ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಭಾನುವಾರ ನಡೆದ ವೈದ್ಯರ ದಿನಾಚರಣೆಯಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಸಾಧಕರಿಗೆ ‘ವೈದ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು
– ಪ್ರಜಾವಾಣಿ ಚಿತ್ರ
ಮೈಸೂರು: ‘ರೋಗಿಗಳಿಗೆ ಸೇವೆ ನೀಡುವ ಒತ್ತಡ, ಭರದಲ್ಲಿ ವೈದ್ಯರು ವೈಯಕ್ತಿಕ ಆರೋಗ್ಯವನ್ನು ನಿರ್ಲಕ್ಷಿಸಬಾರದು’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ತಿಳಿಸಿದರು.
ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ‘ವೈದ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಂದಿನ ದಿನಗಳಲ್ಲಿ ವೈದ್ಯರಿಗೆ ಸಾಕಷ್ಟು ಸವಾಲುಗಳಿವೆ. ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿರುತ್ತದೆ. ಆದರೂ ಅಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಯಾವುದೇ ವೈದ್ಯ ರೋಗಿಯನ್ನು ಉಳಿಸಲೆಂದೇ ಶ್ರಮಿಸುತ್ತಾನೆ. ಕೆಟ್ಟದಾಗಲಿ, ರೋಗಿ ಸಾಯಲಿ ಎಂದು ಯಾರೂ ಬಯಸುವುದಿಲ್ಲ. ನಮ್ಮ ಕೈಮೀರಿ, ಕೆಲವೊಮ್ಮೆ ರೋಗಿಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯುತ್ತವೆ. ಅದು ತಪ್ಪಬೇಕು. ಸರ್ಕಾರ ಕೆಲವು ಕಾನೂನು ಜಾರಿಗೊಳಿಸಿದೆ. ಆದರೂ ವೈದ್ಯರಿಗೆ ಹೆಚ್ಚಿನ ರಕ್ಷಣೆ ಕೊಡಬೇಕ’ ಎಂದರು.
ಸಮಾಜ ನೆನಪಿಟ್ಟುಕೊಳ್ಳುತ್ತದೆ: ‘ವೈದ್ಯರಾಗಬೇಕು ಎಂದುಕೊಂಡವರು 30 ವರ್ಷ ವಯಸ್ಸಿನವರೆಗೂ ಕಲಿಯಲೇಬೇಕಾಗುತ್ತದೆ. ನಂತರ ಜನ ಸೇವೆ ಮಾಡುತ್ತೇವೆ. ಇದರಿಂದಾಗಿ, ಕುಟುಂಬದವರಿಗೆ ಹೆಚ್ಚು ಸಮಯ ಕೊಡಲಾಗುವುದಿಲ್ಲ. ಆದ್ದರಿಂದಲೇ ಜನರಿಗೆ ನಮ್ಮ ಮೇಲೆ ಬಹಳಷ್ಟು ನಂಬಿಕೆ, ಗೌರವ ಇದೆ. ದೇವರಂತೆ ಕಾಣುತ್ತಾರೆ’ ಎಂದು ಹೇಳಿದರು. ‘ಇದೇ ವೇಳೆ, ವೈದ್ಯರೂ ಆರೋಗ್ಯ ರಕ್ಷಣೆಗೆ ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.
‘ಪ್ರಶಸ್ತಿ ನಮ್ಮನ್ನು ಹುಡುಕಿಕೊಂಡು ಬರಬೇಕು. ಎಲೆಮರೆ ಕಾಯಿಯಂತೆ ಕೆಲಸ ಮಾಡುವವರನ್ನು ಪತ್ತೆ ಹಚ್ಚಿ ಪುರಸ್ಕರಿಸುವುದು ಒಳ್ಳೆಯ ಕೆಲಸ’ ಎಂದರು.
ಅಸಾಂಕ್ರಾಮಿಕ ರೋಗ ಹೆಚ್ಚಳ: ‘ಇತ್ತೀಚಿನ ವರ್ಷಗಳಲ್ಲಿ ಶೇ 60ರಿಂದ 70 ಸಾವು ಹೃದಯಾಘಾತ, ಕ್ಯಾನ್ಸರ್ ಮೊದಲಾದ ಅಸಾಂಕ್ರಾಮಿಕ ರೋಗಗಳಿಂದಲೇ ಸಂಭವಿಸುತ್ತಿವೆ. ಇವರಲ್ಲಿ ಶೇ 25ರಷ್ಟು ಮಂದಿ ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಜಾಸ್ತಿ ಆಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘30, 40 ವರ್ಷ ವಯಸ್ಸು ದಾಟಿದವರಲ್ಲಿ ಶೇ 25ರಿಂದ 30ರಷ್ಟು ಮಂದಿಗೆ ರಕ್ತದೊತ್ತಡ ಜಾಸ್ತಿ ಇರುತ್ತದೆ. ಹೀಗಾಗಿ, ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು. ಮಧುಮೇಹ, ಕೊಬ್ಬು ಜಾಸ್ತಿ ಇದ್ದರೆ ತಿಳಿದುಕೊಂಡು ಚಿಕಿತ್ಸೆ ಪಡೆಯಬೇಕು. ವಾಯುಮಾಲಿನ್ಯ, ದೂಮಪಾನ, ಮದ್ಯಪಾನದಂತಹ ದುಶ್ಚಟಗಳ ಕಾರಣದಿಂದಾಗಿ ಅನಾರೋಗ್ಯ ಜಾಸ್ತಿ ಕಾಡುತ್ತಿದೆ. ಆರೋಗ್ಯಕರ ಜೀವನಶೈಲಿಯಿಂದ ಹಲವು ರೋಗಗಳಿಂದ ದೂರವಿರಬಹುದು’ ಎಂದು ತಿಳಿಸಿದರು.
ಡಾ.ಜಯಪ್ರಕಾಶ್ ನಾರಾಯಣ್, ಡಾ.ರಾಜಶೇಖರ್, ಡಾ.ರಾಜೇಶ್ವರಿ, ಡಾ.ಎಸ್.ಕುಮಾರರಾಜ್ ಅರಸ್, ಡಾ.ಕವಿತಾ ವಾಡಿ ಹಾಗೂ ಡಾ.ಪಿ.ಶಾಸ್ತಾರ ಅವರಿಗೆ ‘ವೈದ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ನಗರದ ಜಯದೇವ ಹೃದ್ರೋಗ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಕೆ.ಎಸ್. ಸದಾನಂದ, ಗರ್ಭಧಾರಣಾ ತಜ್ಞ ಡಾ.ಶರತ್‌ಕುಮಾರ್, ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಉಪಾಧ್ಯಕ್ಷ ಎಚ್.ಎಂ.ಟಿ. ಲಿಂಗರಾಜೇಅರಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.