ಮೈಸೂರು: ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಕಾನೂನು ತೊಡಕು ಪರಿಹರಿಸುವಲ್ಲಿ ‘ಉಚಿತ ಕಾನೂನು ನೆರವು ಕೇಂದ್ರ’ ಸಹಕಾರಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಹೇಳಿದರು.
ನಗರದ ಜಿಲ್ಲಾ ಸೈನಿಕ್ ಭವನದಲ್ಲಿ ಭಾನುವಾರ ರಾಷ್ಟ್ರೀಯ ಕಾನೂನು ಸೇವಾ ಸಮಿತಿಯ ‘ವೀರ್ ಪರಿವಾರ್ ಸಹಾಯತ’ ಯೋಜನೆ-2025ರ ಅಡಿಯಲ್ಲಿ ಕಾನೂನು ಸೇವಾ ಸಮಿತಿಯ ‘ಉಚಿತ ಕಾನೂನು ನೆರವು ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾನೂನು ಸೇವೆ ಮೂಲಕ ಬೆಂಬಲ ಒದಗಿಸುವುದು ಕಾನೂನು ನೆರವು ಕೇಂದ್ರದ ಮುಖ್ಯ ಉದ್ದೇಶ. ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಡುವ ಸೈನಿಕರ ಬದುಕಿನಲ್ಲಿ ಯಾವುದೇ ಕಾನೂನು ತೊಡಕು ಉಂಟಾದಲ್ಲಿ ಈ ಕೇಂದ್ರವು ಸಹಕಾರಿಯಾಗಲಿದೆ’ ಎಂದರು.
‘ರಾಜ್ಯದಲ್ಲಿನ 11ನೇ ಕಾನೂನು ನೆರವು ಕೇಂದ್ರ ಇದಾಗಿದೆ. ಸೈನಿಕರ ಕುಟುಂಬಗಳಿಗೆ ಒಂದು ಪ್ರಮುಖ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, ಆರ್ಥಿಕ ಹೊರೆಯಿಲ್ಲದೆ ಕಾನೂನು ಮಾರ್ಗದರ್ಶನ ನೀಡುತ್ತದೆ. ಸೈನಿಕರು, ಮಾಜಿ ಸೈನಿಕರು, ಕುಟುಂಬಸ್ಥರು, ಮಾರ್ಷಲ್‌ಗಳು ಕಾನೂನು ಸೇವೆಗಳನ್ನು ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.
ಜಿಲ್ಲಾ ನ್ಯಾಯಾಧೀಶ ಎಚ್.ಶಶಿಧರ್ ಶೆಟ್ಟಿ ಮಾತನಾಡಿ, ‘ಸೈನಿಕರಿಗೆ ಸಂಬಂಧಪಟ್ಟ ಪ್ರಕರಣಗಳು ಕೋರ್ಟ್‌ನಲ್ಲಿದ್ದರೆ ಲೋಕ ಅದಾಲತ್‌ನಲ್ಲಿ ಯಾವುದೇ ಖರ್ಚಿಲ್ಲದೆ ಶೀಘ್ರವಾಗಿ ಇತ್ಯರ್ಥಗೊಳಿಸಿ, ಬಗೆಹರಿಸಲಾಗುವುದು. ಸಂಬಂಧಿಕರ ಕೇಸ್‌ಗಳಿದ್ದರೂ ಸಂಪರ್ಕಿಸಬಹುದು. ಈ ಉಚಿತ ಕಾನೂನು ಸೇವಾ ಕೇಂದ್ರದ ಸದುಪಯೋಗ ಎಲ್ಲರು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಉಷಾರಾಣಿ, ಉಚಿತ ಕಾನೂನು ನೆರವು ಕೇಂದ್ರದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ಎಂ.ಎಸ್.ಲೋಲಾಕ್ಷ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ.ಅಮರನಾಥ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕ ಡಾ.ಜೆ.ಆರ್.ಬಾಲಸುಬ್ರಹ್ಮಣ್ಯಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.