ADVERTISEMENT

ನೆರೆ ಸಂತ್ರಸ್ತ ಚಿಣ್ಣರ ಕಂಗಳಲ್ಲಿ ಭವಿಷ್ಯದ ಹೊಂಗನಸು

ಓದಿಗಾಗಿ ಊರು ಬಿಟ್ಟು ಬಂದ ಮಕ್ಕಳು

ಡಿ.ಬಿ, ನಾಗರಾಜ
Published 27 ಸೆಪ್ಟೆಂಬರ್ 2019, 19:45 IST
Last Updated 27 ಸೆಪ್ಟೆಂಬರ್ 2019, 19:45 IST
ಸುತ್ತೂರು ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ ದಾಖಲಾತಿ ಪಡೆದ ನೆರೆ ಸಂತ್ರಸ್ತ ಮಕ್ಕಳ ಕುಶಲೋಪರಿಯನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶುಕ್ರವಾರ ಮೈಸೂರಿನ ಬೆಟ್ಟದ ತಪ್ಪಲಲ್ಲಿರುವ ಶಾಖಾ ಮಠದಲ್ಲಿ ವಿಚಾರಿಸಿಕೊಂಡರು
ಸುತ್ತೂರು ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ ದಾಖಲಾತಿ ಪಡೆದ ನೆರೆ ಸಂತ್ರಸ್ತ ಮಕ್ಕಳ ಕುಶಲೋಪರಿಯನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶುಕ್ರವಾರ ಮೈಸೂರಿನ ಬೆಟ್ಟದ ತಪ್ಪಲಲ್ಲಿರುವ ಶಾಖಾ ಮಠದಲ್ಲಿ ವಿಚಾರಿಸಿಕೊಂಡರು   

ಮೈಸೂರು: ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದ ನೆರೆ ಸಂತ್ರಸ್ತ ಪ್ರದೇಶದ ಬೆರಳೆಣಿಕೆಯ ಚಿಣ್ಣರ ಕಂಗಳಲ್ಲಿ ಇದೀಗ ಹೊಂಬೆಳಕಿನ ವಿಶ್ವಾಸ.

ನೆರೆಪೀಡಿತ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸುತ್ತೂರು ಮಠದಿಂದ ನೆರವಿನ ಹಸ್ತ ಚಾಚಿದ ಸಂದರ್ಭವೇ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೂಚನೆಯಂತೆ ಜೆಎಸ್‌ಎಸ್‌ ಸಿಬ್ಬಂದಿ ಆ ಭಾಗದ ಜನರಿಗೆ ಉಚಿತ ಶಿಕ್ಷಣ ನೀಡುವ ಭರವಸೆ ನೀಡಿದ್ದರು.

ಮಠದ ಮನವಿಗೆ ಓಗೊಟ್ಟ ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಕೆಲವರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಸುತ್ತೂರು ಮಠಕ್ಕೆ ಕಳುಹಿಸಿಕೊಟ್ಟಿದ್ದು, ಇವರಲ್ಲಿ ಕೆಲವರು ತಮ್ಮ ಸಂಕಷ್ಟ, ಕನಸುಗಳನ್ನು ‘ಪ್ರಜಾವಾಣಿ’ ಜತೆ ಶುಕ್ರವಾರ ಹಂಚಿಕೊಂಡರು.

ADVERTISEMENT

‘ಕೂಡಲಸಂಗಮನಾಥನ ಸನ್ನಿಧಿಯಲ್ಲೇ ನಾವು ಬದುಕು ಕಟ್ಟಿಕೊಂಡಿದ್ವೀ. ಒಮ್ಮೆಗೇ ಕೃಷ್ಣೆ, ಘಟಪ್ರಭೆ, ಮಲಪ್ರಭೆ ಉಕ್ಕೇರಿದ್ವು. ನದಿಗಳ ಅಬ್ಬರ, ವರ್ಷಧಾರೆಯ ಹೊಡೆತಕ್ಕೆ ನಮ್ಮ ಮನೆ ಬಿದ್ದೋಯ್ತು. ದೇಗುಲದ ಆವರಣದಲ್ಲಿದ್ದ ಅಂಗಡಿಯೂ ಮುಳುಗ್ತು. ಬದುಕೇ ಭಾರವಾಯ್ತು. ಮುಂದೇನು ? ಎಂದು ಪೋಷಕರು ಚಿಂತಿಸುವಾಗಲೇ ಸುತ್ತೂರು ಮಠ ಆಸರೆ ಕಲ್ಪಿಸಿತು’ ಎಂದು ಸಹನಾ ಪ್ರವೀಣಗೌಡರ ಹೇಳಿದಳು.

‘ಅಪ್ಪ–ಅವ್ವ ಇಲ್ಲಿ ತನ್ಕ ಬಂದು ನನ್ನ–ತಮ್ಮನ್ನ ಬಿಟ್ ಹೋದರು. ವಾರವಾಯ್ತು. ಇಲ್ಲೇ ಶಾಲಿಗೆ ಹೋಗ್ತಿದ್ದೀವಿ. ಹಾಸ್ಟೆಲ್‌ ಸಹ ಚಲೋ ಇದೆ. ವಾತಾವರಣ ಒಗ್ಗಿದೆ. ಶ್ಯಾಣ್ಯಾರಾಗಬೇಕು, ಸಾಧಿಸಬೇಕು, ಅಪ್ಪ–ಅವ್ವಂನ ಚಲೋ ನೋಡ್ಕೋಬೇಕು ಎಂಬ ಗುರಿಯೊಂದಿಗೆ ಅಭ್ಯಾಸ ಮಾಡಕತ್ತ್ವೀ’ ಎಂದು ಎಂಟನೇ ತರಗತಿಯ ಬಾಲಕಿ ಸಹನಾ ಗದ್ಗದಿತಳಾದಳು.

‘ನಮ್ಮೂರಲ್ಲಿ ಎಲ್ಲಿ ನೋಡಿದ್ರೂ ನೀರ್ ಬಂದಿತ್ತು. ಸಹನಾಕ್ಕ ಹೇಳ್ದಂಗ ನಮ್ದೂ ಮನಿ, ಅಂಗಡಿ ಎಲ್ಲಾನೂ ನಾಶವಾಯ್ತ್ರೀ. ನಾ ಅಣ್ಣನ ಜೊತೆ ಇಲ್ಲಿಗೆ ಬಂದ್ವೀನ್ರೀ. ಚೆನ್ನಾಗಿ ಕಲಿತು ದೊಡ್ಡ ನೌಕ್ರೀನೇ ಹಿಡಿಬೇಕು ಅಂದ್ಕೊಂಡ್ವೀನಿ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಲೇಬೇಕು ಅಂತ ಓದ್ತ್ವೀನ್ರೀ’ ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಐದನೇ ತರಗತಿ ವಿದ್ಯಾರ್ಥಿನಿ ಸ್ನೇಹಾ ಸಂಗಯ್ಯ ನಾಗನ್ನವರ ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.