ADVERTISEMENT

ಸರ್ಕಾರಿ ನೌಕರರ ಕ್ರೀಡಾಕೂಟ: ಮಿಥುನ್, ಮೇಘನಾ ವೇಗದ ಸರದಾರರು

ಪಂಪಾಪತಿ, ಉದಯ್‌ಗೌಡ, ಉಮಾಗೆ ಪದಕ ಗೊಂಚಲು

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:32 IST
Last Updated 10 ಜನವರಿ 2026, 7:32 IST
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಪದಕ ಮತ್ತು ಪ್ರಮಾಣಪತ್ರ ವಿತರಿಸಿದರು  
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಪದಕ ಮತ್ತು ಪ್ರಮಾಣಪತ್ರ ವಿತರಿಸಿದರು     

ಮೈಸೂರು: ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಪಾರಮ್ಯ ಮೆರೆದ ಮಿಥುನ್‌ ಗೌಡ ಮತ್ತು ಮೇಘನಾ ವೇಗದ ಸರದಾರರಾದರು.  ಪಂಪಾಪತಿ, ಉದಯ್‌ಗೌಡ, ಎಸ್‌.ಎಂ.ಉಮಾ ಚಿನ್ನದ ಪದಕಗಳ ಗೊಂಚಲು ಪಡೆದು ಸಾಧನೆ ಮಾಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಆಯೋಜಿಸಿದ್ದ ಕೂಟದಲ್ಲಿ, ಕಂದಾಯ ಇಲಾಖೆಯ ಮಿಥುನ್‌ಗೌಡ 100 ಮೀ. ಓಟ, 4x100 ರಿಲೇಯಲ್ಲಿ ಚಿನ್ನ, ಶಿಕ್ಷಣ ಇಲಾಖೆಯ ಪಂಪಾಪತಿ ಅವರು 200 ಮೀ., 4x400 ರಿಲೇಯಲ್ಲಿ ಚಿನ್ನ, 100 ಮೀ. ಓಟದಲ್ಲಿ ಬೆಳ್ಳಿ ಗೆದ್ದರೆ, ಶಿಕ್ಷಣ ಇಲಾಖೆಯ ಉದಯ್‌ಗೌಡ 5 ಸಾವಿರ ಮತ್ತು 10 ಸಾವಿರ ಮೀ. ಓಟದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. 

ಮಹಿಳೆಯ ಮುಕ್ತ ವಿಭಾಗದ 100 ಮೀ., 200 ಮೀ. ಓಟ ಹಾಗೂ ಉದ್ದ ಜಿಗಿತದಲ್ಲಿ ಜಲಸಂಪನ್ಮೂಲ ಇಲಾಖೆಯ ವೈ.ಮೇಘನಾ, ಕಾರಗೃಹ ಇಲಾಖೆಯ ಎಸ್‌.ಎಂ.ಉಮಾ 400 ಮೀ., 800 ಮೀ. ಮತ್ತು 4x400 ರಿಲೇಯಲ್ಲಿ ಚಿನ್ನ ಗೆದ್ದರು.   

ADVERTISEMENT

ಫಿಟ್‌ನೆಟ್‌ ಕಾಯ್ದುಕೊಳ್ಳಿ: 

ವಿಜೇತರಿಗೆ ವಿಧಾನಪರಿಷತ್‌ ಸದಸ್ಯ ಕೆ.ಶಿವಕುಮಾರ್ ಪದಕ ಮತ್ತು ಪ್ರಮಾಣಪತ್ರ ವಿತರಿಸಿ ಮಾತನಾಡಿ, ‘ಸರ್ಕಾರಿ ನೌಕರರು ಉತ್ತಮ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಕ್ರೀಡಾಭ್ಯಾಸ ಮಾಡಬೇಕು. ಫಿಟ್‌ನೆಸ್‌ ಕಾಯ್ದುಕೊಳ್ಳಬೇಕು’ ಎಂದರು. 

‘ಮೈಸೂರಿನಲ್ಲಿ ನಡೆಯುವ ಮ್ಯಾರಥಾನ್ ಬೇರೆಲ್ಲೂ ನಡೆಯುವುದಿಲ್ಲ. ಮ್ಯಾರಥಾನ್‌ಗಳಲ್ಲಿ ಪ್ರತಿಯೊಬ್ಬರೂ  ಭಾಗವಹಿಸಿ. ಸಂಘದ ಕಚೇರಿಯಲ್ಲಿ ಗ್ರಂಥಾಲಯ ತೆರೆಯಿರಿ’ ಎಂದು ಸಲಹೆ ನೀಡಿದರು. 

ಸಂಘದ ಉಪಾಧ್ಯಕ್ಷ ಜೆ.ಗೋವಿಂದರಾಜು, ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿಗಳಾದ ಎಂ.ಕೆ.ಗಣೇಶ್‌, ಜಯಪ್ಪ, ಸಂಘಟನಾ ಕಾರ್ಯದರ್ಶಿ ಮಹದೇವ, ಜಂಟಿ ಕಾರ್ಯದರ್ಶಿ ಮಾಲೇಗೌಡ, ವಿಭಾಗೀಯ ಉಪಾಧ್ಯಕ್ಷ ಮಾಲಂಗಿ ಸುರೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಬಿ.ಅರುಣಕುಮಾರ, ಎಸ್‌.ರೇವಣ್ಣ, ರಘು ಪಾಲ್ಗೊಂಡಿದ್ದರು.

ಕ್ರೀಡಾಕೂಟದ ಫಲಿತಾಂಶ

ಪುರುಷರ ವಿಭಾಗ: 100 ಮೀ. ಓಟ: ಮಿಥುನ್‌ ಗೌಡ ಎಂ.ಸಿ.ಪ‍ಂಪಾಪತಿ ಎಂ.ಪಿ.ಶಶಾಂಕ್. 110 ಮೀ. ಹರ್ಡಲ್ಸ್: ರಾಮಕೃಷ್ಣ ಕುಮಾರ ಪ್ರವೀಣ್‌ ಕುಂಬಾರ್. 200 ಮೀ. ಓಟ: ಪಂಪಾಪತಿ ಶ್ರೀಕಾಂತ್ ವಿ.ಪ್ರಜ್ವಲ್. 400 ಮೀ. ಓಟ: ಸಂತೀಷ್‌ ದಿನೇಶ್‌ ಕುಮಾರ್ ಜಾಕೋಬ್‌. 800 ಮೀ. ಓಟ: ಕೆ.ಆರ್.ರಘುವೀರ್‌ ಎಚ್‌.ಕೆ.ಶಶಿಕುಮಾರ್ ಶಿವಕುಮಾರ್. 1500 ಮೀ. ಓಟ: ಶಿವಕುಮಾರ್ ಮಾದೇಶ ಕರಿಬಸಯ್ಯ. 5 ಸಾವಿರ ಮೀ. ಓಟ: ಉದಯ್‌ ಗೌಡ ಪರಶುರಾಮ್ ಎನ್.ಮಹೇಂದ್ರ. ಶಾಟ್‌ಪಟ್‌: ಭರತ್‌ ಕುಮಾರ್ ಅಯ್ಯಪ್ಪ ಪ್ರಸನ್ನಕುಮಾರ್. ಜಾವೆಲಿನ್ ಥ್ರೋ: ಪ್ರತಾಪ್ ಸೇತು ಶೇಖರ್‌ ರೇವಣಸಿದ್ಧ. 

ಮಹಿಳೆಯರ ವಿಭಾಗ: 100 ಮೀ. ಓಟ: ಮೇಘನಾ ರಾಜಶ್ರೀ ನಿಶಾ. 110 ಮೀ. ಹರ್ಡಲ್ಸ್: ಎಂ.ರಾಧಾ ರತ್ನಮ್ಮ ಆಶಾರಾಣಿ. 200 ಮೀ. ಓಟ: ವೈ.ಮೇಘನಾ ಸುಧಾ ರಾಜೇಶ್ವರಿ. 400 ಮೀ. ಓಟ: ಎಸ್‌.ಎಂ.ಉಮಾ ಮೋನಿಕಾ ನಿಶಾ. 800 ಮೀ. ಓಟ: ಉಮಾ ಕವಿತಾ ಹೇಮಲತಾ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.