ADVERTISEMENT

ಹುಣಸೂರಿನ ಆಭರಣ ಮಾರಾಟ ಮಳಿಗೆಯಲ್ಲಿ 7 ಕೆ.ಜಿ. ಚಿನ್ನ ದರೋಡೆ: ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 3:02 IST
Last Updated 30 ಡಿಸೆಂಬರ್ 2025, 3:02 IST
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಶಂಕಿತ ಆರೋಪಿ
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಶಂಕಿತ ಆರೋಪಿ   

ಹುಣಸೂರು: ನಗರದ ಬೈಪಾಸ್‌ ರಸ್ತೆಯ ಸ್ಕೈ ಗೋಲ್ಡ್‌ ಮತ್ತು ಡೈಮಂಡ್ಸ್ ಆಭರಣ ಮಾರಾಟ ಮಳಿಗೆಯಲ್ಲಿ ಅಂದಾಜು 7 ಕೆ.ಜಿ. ಚಿನ್ನವನ್ನು ದರೋಡೆ ಮಾಡಿದ್ದು, ಕಳ್ಳರ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ. 

ಭಾನುವಾರ ನಡೆದ ದರೋಡೆ ಪ್ರಕರಣ ಸಂಬಂಧ ಈವರೆಗೆ ಯಾವುದೇ ಆರೋಪಿಗಳ ಕುರಿತು ಕುರುಹು ಸಿಕ್ಕಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಸೋಮವಾರ ನಗರದ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಮಾರಾಟ ಮಳಿಗೆಯಲ್ಲಿ ಭಾನುವಾರ ಮುಸುಕುಧಾರಿಗಳು ನಡೆಸಿದ ದಾಳಿಯಲ್ಲಿ ನಿಖರವಾಗಿ ಇಂತಿಷ್ಟು ಬೆಲೆಯ ಚಿನ್ನಾಭರಣ ಕಳುವಾಗಿದೆ ಎಂಬ ಮಾಹಿತಿ ಲಭ್ಯವಿಲ್ಲ. ಅಂದಾಜಿನಂತೆ 7 ಕೆ.ಜಿ. ಚಿನ್ನಾಭರಣ ಅಪಹರಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಭದ್ರತಾ ವೈಫಲ್ಯ:

‘ಆಭರಣ ಮಳಿಗೆಯಲ್ಲಿ ಭದ್ರತೆಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಿಲ್ಲ, ಚಿನ್ನಾಭರಣ ಅಂಗಡಿ ಆರಂಭಿಸುವ ಮುನ್ನ ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರಿ ಆದೇಶದಂತೆ ಭದ್ರತೆ ಹೊಂದಿರಬೇಕು. ಆದರೆ ಸ್ಕೈ ಗೋಲ್ಡ್‌ ಮತ್ತು ಡೈಮಂಡ್ಸ್‌ ಮಾರಾಟ ಮಳಿಗೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹೊರತುಪಡಿಸಿ ಬೇರೆ ಭದ್ರತಾ ಸೌಲಭ್ಯವಿಲ್ಲ. ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಮಾರಾಟ ಮಳಿಗೆಯಲ್ಲಿ ಬರ್ಗ್ಯುಲೆರಿ ಅಲಾರಾಂ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಹೀಗಾಗಿ ಅಪರಾಧಗಳು ಸಂಭವಿಸಿದಾಗ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲವಾಗಿದೆ’ ಎಂದರು.

‘ಪೊಲೀಸ್‌ ಇಲಾಖೆ ನಗರದ ಚಿನ್ನ ಬೆಳ್ಳಿ ವ್ಯಾಪಾರಿಗಳ ಸಭೆ ನಡೆಸಿ ಚಿನ್ನ ಮಾರಾಟ ವ್ಯಾಪಾರಿಗಳು ಕೈಗೊಳ್ಳಬೇಕಿರುವ ಸುರಕ್ಷತಾ ಕ್ರಮ ಮತ್ತು ಭದ್ರತೆ ಕುರಿತಂತೆ ಸಮಗ್ರವಾಗಿ ತಿಳಿಸಲಾಗಿತ್ತು. ಇದಲ್ಲದೆ ಗುಣಮಟ್ಟದ ಸಿಸಿಟಿವಿ ಕ್ಯಾಮರಾ ಅಳವಡಿಸುವುದರಿಂದ ಬಂದು ಹೋಗುವ ಗ್ರಾಹಕರ ಮುಖಚಹರೆ ಚಲನವಲನ ಎಲ್ಲವೂ ಸುಲಭವಾಗಿ ಗುರುತಿಸಲು ಸಹಕಾರವಾಗಲಿದೆ ಎಂದು ತಿಳಿಸಲಾಗಿತ್ತು. ಆದರೂ ಎಚ್ಚೆತ್ತುಕೊಂಡಿಲ್ಲ. ನಗರದ ಎಲ್ಲಾ ಚಿನ್ನ ಮಾರಾಟ ವ್ಯಾಪಾರಿಗಳು ಅಳವಡಿಸಬೇಕು’ ಎಂದರು.

ಈಗಾಗಲೇ ಘಟನೆಗೆ ಸಂಬಂಧಿಸಿದಂತೆ 5 ತಂಡಗಳನ್ನು ರಚಿಸಿ ನಾಖಾಬಂದಿ ವ್ಯವಸ್ಥೆ ಮಾಡಲಾಗಿದೆ. ಆರೋಪಿಗಳು ಸುಳಿದಾಡಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಲಭ್ಯವಾಗಿಲ್ಲ. ಶೀಘ್ರದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿವೈಎಸ್ಪಿ ರವಿ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್ ಸಂತೋಷ್‌ ಕಶ್ಯಪ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.