ADVERTISEMENT

ಟನ್ ಕಬ್ಬಿಗೆ ₹ 3,500 ಎಫ್‌ಆರ್‌ಪಿ: 27ರಂದು ರಸ್ತೆ ತಡೆ -ಶಾಂತಕುಮಾರ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 8:31 IST
Last Updated 23 ಅಕ್ಟೋಬರ್ 2022, 8:31 IST
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.   

ಮೈಸೂರು: ‘ಟನ್‌ ಕಬ್ಬಿಗೆ ₹ 3,500 ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ) ನಿಗದಿಪಡಿಸುವಂತೆ ಆಗ್ರಹಿಸಿ ಅ.27ರಂದು ರಾಜ್ಯದಾದ್ಯಂತ ರಸ್ತೆ ತಡೆ ಚಳವಳಿ ನಡೆಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

‘ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಏರಿಕೆಯಾಗಿದೆ. ಕಟಾವು ಕೂಲಿಯೂ ಜಾಸ್ತಿಯಾಗಿದೆ. ಹೀಗಿರುವಾಗ, ಪ್ರಸಕ್ತ ಸಾಲಿನಲ್ಲಿ ಕೇವಲ ₹ 150 ಏರಿಸಿ, ₹ 3,050 ಎಫ್‌ಆರ್‌‍ಪಿ ನಿಗದಿಪಡಿಸಿದೆ. ಇದು ಬೆಳೆಗಾರರಿಗೆ ಮಾಡಿದ ಅನ್ಯಾಯವಾಗಿದೆ’ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸರ್ಕಾರದ ಧೋರಣೆ ಖಂಡಿಸಿ ಅ.27ರಂದು ರಾಜ್ಯದಾದ್ಯಂತ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ರಸ್ತೆ ತಡೆ ಚಳವಳಿ, 31ರಂದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರಿಸಲಾಗುವುದು. ಸರ್ಕಾರವು ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಖಂಡನೀಯ’ ಎಂದರು.

ADVERTISEMENT

ರೈತರಿಗೆ ದ್ರೋಹ ಬಗೆದಿದೆ:‘ರಾಜ್ಯ ಸರ್ಕಾರವು ಹೆಚ್ಚುವರಿ ಎಫ್‌ಆರ್‌ಪಿ ನಿಗದಿಪಡಿಸಲು ಸಚಿವರು ನಾಲ್ಕು ಬಾರಿ ಸಭೆಗಳನ್ನು ಕರೆದು ಯಾವುದೇ ತೀರ್ಮಾನ ಕೈಗೊಳ್ಳದೆ ಮುಂದೂಡಿರುವುದು ಕಬ್ಬು ಬೆಳೆದ ರೈತರಿಗೆ ಬಗೆದ ದ್ರೋಹವಾಗಿದೆ. ಬೆಳೆಗಾರರು 4 ತಿಂಗಳಿಂದಲೂ ಹೋರಾಡುತ್ತಿದ್ದರೂ ಯಾವುದೇ ಶಾಸಕರು, ಸಂಸದರು, ಸಚಿವರು ಈ ಬಗ್ಗೆ ಮಾತನಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘30 ಲಕ್ಷ ಕಬ್ಬು ಬೆಳೆಗಾರರ ಹಾಗೂ ₹40ಸಾವಿರ ಕೋಟಿ ವಹಿವಾಟು ನಡೆಸುವ ಈ ಉದ್ಯಮ ಸರ್ಕಾರಕ್ಕೆ ಲಾಭ ತರುತ್ತಿಲ್ಲವೇ? ₹ 5ಸಾವಿರ ಕೋಟಿ ವ್ಯವಹಾರ ನಡೆಸುವ ಅಡಿಕೆ ಬೆಳೆಗಾರರ ಬಗ್ಗೆ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸುವ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಂಸದರಿಗೆ ಕಬ್ಬು ಬೆಳೆಗಾರರ ಗೋಳಾಟ ಕಾಣುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಪಂಜಾಬ್‌ನಲ್ಲಿ ₹ 3,800, ಉತ್ತರ ಪ್ರದೇಶದಲ್ಲಿ ₹ 3,500, ಗುಜರಾತ್‌ನಲ್ಲಿ ₹ 4,400 ದರ ನಿಗದಿಪಡಿಸಿದ್ದಾರೆ. ಈ ವರದಿಯನ್ನು ಸರ್ಕಾರವೂ ತರಿಸಿಕೊಂಡಿದೆ. ಇದನ್ನು ಗಮನಿಸಿ ₹ 3,500 ಎಫ್‌ಆರ್‌ಪಿ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಕಬ್ಬಿನ ಕಟಾವು, ಸಾಗಣೆ ವೆಚ್ಚದಲ್ಲಿ ಕಾರ್ಖಾನೆಗಳು ರೈತರನ್ನು ಸುಲಿಗೆ ಮಾಡುತ್ತಿವೆ. ಕಾನೂನುಬಾಹಿರವಾಗಿ ಹೆಚ್ಚುವರಿ ಹಣ ಕಡಿತಗೊಳಿಸುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಕೋರಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸೋಮಶೇಖರ್, ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.