ADVERTISEMENT

ಸರ್ಕಾರ ಬಾವುಟದಲ್ಲೂ ಕಮಿಷನ್ ಪಡೆಯಲು ಮುಂದಾಗಿದೆ: ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ

ಮೈಸೂರಿನಲ್ಲಿ ಧ್ವಜ ಸತ್ಯಾಗ್ರಹ, ಪಾದಯಾತ್ರೆ 

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 7:49 IST
Last Updated 31 ಜುಲೈ 2022, 7:49 IST
ಸಿಂಥೆಟಿಕ್ ರಾಷ್ಟ್ರಧ್ವಜ ಬಳಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿರುವುದನ್ನು ಖಂಡಿಸಿ ಭಾನುವಾರ ನಾಗರಿಕ ಸಮಿತಿಯು ಮೈಸೂರಿನ ಗಾಂಧಿಚೌಕದಲ್ಲಿ ಧ್ವಜ ಸತ್ಯಾಗ್ರಹ ನಡೆಸಿತು
ಸಿಂಥೆಟಿಕ್ ರಾಷ್ಟ್ರಧ್ವಜ ಬಳಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿರುವುದನ್ನು ಖಂಡಿಸಿ ಭಾನುವಾರ ನಾಗರಿಕ ಸಮಿತಿಯು ಮೈಸೂರಿನ ಗಾಂಧಿಚೌಕದಲ್ಲಿ ಧ್ವಜ ಸತ್ಯಾಗ್ರಹ ನಡೆಸಿತು   

ಮೈಸೂರು: ‘ದೇಶವು ಗಾಂಧಿ ಭಾರತವಾಗಿ ಉಳಿದಿಲ್ಲ. ವ್ಯಾಪಾರಿ ಧೋರಣೆಯ ಸರ್ಕಾರವು ಆಳುತ್ತಿದೆ. ಬಾವುಟದಲ್ಲೂ ಕಮಿಷನ್ ಪಡೆಯಲು ಸರ್ಕಾರ ಮುಂದಾಗಿರುವುದು ನಾಚಿಕೆಗೇಡು’ಎಂದು ಸ್ವಾತಂತ್ರ್ಯ ಹೋರಾಟಗಾರ ವೈ.ಸಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಂಥೆಟಿಕ್ ರಾಷ್ಟ್ರಧ್ವಜ ಬಳಕೆಗೆ ಕೇಂದ್ರ ಸರ್ಕಾರವು ಅನುಮತಿ ನೀಡಿರುವುದನ್ನು ಖಂಡಿಸಿ ‘ನಾಗರಿಕ ಸಮಿತಿ’ಆರಂಭಿಸಿರುವ ಧ್ವಜ ಸತ್ಯಾಗ್ರಹದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.

‘ಖಾದಿ ರಾಷ್ಟ್ರಧ್ವಜ ಸ್ವಾಭಿಮಾನದ ಸಂಕೇತವಾಗಿತ್ತು. ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದು ವಿದೇಶದಲ್ಲಿ ತಯಾರಾದ ಬಾವುಟಗಳು ಹಾರಲು ಅವಕಾಶ ಮಾಡಿಕೊಟ್ಟಿದೆ. ಗಾಂಧಿ ಅವರಿಗೆ ಮಾಡಿದ ಅವಮಾನವಿದು’ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಖಾದಿ ಹೊರತುಪಡಿಸಿ ಬೇರೆ ಯಾವುದೇ ಬಟ್ಟೆಯಿಂದ ತಯಾರಿಸಿದ ಧ್ವಜವನ್ನು ದೇಶಪ್ರೇಮಿಗಳು ಬಹಿಷ್ಕರಿಸಬೇಕು’ಎಂದರು.

ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಖಾದಿ ನೂಲುವ ಕೇಂದ್ರಗಳು ಶಾಶ್ವತವಾಗಿ ಮುಚ್ಚಲು ಸರ್ಕಾರ ಕೈಗೊಂಡ ಕ್ರಮವಿದು. ಗ್ರಾಮೀಣ ಮಹಿಳೆಯರು, ಶ್ರಮಿಕರು ಕೆಲಸಕ್ಕಾಗಿ ಅಲೆಯಬೇಕಿದೆ. ದೇಶದ ರಾಜಕಾರಣ, ಆರ್ಥಿಕತೆಯು ವಿದೇಶದತ್ತ ಸಾಗಿದೆ’ಎಂದರು.

‘ಸಾಮಾನ್ಯರನ್ನು ಕೊಂದು ಕೆಲವೇ ಮಂದಿಯನ್ನು ವಿಶ್ವದ ಶ್ರೀಮಂತ ಬಂಡವಾಳಶಾಹಿಗಳನ್ನು ಮಾಡುವುದರಲ್ಲಿ ರಾಜಕಾರಣಿಗಳು ಸಂತೋಷ ಕಾಣುತ್ತಿದ್ದಾರೆ’ಎಂದು ವಿಷಾದ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಧ್ವಜ ಸತ್ಯಾಗ್ರಹ, ಪಾದಯಾತ್ರೆ ನಡೆಯಿತು. ಗಾಂಧಿಚೌಕದಿಂದ ಆರಂಭವಾದ ಪಾದಯಾತ್ರೆಯಲ್ಲಿ ಕಲಾವಿದರು, ರಂಗಕರ್ಮಿಗಳು ಹೆಜ್ಜೆಹಾಕಿದರು. ಚಿಕ್ಕಗಡಿಯಾರ, ಡಿ.ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ಮೂಲಕ ಸಾಗಿ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶಗೊಂಡರು.

ನಾಗರಿಕ ಸಮಿತಿ ಸಂಚಾಲಕ ಕಾಳಚನ್ನೇಗೌಡ, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ನಟ ಚಂದನ್ ಆಚಾರ್, ಜಿ.ಪಿ.ಬಸವರಾಜ್, ಲೀಲಾ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.