
ಮೈಸೂರು: ಹನುಮ ವೇಷ ಧರಿಸಿದ ಪುಟ್ಟ ಮಕ್ಕಳ ಹರ್ಷ, ಬ್ಯಾಂಡ್, ವಾದ್ಯಗಳ ನಾದಕ್ಕೆ ಹುಚ್ಚೆದ್ದು ಕುಣಿದ ಯುವ ಸಮೂಹ. ‘ಜೈ ಹನುಮಾನ್’, ‘ಜೈ ಶ್ರೀರಾಮ್ ಘೋಷಣೆ’ಯೊಂದಿಗೆ ಮುಂದೆ ಸಾಗಿದ ಹನುಮ ಭಕ್ತರು. ಇದು ನಗರದಲ್ಲಿ ಶನಿವಾರ ಕಂಡ ಚಿತ್ರಣ..
ಹನುಮಂತೋತ್ಸವ ಸಮಿತಿಯು ಶನಿವಾರ ಆಯೋಜಿಸಿದ್ದ 7ನೇ ವರ್ಷದ ಹನುಮ ಹಬ್ಬದ ಮೆರವಣಿಗೆಯಲ್ಲಿ ಎಲ್ಲೆಡೆ ನಾಮ ಸ್ಮರಣೆ ಮಾರ್ದನಿಸಿತು. ಹಬ್ಬ ವಿಜೃಂಭಣೆಯಿಂದ ನಡೆಯಿತು.
ಕೇಸರಿ ಶಾಲು ಧರಿಸಿದ ಪುಟಾಣಿ ಮಕ್ಕಳು ರಾಮ ಹಾಗೂ ಹನುಮನ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಹಿರಿಯರು ಕೇಸರಿ ಪೇಟ ತೊಟ್ಟು ಹೆಜ್ಜೆ ಹಾಕಿದರು.
ಕಂಸಾಳೆ, ನಂದಿಧ್ವಜ, ವೀರಗಾಸೆ ಕುಣಿತವು ಮೈನವಿರೇಳಿಸಿತು. ಸಿಂಗಾರಗೊಂಡ ಹಳ್ಳಿಕಾರ್ ಹೋರಿಗಳ ನಡಿಗೆಯ ವೈಯಾರ ನೋಡುಗರನ್ನು ಸೆಳೆಯಿತು. ಹನುಮಂತನ ವಿವಿಧ ಭಂಗಿಯುಳ್ಳ ಸ್ತಬ್ಧಚಿತ್ರಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಕಲಾತಂಡಗಳ ಆಕರ್ಷಕ ನೃತ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನ ಮೊಬೈಲ್‌ಗಳಲ್ಲಿ ಸೆರೆಹಿಡಿದರು. ಕೇಸರಿ ಧ್ವಜ ಹಿಡಿದ ಯುವಕರು ಅವುಗಳನ್ನು ಗಿರ ಗಿರನೆ ತಿರುಗಿಸಿ, ಘೋಷಣೆಗಳನ್ನು ಕೂಗಿದರು. ವಿದೇಶಿಗರೂ ಈ ಸಂಭ್ರಮವನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯಗಳು ಕಂಡುಬಂತು.
ಮೆರವಣಿಗೆಯ ನಡುವೆ ಸಿಡಿಯುತ್ತಿದ್ದ ಬಣ್ಣ, ಬಣ್ಣದ ಕಾಗದದ ಚೂರುಗಳು ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದಂತೆ ಯುವಕರು ಹುಚ್ಚೆದ್ದು ಕುಣಿದರು. ರಾಮ, ಲಕ್ಷ್ಮಣ, ಸೀತೆ, ಹನುಮನ ವಿಗ್ರಹಗಳನ್ನು ವಿಧ, ವಿಧವಾದ ಹೂವಿನಿಂದ ಅಲಂಕರಿಸಲಾಗಿತ್ತು. ಅವುಗಳನ್ನು ಹೊತ್ತ ವಾಹನವು ಸಾಗುತ್ತಿದ್ದಂತೆ ಹನುಮ ಭಕ್ತರೂ ಅದರ ಹಿಂದೆ ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ಅನೇಕರು ವಿಶೇಷ ಪೂಜೆ ಸಲ್ಲಿಸಿದರು.
ಕೋಟೆ ಆಂಜನೇಯ ದೇವಾಲಯದ ಆವರಣದಿಂದ ಆರಂಭಗೊಂಡ ಮೆರವಣಿಗೆಯು ದೊಡ್ಡಗಡಿಯಾರ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಚಾಮರಾಜ ಜೋಡಿ ರಸ್ತೆಯ ಮೂಲಕ ಸಾಗಿ ಗನ್‌ಹೌಸ್ ವೃತ್ತದಲ್ಲಿ ಸಮಾಪನಗೊಂಡಿತು.
ಪೊಲೀಸ್ ಕಟ್ಟೆಚ್ಚರ
ಹನುಮ ಮೆರವಣಿಗೆಗೆ ಪೊಲೀಸ್ ಇಲಾಖೆಯು ಕಟ್ಟೆಚ್ಚರ ವಹಿಸಿತ್ತು. ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಮೆರವಣಿಗೆಗೆ ಚಾಲನೆ
ಶಾಸಕ ಜಿ.ಟಿ.ದೇವೇಗೌಡ ಅವರು ರಾಮ ಲಕ್ಷ್ಮಣ ಸೀತೆ ಹನುಮಂತನ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆರನೇ ವರ್ಷದ ಹನುಮ ಹಬ್ಬದ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ‘ಪ್ರತಿ ವರ್ಷ ನಗರದಲ್ಲಿ ಹನುಮ ಭಕ್ತರು ವಿಜೃಂಭಣೆಯಿಂದ ಹಬ್ಬ ಆಚರಿಸುತ್ತಿದ್ದಾರೆ. ಹನುಮನ ಅಪರಿಮಿತ ಭಕ್ತಿ ಹಾಗೂ ಆದರ್ಶವನ್ನು ಅಳವಡಿಸಿಕೊಳ್ಳೋಣ’ ಎಂದು ಸಲಹೆ ನೀಡಿದರು. ಶಾಸಕರಾದ ಜಿ.ಡಿ.ಹರೀಶ್ ಗೌಡ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಮಾಜಿ ಸಂಸದ ಪ್ರತಾಪ ಸಿಂಹ ಆರ್‌ಎಸ್‌ಎಸ್ ಮುಖಂಡ ಕೇಶವ್ ಮೂರ್ತಿ ಶ್ರೀರಾಮ ಸೇನೆಯ ಸಂಜಯ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.