ADVERTISEMENT

‘ಪಿಎಂ–ವಿಶ್ವಕರ್ಮ’ ಉತ್ತಮ ಪ್ರತಿಕ್ರಿಯೆ: ಸೌಲಭ್ಯ ಕೋರಿ 1.58 ಲಕ್ಷ ಮಂದಿ ಅರ್ಜಿ

ಎಂ.ಮಹೇಶ
Published 16 ಜನವರಿ 2025, 6:14 IST
Last Updated 16 ಜನವರಿ 2025, 6:14 IST
ಹುಣಸೂರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆಯಡಿ 90 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ಜಿ.ಡಿ. ಹರೀಶ್‌ಗೌಡ ಅವರು ಕಳೆದ ವರ್ಷ ವಿತರಿಸಿದ ಕ್ಷಣ
ಹುಣಸೂರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆಯಡಿ 90 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ಜಿ.ಡಿ. ಹರೀಶ್‌ಗೌಡ ಅವರು ಕಳೆದ ವರ್ಷ ವಿತರಿಸಿದ ಕ್ಷಣ   

ಮೈಸೂರು: ವಿವಿಧ ವೃತ್ತಿಯ ಕುಶಲಕರ್ಮಿಗಳಿಗೆ ಕೌಶಲ ತರಬೇತಿಯೊಂದಿಗೆ ಸಾಲ ಸೌಲಭ್ಯವನ್ನು ಕಲ್ಪಿಸುವ ಕೇಂದ್ರದ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ’ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈವರೆಗೆ 1.58 ಲಕ್ಷ ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದ್ದು, ಮೊದಲ ಹಂತದಲ್ಲಿ 97 ಸಾವಿರ ಮಂದಿಗೆ ಶಿಫಾರಸು ಮಾಡಲಾಗಿದೆ. ಅದು 2ನೇ ಹಂತದಲ್ಲಿ 40,597ಕ್ಕೆ ಇಳಿಯಿತು. 3ನೇ ಹಂತದಲ್ಲಿ 32,466 ಮಂದಿಗೆ ಅನುಮೋದನೆ ದೊರೆತಿದೆ. ಇದರಲ್ಲಿ 10 ಸಾವಿರ ಮಂದಿಗೆ ವಿವಿಧ ಕೌಶಲ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗಿದೆ. ಸೌಲಭ್ಯಗಳನ್ನು ವಿತರಿಸಲಾಗಿದೆ.

ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವ ಕಾರಣದಿಂದ ಕೌಶಲ ತರಬೇತಿ ಕೇಂದ್ರಗಳ ಸಂಖ್ಯೆಯನ್ನು 13ರಿಂದ 25ಕ್ಕೆ ಏರಿಸಲಾಗಿದೆ. ನಗರದಲ್ಲೇ ಖಾಸಗಿ ಹಾಗೂ ಸರ್ಕಾರಿ ಸೇರಿ ಒಟ್ಟು 15 ಕೇಂದ್ರಗಳಿವೆ.

ADVERTISEMENT

ಯಾರ‍್ಯಾರಿಗೆ ಅನ್ವಯ?: ಈ ಯೋಜನೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶದ ಸಾಂಪ್ರದಾಯಿಕವಾದ 18 ಬಗೆಯ ವೃತ್ತಿಯ ಕುಶಲಕರ್ಮಿಗಳು ಸೌಲಭ್ಯ ಪಡೆಯಬಹುದಾಗಿದೆ.

ಬಡಗಿ ಅಥವಾ ಮರಗೆಲಸದವರು, ದೋಣಿ ತಯಾರಕರು, ಸಾಂಪ್ರದಾಯಿಕ ಶಸ್ತ್ರಗಳನ್ನು ತಯಾರಿಸುವವರು, ಕುಂಬಾರರು, ಸುತ್ತಿಗೆ ಹಾಗೂ ಇತರ ವಸ್ತುಗಳ ತಯಾರಕರು, ಬೀಗ ಹಾಗೂ ಕೀಲಿ ತಯಾರಕರು, ಅಕ್ಕಸಾಲಿಗರು, ಕಮ್ಮಾರರು, ಶಿಲ್ಪಿಗಳು ಮತ್ತು ಕಲ್ಲು ಒಡೆಯುವವರು, ಸಾಂಪ್ರದಾಯಿಕವಾಗಿ ಪಾದರಕ್ಷೆ ತಯಾರಿಸುವವರು, ಕಲ್ಲು ಕುಟಿಗರು ಅಥವಾ ರಾಜಮೇಸ್ತ್ರಿಗಳು, ಸಾಂಪ್ರದಾಯಿಕವಾಗಿ ಬುಟ್ಟಿ, ಚಾಪೆ, ಪೊರಕೆ, ತೆಂಗಿನನಾರಿನ ಹಗ್ಗ ತಯಾರಕರು, ಸಾಂಪ್ರದಾಯಿಕವಾಗಿ ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕರು, ಹೂಮಾಲೆ ತಯಾರಕರು, ಅಗಸರು ಅಥವಾ ಬಟ್ಟೆ ತೊಳೆಯುವವರು, ದರ್ಜಿಗಳು (ಟೈಲರ್‌ಗಳು) ಹಾಗೂ ಮೀನಿನ ಬಲೆ ತಯಾರಕರು ಆರ್ಥಿಕ ನೆರವು ತೆಗೆದುಕೊಳ್ಳಬಹುದು.

ಈ ಕುಶಲಕರ್ಮಿಗಳನ್ನು ಗುರುತಿಸಿ ಅವರ ವೃತ್ತಿ ಅಭಿವೃದ್ಧಿಗಾಗಿ ಸೂಕ್ತ ತರಬೇತಿ ನೀಡಿ, ಆರ್ಥಿಕ ಸೌಲಭ್ಯದ ಜೊತೆಗೆ ಡಿಜಿಟಲ್‌ ಸೌಲಭ್ಯದೊಂದಿಗೆ ಕುಶಲಕರ್ಮಿಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಸ್ಥಳೀಯ ಹಾಗೂ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.

‘ಜಿಲ್ಲೆಯಲ್ಲಿ ಪಿಎಂ–ವಿಶ್ವಕರ್ಮ ಯೋಜನೆಯಲ್ಲಿ ಅನುಮೋದನೆ ದೊರೆತವರಿಗೆ ಇಲಾಖೆಯಿಂದ ಕೌಶಲ ತರಬೇತಿ ನೀಡಲಾಗುತ್ತಿದೆ. ಈವರೆಗೆ 10 ಸಾವಿರ ಮಂದಿಗೆ ತರಬೇತಿ ಕೊಟ್ಟಿದ್ದೇವೆ. ತರಬೇತಿ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ದರ್ಜಿ ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನವರು ಅರ್ಜಿ ಸಲ್ಲಿಸಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ. ಅವರು ಪಾರಂಪರಿಕವಾಗಿ ವೃತ್ತಿ ನಡೆಸಿಕೊಂಡು ಬರುತ್ತಿದ್ದಾರೆಯೇ ಎಂಬುದರ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ’ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಾರಾಯಣಮೂರ್ತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿ.ಲಕ್ಷ್ಮೀಕಾಂತ ರೆಡ್ಡಿ
ವಿವಿಧ 18 ವೃತ್ತಿಯವರಿಗೆ ಅನುಕೂಲ ತರಬೇತಿಯೊಂದಿಗೆ ಸಾಲವನ್ನೂ ಪಡೆಯಬಹುದು ಪಾರಂಪರಿಕ ವೃತ್ತಿಯವರಿಗೆ ಸೌಲಭ್ಯ
ಪಿಎಂ–ವಿಶ್ವಕರ್ಮ ಯೋಜನೆಯಲ್ಲಿ ಟೈಲರಿಂಗ್‌ಗೆ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ. ಅವುಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸುವಂತೆ ಸೂಚಿಸಲಾಗಿದೆ. ಅರ್ಹರಿಗೆ ಸರ್ಕಾರದ ನೆರವು ದೊರೆಯಲಿದೆ
ಜಿ. ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ
ತರಬೇತಿಯೊಂದಿಗೆ ಶಿಷ್ಯವೇತನ
18 ವರ್ಷ ಮೀರಿದವರು ಅರ್ಜಿ ಸಲ್ಲಿಸಬಹುದು. ಗರಿಷ್ಠ ವಯಸ್ಸಿನ ಮಿತಿ ಇಲ್ಲ. ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ದಲ್ಲಿ ಮಾತ್ರ ನೋಂದಣಿ ಮಾಡಿಸಬೇಕು. ಯೋಜನೆಯಡಿ ಅನುಮೋದನೆಗೊಂಡ ಫಲಾನುಭವಿಗಳಿಗೆ ಪ್ರಮಾಣಪತ್ರ ಗುರುತಿನ ಚೀಟಿ ನೀಡಲಾಗುವುದು. 5ರಿಂದ 7 ದಿನಗಳವರೆಗೆ ದಿನಕ್ಕೆ ₹500 ಶಿಷ್ಯವೇತನದೊಂದಿಗೆ ಕೌಶಲ ಅಭಿವೃದ್ಧಿ ತರಬೇತಿ ಕೊಡಲಾಗುವುದು. ಗರಿಷ್ಠ ₹15 ಸಾವಿರ ಮೌಲ್ಯದ ಉಪಕರಣಗಳನ್ನು ಉಚಿತವಾಗಿ ನೀಡಲಾಗುವುದು. ಶೇ 5ರಷ್ಟು ಬಡ್ಡಿ ದರದಲ್ಲಿ ಮೊದಲಿಗೆ ₹1 ಲಕ್ಷ ಸಾಲ ಪಡೆಯಬಹುದಾಗಿದೆ. ಮಾನದಂಡದ ಪ್ರಕಾರ ಅರ್ಹರಿದ್ದರೆ ಯಾವುದೇ ಭದ್ರತೆ ಇಲ್ಲದೆ ಗರಿಷ್ಠ ₹3 ಲಕ್ಷ ಸಾಲ ಪಡೆದುಕೊಳ್ಳಲು ಅವಕಾಶವಿದೆ.
3 ಹಂತದ ಅನುಮೋದನೆ ಅಗತ್ಯ
‘ಯೋಜನೆಯಡಿ ನೆರವು ಪಡೆದುಕೊಳ್ಳಲು ಬಹಳಷ್ಟು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಮೂರು ಹಂತದಲ್ಲಿ ಅಂದರೆ ಆಯಾ ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಪ್ರಾಧಿಕಾರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಹಾಗೂ ರಾಜ್ಯಮಟ್ಟದ ಸಮಿತಿಯ ಅನುಮೋದನೆ ದೊರೆತ ನಂತರ ಸೌಲಭ್ಯ ದೊರೆಯುವುದು ಆರಂಭವಾಗುತ್ತದೆ. ಕೆಲವೆಡೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಬದಲಾವಣೆ ಮೊದಲಾದ ಕಾರಣದಿಂದ ಲಾಗ್‌ಇನ್‌ಗೆ ತಾಂತ್ರಿಕ ತೊಂದರೆ ಎದುರಾಗುತ್ತಿದೆ. ಅದೆಲ್ಲವನ್ನೂ ನಿವಾರಿಸಲಾಗುತ್ತಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರಸ್ತುತ ಮೂರನೇ ಹಂತದ ಪರಿಶೀಲನೆ ನಂತರ 32466 ಮಂದಿಯನ್ನು ಫಲಾನುಭವಿಗಳೆಂದು ಅನುಮೋದನೆ ದೊರೆತಿದೆ. ಅವರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಎಲ್ಲವೂ ಅವರವರ ಖಾತೆಗೆ ಬರುತ್ತದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.