಯಕರಾದ ದರ್ಶನ್‌ ನಾರಾಯಣ್ ಐಶ್ವರ್ಯ ರಂಗರಾಜನ್ ಸುನಿಲ್‌ ಗುಜಗೊಂಡ್‌ ವಸುಶ್ರೀ ಹಳೆಮನೆ ಜ್ಞಾನಗುರುರಾಜ್ ಅವರಿಂದ ‘ಸಂಗೀತ ಯಾನ’ ಡಿ.31ರಂದು ರಾತ್ರಿ 11ಕ್ಕೆ ಪೊಲೀಸ್‌ ಬ್ಯಾಂಡ್‌ ವಾದ್ಯ ಸಂಗೀತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.