ADVERTISEMENT

ಎಚ್.ಡಿ.ಕೋಟೆ: ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ

ಮಾನವ ಸರಪಳಿ ರಚನೆ, ಟನ್‌ಗೆ ₹3,500 ಬೆಲೆ ನಿಗದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 8:10 IST
Last Updated 7 ನವೆಂಬರ್ 2025, 8:10 IST
ಎಚ್.ಡಿ.ಕೋಟೆ ಪಟ್ಟಣದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಎಚ್.ಡಿ.ಕೋಟೆ ಪಟ್ಟಣದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.   

ಎಚ್.ಡಿ.ಕೋಟೆ: ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಪಟ್ಟಣದಲ್ಲಿ ಗುರುವಾರ ರಾಜ್ಯ ರೈತಸಂಘ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹಳೆ ತಾಲ್ಲೂಕು ಕಚೇರಿ ಆವರಣದಿಂದ ಹೊರಟ ಪ್ರತಿಭಟನಾಕಾರರು ಬಾಪೂಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಬ್ವಿಗೆ ಟನ್‌ಗೆ ₹3,500 ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಲಕ್ಷಾಂತರ ರೈತರು ಬೀದಿಗಿಳಿದು ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಅಹೋರಾತ್ರಿ ಹೋರಾಟ ಮಾಡುತ್ತಿದ್ದು,  ಪ್ರತಿಭಟನೆಗೆ ರಾಜ್ಯ ಅಥವಾ ಕೇಂದ್ರ ಸರ್ಕಾರವಾಗಲಿ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯಮಾಡಿರುವುದು, ರೈತ ವಿರೋಧಿ ನೀತಿಯಾಗಿದೆ’ ಎಂದರು.

ADVERTISEMENT

‘ಕೃಷಿಗೆ ಸಂಭಂದಿಸಿದಂತೆ ರಸಗೊಬ್ಬರ, ಯಂತ್ರೋಪಕರಣಗಳು ಹಾಗೂ ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲಾ ಬೆಲೆಗಳು ಹೆಚ್ಚಾಗುತ್ತಿದೆ, ಕೃಷಿ ಉತ್ಪನ್ನಗಳ ಬೆಲೆ ಮಾತ್ರ ಹೆಚ್ಚಾಗುತ್ತಿಲ್ಲ’ ಎಂದರು.

‘ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳನ್ನು ಸರ್ಕಾರ ವಿಶೇಷ ಪ್ರಕರಣದಡಿ ದುರಸ್ತಿ ಮತ್ತು ಪೋಡಿಗಳನ್ನು ತುರ್ತಾಗಿ ಕೈಗೆತ್ತಿಕೊಂಡು ಪೋಡಿ ಮುಕ್ತ ತಾಲ್ಲೂಕುಗಳನ್ನಾಗಿ ಮಾಡಬೇಕು, ವನ್ಯಜೀವಿ–ಮಾನವ ಸಂಘರ್ಷವನ್ನು ತಪ್ಪಿಸಬೇಕು. ಆನೆ, ಹುಲಿ ಹಾವಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನಿಗದಿಯಾಗಬೇಕು. ಗಾಯಾಳುಗಳಿಗೆ ಸಂಪೂರ್ಣ ಚಿಕಿತ್ಸೆ ಮತ್ತು ಸೂಕ್ತ ಪರಿಹಾರ ದೊರಕಿಸಬೇಕು’ ಎಂದರು.

ರೈತಸಂಘದ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮರಂಕಯ್ಯ, ಪುಟ್ಟಣ್ಣಯ್ಯ, ಪಳನಿ ಸ್ವಾಮಿ, ಸಿಂಗೇಗೌಡ, ಶಿವಲಿಂಗಪ್ಪ, ಮಹಾಲಿಂಗು, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜೆ.ಪಿ.ನಾಗರಾಜು, ಭೀಮನಹಳ್ಳಿ ಸೋಮೇಶ್, ಹೈರಿಗೆ ಶಿವರಾಜ್, ಚಾ.ನಂಜುಂಡ ಮೂರ್ತಿ, ಬೀರಂಬಳ್ಳಿ ಪ್ರಭಾಕರ್, ರೈತಸಂಘ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಜಕ್ಕಹಳ್ಳಿ ರವಿಕುಮಾ‌ರ್, ಅಧ್ಯಕ್ಷ ಮಹದೇವ ನಾಯಕ, ವಡ್ಡರಗುಡಿ ಬಸವರಾಜು, ಮಿಲ್ ನಾಗರಾಜು ಇದ್ದರು.

ಬಹಳ ವರ್ಷಗಳಿಂದಲೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಬಾರದು.
– ಬಡಗಲಪುರ ನಾಗೇಂದ್ರ, ರೈತ ಸಂಘದ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.