ADVERTISEMENT

ಮೈಸೂರು | ಗೀತೋತ್ಸವ–2025 : ಗಾಯಕರು, ಕವಿ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 3:07 IST
Last Updated 3 ಆಗಸ್ಟ್ 2025, 3:07 IST
ಮೈಸೂರಿನಲ್ಲಿ ಸುಗಮ ಸಂಗೀತ ಸಮ್ಮೇಳನದ ಅಂಗವಾಗಿ ನಡೆದ ‘ಕಾವ್ಯ ದಿಬ್ಬಣ’ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡಿದ್ದರು
ಮೈಸೂರಿನಲ್ಲಿ ಸುಗಮ ಸಂಗೀತ ಸಮ್ಮೇಳನದ ಅಂಗವಾಗಿ ನಡೆದ ‘ಕಾವ್ಯ ದಿಬ್ಬಣ’ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡಿದ್ದರು   

ಮೈಸೂರು: ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕವಿಗಳು, ಕಲಾವಿದರು, ಹಿರಿಯ–ಕಿರಿಯ ಗಾಯಕರ ಸಮ್ಮಿಲನ. ಅಲೆಯಾಗಿ ತೇಲಿಬಂದ ಸುಗಮ ಸಂಗೀತ. ಪ್ರತ್ಯೇಕ ಅಕಾಡೆಮಿಯ ಬೇಡಿಕೆ ಮಂಡನೆ. ಗಮನಸೆಳೆದ ‘ಕಾವ್ಯ ದಿಬ್ಬಣ’.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಶನಿವಾರದಿಂದ ಎರಡು ದಿನಗಳವರೆಗೆ ಆಯೋಜಿಸಿರುವ ‘ಗೀತೋತ್ಸವ–2025’ 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನದ ಮೊದಲ ದಿನದ ವಿಶೇಷಗಳಿವು.

ಸಮ್ಮೇಳನಾಧ್ಯಕ್ಷ ನಗರ ಶ್ರೀನಿವಾಸ ಉಡುಪ ಅವರನ್ನು ‘ಕಾವ್ಯ ದಿಬ್ಬಣ’ ಮೆರವಣಿಗೆಯಲ್ಲಿ ಓವೆಲ್‌ ಮೈದಾನ ಬಳಿಯಿಂದ ಕಲಾಮಂದಿರದವರೆಗೆ ಅದ್ದೂರಿಯಾಗಿ ಕರೆತರಲಾಯಿತು. ಸಾಹಿತಿಗಳು ಹಾಗೂ ಕಲಾವಿದರು ಪಾಲ್ಗೊಂಡು ಮೆರುಗು ಹೆಚ್ಚಿಸಿದರು. ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಆಯೋಜಿಸಿದ್ದ ಕವಿ- ಕಲಾವಿದರ‌ ಫೋಟೊಗಳ ಪ್ರದರ್ಶನ ಗಮನಸೆಳೆಯಿತು.

ADVERTISEMENT

ಹೃದಯಸ್ಪರ್ಶಿ ಸಾಹಿತ್ಯ ಸಂಗಮ:

ಸಮ್ಮೇಳನವನ್ನು ಉದ್ಘಾಟಿಸಿದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ‘ಜೀವನದ ನಾಡಿ ಹಿಡಿಯುವ ಸಮ್ಮೇಳನ ಹಾಗೂ ಜನರಿಗೆ ಖುಷಿ ನೀಡುವಂತಹ ಸಾಂಸ್ಕೃತಿಕ ಸಮ್ಮೇಳನವಿದು. ಭಾರತ ಉಜ್ವಲ, ಅಮೋಘ ಹಾಗೂ ಮುಂದುವರಿಯುತ್ತಿರುವ ದೇಶ. ಇಲ್ಲಿ ಸುಗಮ ಸಂಗೀತಕ್ಕೆ ಹೆಸರಾಗಿರುವುದು ಕರ್ನಾಟಕ ಮಾತ್ರ. ಸುಗಮ ಸಂಗೀತ ಹೃದಯಸ್ಪರ್ಶಿ ಸಾಹಿತ್ಯ ಸಂಗಮ’ ಎಂದು ಹೇಳಿದರು.

‘ಸುಗಮ ಸಂಗೀತವು ಕನ್ನಡ ನುಡಿಯ ಸೊಗಸನ್ನು ತಿಳಿಸುತ್ತದೆ. ಡಿಜಿಟಲ್ ಯುಗದಲ್ಲೂ ಹೊಸ ಹೊಸ ರೂಪದಲ್ಲಿ ಮೂಡಿಬರುತ್ತಿದೆ. ಆಡಂಬರ ಕಡಿಮೆ, ಸಾಹಿತ್ಯದ ಸ್ಪಷ್ಟ ಉಚ್ಚಾರಣೆಯ ಗಾಯನವಿದು. ಇದರಲ್ಲಿ ಭಾವಕ್ಕೆ ಪ್ರಥಮ ಸ್ಥಾನ. ಪದದ ಅರ್ಥವೇ ರಾಜ ಎಂಬ ಪರಿಪಾಠವನ್ನು ಸ್ಥಾಪಿಸಿದ ಸುಗಮ ಸಂಗೀತ. ಈ ಕ್ಷೇತ್ರದವರು ದೇಶದ ಅತ್ಯಂತ ದೊಡ್ಡ ಸಂಪತ್ತು. ಈ ಸಂಗೀತದಿಂದ ಬದುಕು ಹಸನಾಗುತ್ತದೆ. ಜನರ ಆಯಸ್ಸು ಹೆಚ್ಚುತ್ತದೆ. ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಸಮ್ಮೇಳನಕ್ಕೆ ನೆರವಾಗುವಂತೆ ಮುಖ್ಯಮಂತ್ರಿಯವರಿಗ ಪತ್ರ ಬರೆದೆ. ಅವರು ಪ್ರಗತಿಪರ ಚಿಂತನೆಯವರು. ₹ 25 ಲಕ್ಷ ಬಿಡುಗಡೆ ಮಾಡುವುದು ಎಂದು ತಕ್ಷಣ ನನ್ನ ಪತ್ರದ ಮೇಲೆ ಬರೆದು ಕಳುಹಿಸಿದರು. ಅದರಂತೆ ಹಣ ಬಿಡುಗಡೆ ಮಾಡಿದರು. ಅಂತೆಯೇ ಸುಗಮ ಸಂಗೀತಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವ ವಿಶ್ವಾಸವೂ ಇದೆ’ ಎಂದರು.’

ಜಿಲ್ಲಾಧಿಕಾರಿ ಬರಬೇಕಿತ್ತು:

ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಮಾತನಾಡಿ, ‘ಈ ಮಹತ್ವದ ಸಮ್ಮೇಳನಕ್ಕೆ ಜಿಲ್ಲಾಧಿಕಾರಿ ಬಾರದಿರುವುದು ನನಗೆ ಬಹಳ ಅಸಮಾಧಾನ ಆಗಿದೆ’ ಎಂದರು.

‘ನಾಡಿನಾದ್ಯಂತ 45ಸಾವಿರ ಮಂದಿಗೆ ಸುಗಮ ಸಂಗೀತ ಕಲಿಸಿದ್ದೇವೆ. ಈ ಅದ್ಭುತ ಕಲಾ ಪ್ರಾಕಾರಕ್ಕೆ ‌ಪ್ರತ್ಯೇಕ ಅಕಾಡೆಮಿ ಇಲ್ಲ. ಆದ್ದರಿಂದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿಗೆ ಅಕಾಡೆಮಿ ಸೇರಿಸಿಕೊಡಬೇಕು‌’ ಎಂದು ಒತ್ತಾಯಿಸಿದರು. ‘ಇದು ಸಾಧ್ಯವಾದರೆ ನನ್ನ ಶ್ರಮಕ್ಕೆ ಬೆಲೆ
ದೊರೆತಂತಾಗುತ್ತದೆ’ ಎಂದು ಹೇಳಿದರು.

ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ‌, ‘ಮಾತು ಮತಿಸಿ ಬಂದರೆ ಅದುವೇ ಸಂಗೀತ. ಗೀತ– ಸಂಗೀತ– ಭಾವವನ್ನು ಏಕೀಕರಿಸಿಕೊಂಡು ಹೋಗುವವರು ಸುಗಮ ಸಂಗೀತ ಕಲಾವಿದರು. ಈ ಹಿಂದಿನ ಗೀತೋತ್ಸವ ಇಷ್ಟೊಂದು ವಿಶೇಷವಾಗಿ ನಡೆದಿರಲಿಲ್ಲ. ಗೀತೆಯ ದೋಣಿ ಹೀಗೆಯೇ ಸಾಗಲಿ’ ಎಂದು ಮೆಚ್ಚುಗೆ ವ್ಯಕ್ತ‍ಪಡಿಸಿದರು.

ಕವಿ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ, ‘ನನಗೆ ದೊರೆತಿರುವ ಕಾವ್ಯಶ್ರೀ ಪ್ರಶಸ್ತಿಯನ್ನು ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಅರ್ಪಿಸುತ್ತೇನೆ. ನಾನು ಈ ಹಿಂದೆ ನಡೆದ ಎಲ್ಲ 18 ಸಮ್ಮೇಳನಗಳಲ್ಲೂ ಭಾಗವಹಿಸಿದ್ದೇನೆ. ಪ್ರತ್ಯೇಕ ಅಕಾಡೆಮಿ ಬೇಕೆಂದು ದೊಡ್ಡ ಧ್ವನಿಯಲ್ಲಿ ಒತ್ತಾಯಿಸಿರುವುದು ಈ ಸಮ್ಮೇಳನದ ವಿಶೇಷ’ ಎಂದರು.

ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಕಲಾವಿದ ರಾಜಶೇಖರ ಕದಂಬ, ಬ್ರಾಹ್ಮಣ ಸಮಾಜದ ಮುಖಂಡ ಕೆ.ರಘುರಾಂ ವಾಜಪೇಯಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಕವಿ ಜಯಪ್ಪ ಹೊನ್ನಾಳಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಟಿ.ಎಸ್. ಶ್ರೀವತ್ಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌, ಪರಿಷತ್ತಿನ ಕಾರ್ಯಾಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ನಾಗರಾಜ ವಿ.ಭೈರಿ, ಗಾಯಕ ಎನ್. ಬೆಟ್ಟೇಗೌಡ ಪಾಲ್ಗೊಂಡಿದ್ದರು.

ನಂತರ ಭಾವಕುಸುಮ, ಭಾವಾಂಜಲಿ ಸುಗಮ ಸಂಗೀತ, ತತ್ವಪದಗಳು, ಕವಿಯ ನೋಡಿ–ಕವಿತೆ ಕೇಳಿ, ಕವಿ ಚಿತ್ರಗೀತೆಗಳು, ಗೀತ ಸಂಗಮ ಕಾರ್ಯಕ್ರಮ ನಡೆಯಿತು.

ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವರು
ಸುಗಮ ಸಂಗೀತವೆಂದರೆ ಬಹಳ ಸುಲಭ ಎಂಬ ಭಾವನೆ ಅನೇಕರಿಗಿದೆ. ಸಾಹಿತ್ಯ– ಸಂಗೀತ ಅನುಪಮ ದಾಂಪತ್ಯವೇ ಈ ಕಲಾಪ್ರಾಕಾರ
ನಗರ ಶ್ರೀನಿವಾಸ ಉಡುಪ ಸಮ್ಮೇಳನಾಧ್ಯಕ್ಷ

‘ಸ್ಥಾಪಿಸುವ ಮಹಾನ್ ಶಕ್ತಿ’

ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಮಾತನಾಡಿದ ನಗರ ಶ್ರೀನಿವಾಸ ಉಡುಪ ಅವರು ಸುಗಮ ಸಂಗೀತ ಕ್ಷೇತ್ರ ನಡೆದುಬಂದ ಬಗೆಯನ್ನು ತಿಳಿಸಿ ಕ್ಷೇತ್ರಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸಿದರು. ‘ಸಂಗೀತವು ಕ್ರಮಬದ್ಧ ಧ್ವನಿ ತರಂಗಗಳ ಹಾಡುವ ನುಡಿಸುವ ಕಲಾ ಮಾಧ್ಯಮ. ಸಕಲ ಕಲೆಗಳಲ್ಲಿ ಶ್ರೇಷ್ಠವಾದ ಕಲೆ ಇದು. ನೇರವಾಗಿ ಕಲೆಗಳ ಮೂಲಕ ಹೃದಯಕ್ಕೆ ಪ್ರವಹಿಸುವ ಮದುರ ನಿನಾದ. ಎಂತಹ ನೋವಿದ್ದರೂ ಅನಿರ್ವಚನೀಯ ಆನಂದದ ಕಡೆಗೆ ಒಯ್ಯುವ ಶಕ್ತಿ ಹೊಂದಿದೆ. ಅದರಲ್ಲೂ ವಿಶೇಷವಾಗಿ ನಾಡಿದ ಕವಿಶ್ರೇಷ್ಠರ ಆಶಯಗಳನ್ನು ಜನಸಾಮಾನ್ಯರ ಹೃದಯ ಸಿಂಹಾಸನದಲ್ಲಿ ಸ್ಥಾಪಿಸುವ ಮಹಾನ್ ಶಕ್ತಿ ಸುಗಮ ಸಂಗೀತಕ್ಕಿದೆ. ಇದಕ್ಕೂ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ’ ಎಂದು ಪ್ರತಿಪಾದಿಸಿದರು.

‘ಸುಗಮ ಸಂಗೀತದಲ್ಲಿ ಮುಖ್ಯವಾಗಿ ಮೂರು ಕವಲುಗಳನ್ನು ನೋಡುತ್ತೇವೆ. ಸಂಗೀತಕ್ಕೆ ಭಾವಸಂಪತ್ತಿಗೆ ಹಾಗೂ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಡುವುದು ಕಂಡುಬರುತ್ತದೆ. ವಚನಗಳನ್ನು ಅನುಭಾವ ಪದಗಳನ್ನು ಸುಗಮ ಸಂಗೀತ ಶೈಲಿಯಲ್ಲಿ ಹಾಡಿದಾಗ ಅವು ಹೆಚ್ಚು ಅರ್ಥಪೂರ್ಣವಾಗಿ ಸಂವಹನಗೊಳ್ಳುತ್ತವೆ. ನಾಡಿನ ಹೆಮ್ಮೆಯ ಸುಗಂಧವನ್ನು ಹರಡುವ ಕಾವ್ಯ ಸುಗಮ ಸಂಗೀತದಿಂದ ಜನಸಾಮಾನ್ಯರಿಗೆ ಹತ್ತಿರವಾಗುತ್ತಿರುವುದು ನಿಜಕ್ಕೂ ಆಶಾದಾಯಕವಾಗಿದೆ. ಜನರು 3–4 ಗಂಟೆಗಳವರೆಗೂ ಕುಳಿತು ಕೇಳುವುದನ್ನು ಕಾಣುತ್ತೇವೆ’ ಎಂದರು.

ರಾಜಾಶ್ರಯದ ಕಾರಣದಿಂದ...

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ ‘ಸಂಗೀತ ಮತ್ತು ಸಾಹಿತ್ಯದ ಮಿಲನ ಜನರಲ್ಲಿ ಪ್ರೀತಿ ಸೌಹಾರ್ದತೆ ಹಾಗೂ ಜನಜೀವನವನ್ನು ಉಲ್ಲೇಖಿಸುವಂತಹ ಕ್ಷೇತ್ರವಾಗಿದೆ. ಸಾಹಿತ್ಯ ಎಲ್ಲಿರುತ್ತದೆ ಅಲ್ಲಿ ಖಂಡಿತವಾಗಿ ಜಾನಪದ ಇರುತ್ತದೆ. ಜಾನಪದವೇ ಸಾಹಿತ್ಯದ ಬೇರು. ಓದಲು ಬರೆಯಲು ಬಾರದ ಅಕ್ಷರದ ಜ್ಙಾನವೇ ಇಲ್ಲದ ನಮ್ಮ ಪೂರ್ವಜರು ತಮ್ಮ ಜೀವನಶೈಲಿಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

‘ರಾಷ್ಟ್ರಕವಿ ಕುವೆಂಪು ಅವರು ಬೇಂದ್ರೆಯವರು ಸೇರಿದಂತೆ ಸಾಹಿತ್ಯ ಲೋಕದ ಅನೇಕ ದಿಗ್ಗಜರು ಜನಜೀವನವನ್ನು ಸಾಹಿತ್ಯವಾಗಿ ಪರಿವರ್ತಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸಾಹಿತ್ಯದ ಜೊತೆಗೆ ಸಂಗೀತ ಸೇರಿ ಕೇಳುಗರಿಗೆ ಮುದವನ್ನು ನೀಡುವ ಪ್ರಯತ್ನ ಒಂದಡೆಯಾದರೆ ಅವರ ಬದುಕಿನ ಸಂಕಷ್ಟಗಳ ಜೊತೆಗೆ ಮಿಲನವಾಗಿ ಅವರ ಪ್ರೀತಿ ಉತ್ಸಾಹ ಸೌಹಾರ್ದ ಬದುಕಿಗೆ ಪ್ರೇರಣೆಯಾಗಿದೆ’ ಎಂದರು.

‘ಇಂತಹ ಸುಗಮ ಸಂಗೀತ ಕ್ಷೇತ್ರಕ್ಕೆ ವ್ಯಾಪಕ ಬೆಂಬಲ ದೊರೆತದ್ದು ಮೈಸೂರು ಅರಸರಿಂದ. ರಾಜಾಶ್ರಯದಿಂದ ಬೆಳೆದ ಈ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರ ಹೆಚ್ಚು ಅಭ್ಯುದಯವನ್ನು ಕಂಡು ಸಮಾಜವನ್ನು ತಿದ್ದಿ ಯುವ ಸಮಾಜವನ್ನು ಸರಿದಾರಿಯಲ್ಲಿ ಕರೆದೊಯ್ಯಲು ಮತ್ತು ಸ್ವಾತಂತ್ರ್ಯದ ಉದ್ದೇಶ ಸಂವಿಧಾನದ ಆಶಯ ಅರ್ಥೈಸಿ ಬಹುತ್ವವನ್ನು ರಕ್ಷಣೆ ಮಾಡುತ್ತಿದೆ’ ಎಂದು ಹೇಳಿದರು. ‘ಸಂಗೀತ ಸುಧೆಯ ಮೂಲಕ ಮಾನವೀಯತೆ ಹಂಚೋಣ’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.